

ಹಾವೇರಿ: ಅಲ್ಲಮಪ್ರಭು ಮುಪ್ಪಿನ ಅವಧಿಯಲ್ಲಿ ಎಲ್ಲಿದ್ದರು ಎಂಬುದಷ್ಟೇ ನಮಗೆ ಗೊತ್ತಿತ್ತು. ಆದರೆ, ಮಧ್ಯವಯಸ್ಸಿನಲ್ಲಿ ಎಲ್ಲಿದ್ದರು ಎಂಬುದು ಯಾರಿಗೂ ಗೊತ್ತಿರಲಿಲ್ಲ. ವಿದೇಶದಿಂದ ಬಂದ ತತ್ವಜ್ಞಾನದ ಪ್ರಾಧ್ಯಾಪಕಿಯೊಬ್ಬರು ಅದನ್ನು ಪತ್ತೆ ಮಾಡಿದರು. ಹಿಮಾಲಯದಲ್ಲಿದ್ದ ಯೋಗಸಿದ್ಧರ ಕೇಂದ್ರದಲ್ಲಿ ಅಲ್ಲಮಪ್ರಭು ಅವರು ಗುರುವಾಗಿದ್ದರು. ಅಂಥ ಅಲ್ಲಮಪ್ರಭು, ಕೇಂದ್ರ ತೊರೆದು ಹಠಯೋಗಿ ಸಿದ್ಧರಾಮೇಶ್ವರದ ಜೊತೆಗೂಡಿ ಬಸವಣ್ಣನವರನ್ನು ಅರಸುತ್ತ ಬಂದವರು ಎಂದು ರಾಮದುರ್ಗದ ಸಾಹಿತಿ ಪ್ರೊ. ಸಿದ್ದಣ್ಣ ಲಂಗೋಟಿ ಹೇಳಿದರು.
ಇಲ್ಲಿಯ ಸಿಂದಗಿಮಠದಲ್ಲಿ ಬಸವ ಬಳಗದಿಂದ ಹಮ್ಮಿಕೊಂಡಿದ್ದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.
ನಾನು 98 ಗ್ರಂಥ ಬರೆದಿದ್ದೇನೆ. ಸಾಹಿತ್ಯದ ಮೊದಲ ಪುಸ್ತಕವೇ ಅಲ್ಲಮ ಪ್ರಭು ಬಗ್ಗೆ ಬರೆದಿದ್ದೇನೆ. ಆದರೆ, ಅದರಲ್ಲಿಯೂ ಅಲ್ಲಮಪ್ರಭು ಅವರ ಮುಪ್ಪಿನ ಕಾಲದ ಬಗ್ಗೆ ಮಾತ್ರ ಬರೆದಿದ್ದೇನೆ ಎಂದರು.
ಇಡೀ ಭಾರತದ ಎಲ್ಲ ಮೂಲಗಳಿಂದಲೂ ಮಹಾನ್ ಪುರುಷರು, ಕಲ್ಯಾಣ ಅನುಭವ ಮಂಟಪದ ಕಡೆ ಹೊರಟಿದ್ದಾರೆಂದು ಅಲ್ಲಮಪ್ರಭು ಅವರು, ಸಿದ್ದರಾಮೇಶ್ವರರಿಗೆ ಹೇಳಿದ್ದರು. ಅವಾಗಲೇ ಇಬ್ಬರೂ ಸೇರಿ ಬಸವಣ್ಣನವರ ಮಹಾಮನೆಗೆ ಬಂದರು. ಬಾಗಿಲು ಬಳಿ ನಿಂತಿದ್ದ ಇಬ್ಬರು, 'ಭಕ್ತಿಯ ಭಿಕ್ಷೆ ಕೊಡು ಎಂದು ಬಸವಣ್ಣನವರನ್ನು ಕೇಳಿದರು. ಆಗ ಬಸವಣ್ಣ, ಭಕ್ತಿ ಇಲ್ಲದ ಬಡವ ನಾನು. ಚನ್ನಯ್ಯ, ಕಕ್ಕಯ್ಯ, ದಾಸಿಮಯ್ಯ ಮನೆಯಲ್ಲಿ ಬೇಡಿ ಅವರ ಭಕ್ತಿಯನ್ನು ಪಾತ್ರೆಯಲ್ಲಿ ತಂದಿದ್ದೇನೆ. ನನ್ನ ಪಾತ್ರೆಯಲ್ಲಿ? ಇರುವುದು ಅವರ ಭಕ್ತಿ ಎಂದು ಹೇಳಿದರು. ಅದೊಂದು ಮಾತಿಗೆ ಶರಣಾದ ಅಲ್ಲಮಪ್ರಭು, ನಿಮ್ಮ ಸಾನ್ನಿಧ್ಯದಲ್ಲಿ ಸದ್ಭಕ್ತನಾಗಲು ಬಂದಿದ್ದೇವೆ ಎಂದು ಬಸವಣ್ಣನವರಿಗೆ ಮಾರು ಹೋದರು ಎಂದರು.
ಸಾಹಿತಿ ಕಲ್ಯಾಣಮ್ಮ ಲಂಗೋಟಿ, ದಾನಮ್ಮದೇವಿ ಟ್ರಸ್ಟ್ ಅಧ್ಯಕ್ಷೆ ಶೋಭಾತಾಯಿ ಮಾಗಾವಿ, ಬಸವ ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ, ಮಲ್ಲಿಕಾರ್ಜುನ ಹಿಂಚಿಗೇರಿ, ಕೆ.ಎಂ. ವಿಜಾಪುರ, ಜಗದೀಶ ಹತ್ತಿಕೋಟಿ, ಶಿವಾನಂದ ಹೊಸಮನಿ, ಶಿವಬಸಪ್ಪ ಮುದ್ದಿ, ಮುರುಗೆಪ್ಪ ಕಡೆಕೊಪ್ಪ ಮತ್ತಿತರರು ಇದ್ದರು.