

ಶಿವಮೊಗ್ಗ: ನಗರದ ಕೆಎಸ್‌ಸಿಎ ಮೈದಾನದಲ್ಲಿ ಮೇ 1ರಿಂದ 4ರವರೆಗೆ ಮೂರನೇ ಆವೃತ್ತಿಯ ಎಸ್‌ಪಿಎಲ್ (ಶಿವಮೊಗ್ಗ ಪ್ರೀಮಿಯರ್ ಲೀಗ್) ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಕೆಎಸ್‌ಸಿಎ ನಿರ್ದೇಶಕ ಡಿ.ಎಸ್.ಅರುಣ್ ತಿಳಿಸಿದರು.
ಒಟ್ಟು 8 ತಂಡಗಳು ಇದರಲ್ಲಿ ಭಾಗವಹಿಸಲಿದ್ದು, ಕೆಎಸ್‌ಸಿಎ 1 ಮತ್ತು 2ನೇ ಮೈದಾನದಲ್ಲಿ ಪ್ರತಿದಿನ ಬೆಳಗ್ಗೆ 9.30ರಿಂದ 12.30ರವರೆಗೆ ಮೊದಲ ಪಂದ್ಯ ಹಾಗೂ 1.30ರಿಂದ 4.30 ರವರೆಗೆ 2ನೇ ಪಂದ್ಯ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಂದ್ಯಾವಳಿಯಲ್ಲಿ 8 ತಂಡಗಳು ಸೆಣಸಲಿದ್ದು, ಎಲ್ಲ ತಂಡಗಳೂ ತಮ್ಮದೇ ಆದ ಮಾಲೀಕತ್ವ ಹೊಂದಿವೆ. ಏ.11ರಂದು ಶಿವಮೊಗ್ಗದ ಕಂಟ್ರಿ ಕ್ಲಬ್‌ನಲ್ಲಿ ಪಾಯಿಂಟ್ಸ್ ಆಧಾರದ ಮೇಲೆ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದು, ಒಟ್ಟು 168 ಆಟಗಾರರು ಹರಾಜಿನಲ್ಲಿ ಭಾಗವಹಿಸಿದ್ದರು. 140 ಆಟಗಾರರು ವಿವಿಧ ತಂಡಗಳಿಗೆ ಆಯ್ಕೆಯಾಗಿದ್ದಾರೆ. ಬಿಳಿ ಬಣ್ಣದ ಲೆದರ್ ಬಾಲ್ ಬಳಕೆಯಾಗಲಿದೆ. ಪ್ರತಿ ಪಂದ್ಯವೂ 20 ಓವರ್‌ನದ್ದಾಗಿರುತ್ತದೆ ಎಂದು ತಿಳಿಸಿದರು.
ನ್ಯಾಷನಲ್ ಗೋಲ್ಡ್ ಆ್ಯಂಡ್ ಡೈಮಂಡ್ ನೇತೃತ್ವದಲ್ಲಿ ಮಾಸ್ಟರ್ ಕನ್ಸಲ್ಟೆನ್ಸಿ ಸರ್ವೀಸಸ್, ನಾರಾಯಣ ಹೆಲ್ತ್, ಮಲ್ನಾಡ್ ಅಲಾಯ್ ಕಾಸ್ಟಿಂಗ್ ಪ್ರೈ. ಲಿ. ಮತ್ತು ಇತರ ಪ್ರಮುಖ ಪ್ರಾಯೋಜಕರ ಸಹಕಾರದೊಂದಿಗೆ ಈ ಪಂದ್ಯಾವಳಿ ಆಯೋಜಿಸಲಾಗಿದೆ. ಕೆಪಿಎಲ್ ಆಡಿದ ಹಲವಾರು ಅನುಭವಿ ಹಾಗೂ ರಾಜ್ಯಮಟ್ಟದ ಆಟಗಾರರು ಎಸ್‌ಪಿಎಲ್ ಸೀಸನ್-3ರಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.
ಕೆಎಸ್‌ಸಿಎ ಶಿವಮೊಗ್ಗ ವಲಯದ ಮಾಜಿ ಸಂಚಾಲಕ ಡಿ.ಆರ್.ನಾಗರಾಜ್ ಮಾತನಾಡಿ, ಮೇ 8, 9 ಹಾಗೂ 10ರಂದು ಶಿವಮೊಗ್ಗದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಸ್ಪಿನ್ನರ್‌ಗಳಿಗೆ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ವಲಯ ಸಂಚಾಲಕ ಸದಾನಂದ್, ಪ್ರಮುಖರಾದ ರಾಜೇಂದ್ರ ಕಾಮತ್, ಅಜರ್, ಶಬರೀಶ್, ದೀಪಕ್, ಅನಿಲ್‌ಕುಮಾರ್ ಮುಂತಾದವರಿದ್ದರು.