

ನವದೆಹಲಿ: ಇಸ್ರೇಲ್-ಇರಾನ್ ಸಂಘರ್ಷ ಆರನೇ ದಿನವೂ ಕಡಿಮೆಯಾಗದ ಕಾರಣ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನ-ಬೆಳ್ಳಿಯಲ್ಲಿ ತಮ್ಮ ಗಮನ ಕೇಂದ್ರೀಕರಿಸಿ ದ್ದಾರೆ. ಪರಿಣಾಮವಾಗಿ ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಬೆಳ್ಳಿ ಬೆಲೆ 1,000 ರೂ. ಏರಿಕೆಯಾಗಿ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ಕೆಜಿ ಬೆಳ್ಳಿ ಈಗ 1,08,200 ರೂ. ಆಗಿದೆ. ಮಂಗಳವಾರ 1,07,200 ರೂ. ಇತ್ತು. ಚಿನ್ನದ ಬೆಲೆಯೂ ಬುಧವಾರ 540 ರೂ. ಏರಿಕೆಯಾಗಿದ್ದು, ಶೇ. 99.9ರಷ್ಟು ಶುದ್ಧತೆಯ ಚಿನ್ನ 10 ಗ್ರಾಂಗೆ 1,00,710 ರೂ.ಗೆ ತಲುಪಿದೆ. ಶೇ. 99.5 ಶುದ್ಧತೆಯ ಚಿನ್ನ 500 ರೂ. ಏರಿ 10 ಗ್ರಾಂಗೆ 99,950 ರೂ. ಆಗಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.
ಮುಂಬೈ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿರುವುದರಿಂದ ಬುಧವಾರ ಭಾರತೀಯ ಷೇರುಪೇಟೆ ಇಳಿಮುಖವಾಗಿತ್ತು. ಸೆನ್ಸೆಕ್ಸ್ 138.64 ಅಂಕ ಇಳಿಕೆಯಾಗಿ 81,444.66ಕ್ಕೆ ಮುಕ್ತಾಯಗೊಂಡಿತು. ನಿಫ್ಟಿ 41.35 ಅಂಕ ಇಳಿಕೆಯಾಗಿ 24,812.05ಕ್ಕೆ ಸ್ಥಿರವಾಯಿತು. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಶೇ. 1.79ರಷ್ಟು, ಅದಾನಿ ಪೋರ್ಟ್ಸ್ ಶೇ. 1.55ರಷ್ಟು, ಹಿಂದುಸ್ತಾನ್ ಯೂನಿಲಿವರ್ ಶೇ. 1.35ರಷ್ಟು, ಬಜಾಜ್ ಫಿನ್ಸರ್ವ್ ಶೇ. 1.16ರಷ್ಟು ಕುಸಿದವು. ಇಂಡಸ್ಇಂಡ್ ಬ್ಯಾಂಕ್ನ ಷೇರು ಬೆಲೆ ಶೇ. 5.12ರಷ್ಟು ಏರಿಕೆ ಕಂಡಿತು. ಟೈಟನ್ ಶೇ. 1.99, ಮಹೀಂದ್ರ ಆಂಡ್ ಮಹೀಂದ್ರ ಶೇ. 1.24, ಮಾರುತಿ ಶೇ. 1.12ರಷ್ಟು ಏರಿಕೆ ಕಂಡವು. ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಮಂಗಳವಾರ 1,482.77 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ಕೂಡ ಮಂಗಳವಾರ 8,207.19 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.