

ಥೈಲ್ಯಾಂಡ್: ಒಂಟಿ ಪೋಷಕರು ಎದುರಿಸುವ ಸವಾಲುಗಳ ಬಗ್ಗೆ ನಾವು ಆಗಾಗ್ಗೆ ಕೇಳುತ್ತೇವೆ. ತಾಯಿ ಮತ್ತು ತಂದೆಯಾಗಿ ನಿರ್ವಹಿಸಬೇಕಾದ ಕರ್ತವ್ಯ ಸಾಕಷ್ಟಿದೆ. ಒಂಟಿ ಅಪ್ಪಂದಿರು ಸಾಮಾನ್ಯವಾಗಿ ಅಮ್ಮಂದಿರಿಗೆ ಸಂಬಂಧಿಸಿದ ಕಾರ್ಯಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ಒಂಟಿ ಅಮ್ಮಂದಿರು ಅಪ್ಪಂದಿರಿಗೆ ಸಂಬಂಧಿಸಿದ ಜವಾಬ್ದಾರಿಗಳನ್ನು ನಿಭಾಯಿಸುತ್ತಾರೆ. ಈಗ ಥೈಲ್ಯಾಂಡ್ನಲ್ಲಿ ನಡೆದ ಇಂತಹದ್ದೆ ಒಂದು ಘಟನೆ ಹೃದಯಸ್ಪರ್ಶಿ ಕಥೆಯಾಗಿ ಹೊರಹೊಮ್ಮಿದೆ.
ವ್ಯಕ್ತಿಯೊಬ್ಬ ತನ್ನ ದತ್ತು ಮಗಳ ಮೇಲಿಟ್ಟಿರುವ ಪ್ರೀತಿಯು ಸಾಂಪ್ರದಾಯಿಕ ಗಡಿಗಳನ್ನು ಮೀರುವಂತೆ ಮಾಡಿತು. 'ತಾಯಂದಿರ ದಿನ’ ದಂದು ತನ್ನ ಮಗಳನ್ನು ಸಂತೈಸುವ ಸಲುವಾಗಿ ತಾಯಿಯಂತೆ ಡ್ರೆಸ್ ಮಾಡಿ ಶಾಲೆಗೆ ಬಂದಿದ್ದಾರೆ. ಸದ್ಯ ತಂದೆ ಹಾಗೂ ಮಗಳ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಮಹಿಳೆಯ ಉಡುಗೆಯನ್ನು ಧರಿಸಲು ನಿರ್ಧರಿಸಿದರು ಮತ್ತು ಅವರ ಶಾಲೆಯಲ್ಲಿ ತಾಯಂದಿರ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಮಗಳನ್ನು ಅಚ್ಚರಿಗೊಳಿಸಿದರು. ಮಹಿಳೆಯಂತೆ ಕಾಣಿಸಿಕೊಳ್ಳಲು ಬಟ್ಟೆ, ಉದ್ದನೆಯ ಕೂದಲು ಹಾಗೂ ವಿಗ್ ಧರಿಸಿದ್ದರು. ಶಾಲೆಗೆ ಬಂದ ತದೀಬು, ತನ್ನ ಮಗಳ ಪಕ್ಕ ಬಂದು ಕುಳಿತಿದ್ದಾರೆ. ಈ ವೇಳೆ ತಂದೆಯನ್ನು ಕಂಡು ಅಚ್ಚರಿಗೊಳಗಾದ ಮಗಳು ಕಾಲಿಗೆ ಬಿದ್ದು, ಅಪ್ಪನನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾಳೆ. ಈ ವೀಡಿಯೋ ನೋಡಿದ ನೆಟ್ಟಿಗರು ತಂದ ಹಾಗೂ ಮಗಳ ಪ್ರೀತಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಒಂಟಿ ತಂದೆ, ದತ್ತು ಪಡೆದ ಮಗಳಿಗೆ ಅವರು ತಮ್ಮ ಮಗಳ ಜೀವನದಲ್ಲಿ ಹೀರೋ ಮಾತ್ರವಲ್ಲ, ಪೋಷಕರಿಗೆ ಉತ್ತಮ ಉದಾಹರಣೆ. ಇಂತಹ ಜನರು ನಮಗೆ ಮಾನವೀಯತೆ ಏನು ಎಂದು ನೆನಪಿಸುತ್ತಾರೆ ” ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.