

ನವದೆಹಲಿ: ಭಯೋತ್ಪಾದನೆ ವಿರುದ್ಧದ ಜಾಗತಿಕ ಹೋರಾಟಕ್ಕೆ ‘ಆಪರೇಷನ್ ಸಿಂಧೂರ’ ಹೊಸ ಭರವಸೆ ಮೂಡಿಸಿದ್ದಲ್ಲದೆ, ಉತ್ಸಾಹವನ್ನೂ ಉಂಟಾಗಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಭಾನುವಾರ ‘ಮನ್ ಕಿ ಬಾತ್’ನ 122ನೇ ಸಂಚಿಕೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ‘ಆಪರೇಷನ್ ಸಿಂಧೂರ’ ಕುರಿತ ಅನಿಸಿಕೆ-ಅಭಿಪ್ರಾಯಗಳನ್ನು ಹಂಚಿಕೊಂಡರು.
ಇಂದು ಭಯೋತ್ಪಾದನೆ ವಿರುದ್ಧ ಇಡೀ ದೇಶವೇ ಆಕ್ರೋಶ ಹೊಂದಿದ್ದು, ದೃಢನಿಶ್ಚಯ ತಳೆದು ಒಗ್ಗೂಡಿ ನಿಂತಿದೆ. ಭಯೋತ್ಪಾದನೆ ಕೊನೆಗೊಳಿಸಲೇಬೇಕು ಎಂಬುದು ಪ್ರತಿ ಭಾರತೀಯನ ಸಂಕಲ್ಪವಾಗಿದೆ. ಹೀಗಾಗಿ ‘ಆಪರೇಷನ್ ಸಿಂಧೂರ’ ವೇಳೆ ನಮ್ಮ ಸೇನಾ ಪಡೆಗಳು ಪ್ರದರ್ಶಿಸಿದ ಶೌರ್ಯ ಪ್ರತಿ ಭಾರತೀಯನೂ ಹೆಮ್ಮೆಪಡುವಂತೆ ಮಾಡಿದೆ. ಗಡಿಯಾಚೆಗಿನ ಭಯೋತ್ಪಾದಕ ಅಡಗುದಾಣಗಳನ್ನು ನಮ್ಮ ಪಡೆಗಳು ನಿಖರತೆಯಿಂದ ಕರಾರುವಾಕ್ಕಾಗಿ ನಾಶಪಡಿಸಿರುವುದು ಅದ್ಭುತವಾಗಿದೆ ಎಂದ ಅವರು, ‘ಆಪರೇಷನ್ ಸಿಂಧೂರ’ ಭಯೋತ್ಪಾದನೆ ವಿರುದ್ಧದ ಜಾಗತಿಕ ಹೋರಾಟಕ್ಕೆ ಹೊಸ ಭರವಸೆ-ಉತ್ಸಾಹ ತುಂಬಿದೆ ಎಂದು ಅಭಿಪ್ರಾಯಪಟ್ಟರು.
‘ಆಪರೇಷನ್ ಸಿಂಧೂರ’ ಬರೀ ಸೇನಾ ಕಾರ್ಯåಚರಣೆಯಲ್ಲ, ಇದು ನಮ್ಮ ದೃಢನಿಶ್ಚಯ, ಧೈರ್ಯ ಮತ್ತು ಬದಲಾಗುತ್ತಿರುವ ಭಾರತದ ಚಿತ್ರಣವಾಗಿದೆ. ಈ ಚಿತ್ರಣ ಇಡೀ ದೇಶದಲ್ಲಿ ದೇಶಭಕ್ತಿಯ ಭಾವನೆ ತುಂಬಿದೆ. ದೇಶದ ವಿವಿಧ ನಗರಗಳು, ಪಟ್ಟಣ, ಗ್ರಾಮಗಳಲ್ಲಿ ತ್ರಿವರ್ಣ ಧ್ವಜ ಯಾತ್ರೆ ನೀವು ನೋಡಿರಬಹುದು. ಸಾವಿರಾರು ಜನರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ದೇಶದ ಸೇನೆಗೆ ಗೌರವ ಸಲ್ಲಿಸಲು ಮುಂದೆ ಬಂದರು. ಅನೇಕ ನಗರಗಳಲ್ಲಿ, ಹೆಚ್ಚಿನ ಸಂಖ್ಯೆಯ ಯುವಕರು ನಾಗರಿಕ ರಕ್ಷಣಾ ಸ್ವಯಂಸೇವಕರಾಗಲು ಒಗ್ಗೂಡಿದರು ಮತ್ತು ಚಂಡೀಗಢದ ವೀಡಿಯೊಗಳು ಸಾಕಷ್ಟು ವೈರಲ್ ಆಯಿತು ಎಂದರು.
ಧ್ವಂಸಗೊಂಡ ಶಿಬಿರಗಳ ಚಿತ್ರಣ: ಆಪರೇಷನ್ ಸಿಂಧೂರ ಮೂಲಕ ನಾಶಪಡಿಸಲಾದ ಭಯೋತ್ಪಾದಕ ನೆಲೆಗಳನ್ನೂ ಪ್ರಧಾನಿ ಮೋದಿ ಮನ್ ಕಿ ಬಾತ್ನಲ್ಲಿ ತೋರಿಸಿದರು. ಧ್ವಂಸ ಗೊಳಿಸಲಾದ ಭಿಂಬರ್ನ ಬರ್ನಾಲಾ, ಕೋಟ್ಲಿಯ ಅಬ್ಬಾಸ್ ಮತ್ತು ಗುಲ್ಪುರ್ ಕ್ಯಾಂಪ್ಗಳ ಚಿತ್ರಗಳನ್ನು ಪ್ರದರ್ಶಿಸಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ಕವಿತೆ, ದೇಶಭಕ್ತಿ ಗೀತೆಗಳು ಕಂಡುಬರುತ್ತಿದ್ದು, ಪುಟ್ಟ ಮಕ್ಕಳು ಕೂಡ ಅಗಾಧ ಸಂದೇಶಗಳ ಚಿತ್ರಗಳನ್ನು ಬಿಡಿಸಿದ್ದಾರೆ. ನಾನು ಮೂರು ದಿನಗಳ ಹಿಂದೆಯಷ್ಟೇ ಬಿಕಾನೇರ್ಗೆ ಹೋಗಿದ್ದೆ. ಅಲ್ಲಿನ ಮಕ್ಕಳು ನನಗೆ ಅಂಥ ವರ್ಣಚಿತ್ರ ಉಡುಗೊರೆಯಾಗಿ ನೀಡಿದ್ದರು. ‘ಆಪರೇಷನ್ ಸಿಂಧೂರ’ ದೇಶದ ಜನರ ಮೇಲೆ ಅದೆಷ್ಟು ಪ್ರಭಾವ ಬೀರಿದೆ ಎಂದರೆ, ಅನೇಕ ಕುಟುಂಬಗಳು ಅದನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಂಡಿವೆ. ಬಿಹಾರದ ಕಟಿಹಾರ್, ಉತ್ತರಪ್ರದೇಶದ ಕುಶಿನಗರ ಮತ್ತಿತರೆಡೆ ಜನಿಸಿದ ಮಕ್ಕಳಿಗೆ ‘ಸಿಂಧೂರ’ ಎಂದು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದರು.
ನಮ್ಮ ಸೈನಿಕರು ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದರು. ಅದು ಅವರ ಅದಮ್ಯ ಸಾಹಸವಾಗಿತ್ತು ಮತ್ತು ಅದರಲ್ಲಿ ಭಾರತದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳು, ಉಪಕರಣಗಳು ಹಾಗೂ ತಂತ್ರಜ್ಞಾನಗಳ ಶಕ್ತಿ, ಸ್ವಾವಲಂಬಿ ಭಾರತದ ಸಂಕಲ್ಪವೂ ಇತ್ತು. ಈ ಗೆಲುವಿನಲ್ಲಿ ನಮ್ಮ ಇಂಜಿನಿಯರ್ಗಳು, ತಂತ್ರಜ್ಞರು ಸೇರಿದಂತೆ ಎಲ್ಲರ ಶ್ರಮವೂ ಇದೆ. ಈ ಅಭಿಯಾನದ ನಂತರ ‘ವೋಕಲ್ ಫಾರ್ ಲೋಕಲ್’ ಕುರಿತು ದೇಶಾದ್ಯಂತ ಹೊಸ ಆಶಾಕಿರಣ ಮೂಡಿದೆ ಎಂದರು.
ಪಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಪಾಕ್ ಭಯೋತ್ಪಾದನೆ ಕುರಿತು ಜಾಗತಿಕಮಟ್ಟದಲ್ಲಿ ಭಾರತದ ನಿಲುವನ್ನು ಖಚಿತಪಡಿಸಲು ತೆರಳಿರುವ ಸರ್ವಪಕ್ಷ ನಿಯೋಗ ಅಮೆರಿಕ ತಲುಪಿದ್ದು, ನಿಯೋಗದಲ್ಲಿನ ಕಾಂಗ್ರೆಸ್ ಸಂಸದ ಶಶಿ ತರೂರ್ ನ್ಯೂಯಾರ್ಕ್ನಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಶನಿವಾರ(ಸ್ಥಳೀಯ ಸಮಯ) ಮಾತನಾಡಿದರು. ಈ ಸಂದರ್ಭದಲ್ಲಿ ಪಹಲ್ಗಾಮ್ ದಾಳಿಗೆ ಸಂಬಂಧಿಸಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಸರ್ಕಾರಕ್ಕಾಗಿ ಕೆಲಸ ಮಾಡಬೇಡಿ, ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ಜಗತ್ತು ಒಟ್ಟಾಗಿ ಬರಬೇಕು’ ಎಂದು ಕರೆ ನೀಡಿದರು.