ಸಿಂಧುತ್ವ ಪ್ರಮಾಣ ಪತ್ರ, ಅನಾವಶ್ಯಕ ತೊಂದರೆ ಬೇಡ; ಸಿಎಂ ಸಿದ್ದರಾಮಯ್ಯ ಸೂಚನೆ

Siddaramaiah
Published on

ಬೆಂಗಳೂರು: ರಾಜ್ಯ ನಾಗರಿಕ ಸೇವಾ ಹುದ್ದೆಗಳ ಆಯ್ಕೆಯಲ್ಲಿ ಮೀಸಲಾತಿಯ ರಿಯಾಯಿತಿ ಪಡೆಯದೆ ಸಾಮಾನ್ಯ ವರ್ಗದ ಹುದ್ದೆಗಳಿಗೆ ಎದುರಾಗಿ ಆಯ್ಕೆಗೊಂಡ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಸಿಂಧುತ್ವ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸದಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಈ ಕುರಿತು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಸೂಕ್ತ ನಿರ್ದೇಶನ ನೀಡಿರುವ ಅವರು, ಕರ್ನಾಟಕ ಅನಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಗಳು ಮುಂತಾದವುಗಳ ಮೀಸಲಾತಿ) (ತಿದ್ದುಪಡಿ) ನಿಯಮಗಳು, 1992 ರ ಅನ್ವಯ ರಾಜ್ಯ ನಾಗರಿಕ ಸೇವಾ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆಗೊಳ್ಳುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಅಂತಿಮ ಆಯ್ಕೆಪಟ್ಟಿಯಲ್ಲಿ, ವಿವಿಧ ಮೀಸಲಾತಿಯಡಿ ಆಯ್ಕೆ ಹೊಂದುವ ಹಾಗೂ ಸದರಿ ಮೀಸಲಾತಿಯಿಂದ ರಿಯಾಯತಿ ಪಡೆಯುವ ಅಭ್ಯರ್ಥಿಗಳು ಸಲ್ಲಿಸಿರುವ ಪ್ರಮಾಣ ಪತ್ರಗಳು ಸಿಂಧುವೇ ಎಂಬ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆಯಬೇಕಾಗುತ್ತದೆ.

ಆದರೆ ಮೀಸಲಾತಿ ಕೋರಿ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅಂತಿಮ ಆಯ್ಕೆ ಪಟ್ಟಿಯಲ್ಲಿ ಸಾಮಾನ್ಯ ವರ್ಗದ ಹುದ್ದೆಗಳಿಗೆ ಎದುರಾಗಿ ಆಯ್ಕೆಗೊಂಡಾಗಲೂ ಸಿಂಧುತ್ವ ಪ್ರಮಾಣ ಪತ್ರ ಸಲ್ಲಿಸುವಂತೆ ಕೆಲವು ನೇಮಕಾತಿ ಪ್ರಾಧಿಕಾರಿಗಳು ಅಭ್ಯರ್ಥಿಗಳಿಗೆ ಸೂಚಿಸುತ್ತಿವೆ. ಇದರಿಂದ ಅಂತಿಮ ಆಯ್ಕೆಪಟ್ಟೆಯಲ್ಲಿ ಮೆರಿಟ್ ಆಧಾರದಲ್ಲಿ ಸಾಮಾನ್ಯ ವರ್ಗದ ಹುದ್ದೆಗಳಿಗೆ ಎದುರಾಗಿ ಆಯ್ಕೆಯಾದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅನಾವಶ್ಯಕ ತೊಂದರೆಯಾಗುತ್ತದೆ.

ಅದ್ದರಿಂದ ಮೀಸಲಾತಿಯ ಯಾವುದೇ ರಿಯಾಯತಿ ಪಡೆಯದೆ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸಾಮಾನ್ಯ ವರ್ಗದ ಹುದ್ದೆಗಳಿಗೆ ಎದುರಾಗಿ ಆಯ್ಕೆಗೊಂಡ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಸಿಂಧುತ್ವ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸದಂತೆ ಸಿಎಂ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net