

ಶಿವಮೊಗ್ಗ: ವಾಸವಿ ಮಹಿಳಾ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಜೂ.11 ಮತ್ತು 12ರಂದು ಸಿಂಧೂರ ಭಜನಾರ್ಚನೆ ಶೀರ್ಷಿಕೆಯಡಿ ಅಖಂಡ ಭಜನಾ ಕಾರ್ಯಕ್ರಮವನ್ನು ಗಾಂಧಿ ಬಜಾರ್ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷೆ ಪ್ರತಿಭಾ ಅರುಣ್ ತಿಳಿಸಿದರು.
11ರಂದು ಸಂಜೆ 6ಕ್ಕೆ ಆರಂಭವಾಗುವ ಭಜನೆ ಮರುದಿನ ರಾತ್ರಿ 8ಕ್ಕೆ ಮುಕ್ತಾಯವಾಗಲಿದೆ. ಶಿವಮೊಗ್ಗದ 24 ಭಜನಾ ತಂಡಗಳು ಭಾಗವಹಿಸಲಿವೆ. ಈ ಸಂದರ್ಭ ಲಲಿತಾ ಸಹಸ್ರನಾಮ ಪಠಣ, ದೇವಿಯ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ. ಎರಡು ದಿನವೂ ದೇವಿಗೆ ಬಂಗಾರದ ಸೀರೆ ಉಡಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಭಜನಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಾಸವಿ ಸಂಘದ ಅಧ್ಯಕ್ಷ ಭೂಪಾಳಂ ಶಶಿಧರ್, ಪ್ರಮುಖರಾದ ಅಶ್ವತ್ಥನಾರಾಯಣ ಶೆಟ್ಟಿ ಮತ್ತಿತರರು ಭಾಗವಹಿಸುವರು ಎಂದರು.
ವಾಸವಿ ಮಹಿಳಾ ಸಂಘವು 1976ರಲ್ಲಿ ಆರಂಭವಾಯಿತು. ಸಮಾಜಮುಖಿ ಕೆಲಸದ ಜತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದೀಗ ದೇಶದ ಸೈನಿಕರಿಗೆ ಬಲತುಂಬುವ ಸಲುವಾಗಿ ಮತ್ತು ಆಪರೇಶನ್ ಸಿಂಧೂರದ ವಿಜಯದ ಸಂಭ್ರಮಕ್ಕಾಗಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.
ಮಹಿಳಾ ಸಂಘದ ಪದಾಧಿಕಾರಿಗಳಾದ ಕವಿತಾ ಸಂತೋಷ್, ರಾಧಿಕಾ ಮಾಲತೇಶ್, ನಮ್ರತಾ ಪ್ರಶಾಂತ್, ಅನಿತಾ ರಘು, ವಿಜಯಾ ದತ್ತಕುಮಾರ್, ಸುಷ್ಮಾ ಅರವಿಂದ್, ಗೀತಾ, ಸುಮಾ ನಟರಾಜ್ ಸುದ್ದಿಗೋಷ್ಠಿಯಲ್ಲಿದ್ದರು.