

ಶಿವಮೊಗ್ಗ: ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ನಗರದ ಟಿಎಸ್‌ಆರ್ ರಸ್ತೆ ನಿವಾಸಿ, ಯೋಧ ವಿಜಯ್‌ಕುಮಾರ್ ಸೋಮವಾರ ಶಿವಮೊಗ್ಗಕ್ಕೆ ಆಗಮಿಸಿದ್ದು, ರೈಲ್ವೆ ನಿಲ್ದಾಣದಲ್ಲಿ ಎನ್‌ಎಸ್‌ಯುಐ ಪ್ರಮುಖರು ಆತ್ಮೀಯವಾಗಿ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ವಿಜಯಕುಮಾರ್, ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ದೇಶಕ್ಕಾಗಿ ಯಾವುದೇ ತ್ಯಾಗಕ್ಕೂ ಯೋಧರು ಸಿದ್ಧರಾಗಿಯೇ ಇರುತ್ತಾರೆ. ಪ್ರತಿ ಯೋಧನೂ ಸೇನಾ ಸಮವಸ್ತ್ರ ಧರಿಸಿದಾಗಲೇ ತ್ಯಾಗದ ನಿರ್ಧಾರ ಮಾಡಿರುತ್ತಾನೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್, ಬ್ಲಾಕ್ ಅಧ್ಯಕ್ಷ ಶಿವಕುಮಾರ್, ಯುವ ಕಾಂಗ್ರೆಸ್ ಮುಖಂಡರಾದ ಸಿ.ಜಿ.ಮಧುಸೂದನ್, ಕೆ.ಚೇತನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ ಇತರರಿದ್ದರು.
2002ರ ಸೆ.12ರಂದು ಸೇನೆಗೆ ಸೇರಿದ್ದ ವಿಜಯ್‌ಕುಮಾರ್, ಇದುವರೆಗೆ ಆರು ಸರ್ವೀಸ್ ಮೆಡಲ್‌ಗಳನ್ನು ಪಡೆದಿದ್ದಾರೆ. ಪ್ರಸ್ತುತ ಭಾರತೀಯ ಸೇನೆಯ ಇಎಂಇ ಕಾರ್ಪ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ನಿವೃತ್ತರಾಗಲಿದ್ದಾರೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಜಮ್ಮುವಿನ ಕಥುವಾ ಸೆಕ್ಟರ್ ಪಾಕಿಸ್ತಾನದ ಪ್ರಮುಖ ಗುರಿಗಳಲ್ಲಿ ಒಂದಾಗಿತ್ತು. ಪಾಕಿಸ್ತಾನ ಗಡಿಯಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಈ ಸೆಕ್ಟರ್‌ಗೆ ಪಾಕಿಸ್ತಾನವು ರಾತ್ರಿ ಹೊತ್ತು ಡ್ರೋನ್‌ಗಳ ಮೂಲಕ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ವಿಜಯ್‌ಕುಮಾರ್ ಅವರು ಸೆಕ್ಟರ್‌ನ ಭದ್ರತಾ ವ್ಯವಸ್ಥೆ ಮತ್ತು ಪಾಕ್ ಡ್ರೋನ್‌ಗಳ ಮೇಲೆ ಕಣ್ಗಾವಲು ಇಡುವ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.