ಬಾಲಕಿಯರ ಶಾಲೆಯಲ್ಲಿ ಅಪ್​ಸ್ಕರ್ಟ್​ ವಿಡಿಯೋ ಚಿತ್ರೀಕರಿಸಿ ಸಿಕ್ಕಿಬಿದ್ದ ಶಿಕ್ಷಕ

upskirt
Published on

ನವದೆಹಲಿ: ಆತ ಬಾಲಕಿಯರ ಶಾಲೆಯಲ್ಲಿ ಮೂರು ವರ್ಷಗಳಿಂದ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಅಲ್ಲಿ ಪಾಠ ಮಾಡಿಕೊಂಡು, ಮಕ್ಕಳ ಭವಿಷ್ಯ ರೂಪಿಸಬೇಕಾಗಿದ್ದ 47 ವರ್ಷದ ಈ ಶಿಕ್ಷಕ, ತನ್ನ ಶಿಷ್ಯೆಯರ ಅಪ್​ಸ್ಕರ್ಟ್​ (ಮಹಿಳೆಯರಿಗೆ ಗೊತ್ತಾಗದಂತೆ ಸ್ಕರ್ಟ್​ನ ಕೆಳಭಾಗದಿಂದ ವಿಡಿಯೋ ಚಿತ್ರೀಕರಿಸುವುದು) ವಿಡಿಯೋಗಳನ್ನು ಚಿತ್ರೀಕರಿಸಿಕೊಂಡು ವಿಕೃತಾನಂದ ಅನುಭವಿಸುತ್ತಿದ್ದ.

ಶಿಷ್ಯೆಯರದಷ್ಟೇ ಅಲ್ಲ, ತನ್ನ ಮಹಿಳಾ ಸಹೋದ್ಯೋಗಿಗಳ ಅಪ್​ಸ್ಕರ್ಟ್​ ವಿಡಿಯೋಗಳನ್ನು ಈತ ಚಿತ್ರೀಕರಿಸಿಕೊಂಡಿದ್ದ ಎನ್ನಲಾಗಿದೆ. ಇದೀಗ ಸಿಕ್ಕಿಬಿದ್ದಿರುವ ಈತನ ಮೊಬೈಲ್​ನಲ್ಲಿ 160 ಅಪ್​ಸ್ಕರ್ಟ್​ ವಿಡಿಯೋಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮಹಿಳೆಯರ ಗೌರವಕ್ಕೆ ಧಕ್ಕೆಯುಂಟು ಮಾಡಿದ ಹಾಗೂ ಅಶ್ಲೀಲ ವಿಡಿಯೋ ತುಣುಕುಗಳನ್ನು ಹೊಂದಿದ್ದ ಆರೋಪದಲ್ಲಿ ಈತನೀಗ ಜೈಲಿನ ಕಂಬಿ ಎಣಿಸಲು ಸಜ್ಜಾಗುತ್ತಿದ್ದಾನೆ.

ಇದು ದೂರದ ಸಿಂಗಾಪುರದಲ್ಲಿ ನಡೆದಿರುವ ಘಟನೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈತ ವಿಡಿಯೋ ಚಿತ್ರೀಕರಿಸಿಕೊಂಡಿರುವ ಮಕ್ಕಳ ಹೆಸರನ್ನಾಗಲಿ ಅಥವಾ ಶಾಲೆಯ ಹೆಸರನ್ನಾಗಲಿ ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಆದರೆ ಈತ ಆ ಶಾಲೆಯಲ್ಲಿ 2015ರಿಂದ 2018ರ ಅವಧಿಯಲ್ಲಿ ಈ ಕೃತ್ಯ ಎಸಗಿದ್ದಾನೆ. ಬಾಲಕಿಯರು ಮತ್ತು ಮಹಿಳೆಯರು ಸೇರಿ ಒಟ್ಟು 69 ಜನರ ಅಪ್​ಸ್ಕರ್ಟ್​ ವಿಡಿಯೋಗಳನ್ನು ಈತ ಚಿತ್ರೀಕರಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಲೆಯಲ್ಲಿ ಮಾತ್ರವಲ್ಲ. ತನ್ನ ಮನೆಗೆ ಬಂದಿದ್ದ ಸಂಬಂಧಿಕ ಮಹಿಳೆಯೊಬ್ಬರ ಅಪ್​ಸ್ಕರ್ಟ್​ ವಿಡಿಯೋವನ್ನೂ ಈತ ಚಿತ್ರೀಕರಿಸಿಕೊಂಡಿದ್ದ ಎಂದು ಹೇಳಿದ್ದಾರೆ. ಇದೀಗ ನ್ಯಾಯಾಲಯದಲ್ಲಿ ಈತನ ವಿರುದ್ಧ ವಿಚಾರಣೆ ನಡೆಯುತ್ತಿದೆ. ಈತನ ತಪ್ಪು ಸಾಬೀತಾದಲ್ಲಿ ಒಂದು ವರ್ಷ ಜೈಲುಶಿಕ್ಷೆಗೆ ಗುರಿಪಡಿಸಲಾಗುವುದು. ಜತೆಗೆ ಜುಲ್ಮಾನೆಯನ್ನೂ ವಿಧಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net