ಬರೀ ನೂಲಲ್ಲ, ಕಲ್ಪವೃಕ್ಷವಾಗುತ್ತಿದೆ ರೇಷ್ಮೆ..!; ಹಿಪ್ಪು ನೇರಳೆಯಿಂದ ನೂಲಿನವರೆಗೆ ಹಲವು ಉತ್ಪನ್ನ, ಹೆಚ್ಚಲಿದೆ ರೈತರ ಆದಾಯ..

Silk
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ರೇಷ್ಮೆ ಎಂದರೆ ಸೀರೆ ಮತ್ತು ಪಂಚೆ ಮಾತ್ರವಲ್ಲ, ರೇಷ್ಮೆ ಗೂಡು, ಹಿಪ್ಪುನೇರಳೆ, ರೇಷ್ಮೆ ಹುಳುಗಳಿಂದ ಉಪ ಉತ್ಪನ್ನಗಳನ್ನು ತಯಾರಿಸುವ ಮೂಲಕ ರೈತರ ಆದಾಯ ದುಪ್ಪಟ್ಟು ಮಾಡುವುದರೊಂದಿಗೆ, ಉದ್ಯೋಗದ ಅವಕಾಶಗಳನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಕರ್ನಾಟಕ ರೇಷ್ಮೆ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ಒಟ್ಟು ಹದಿಮೂರು ಉಪ ಉತ್ಪನ್ನಗಳನ್ನು ಆವಿಷ್ಕಾರ ಮಾಡಿದ್ದು, ಅವುಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮುಖ್ಯಮಂತ್ರಿಗಳ ಸಮಯಕ್ಕಾಗಿ ಎದುರು ನೋಡುತ್ತಿದೆ.

ದೇಶದ ರೇಷ್ಮೆ ಬೆಳೆಯುವ ರಾಜ್ಯಗಳಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದ್ದು, 1.31 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಕೃಷಿಯಿದೆ. ಅಂದಾಜು 18 ಸಾವಿರ ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆಯಾಗುತ್ತಿದೆ. ಆದರೆ, ಅದರ ಎರಡು ಪಟ್ಟು ತ್ಯಾಜ್ಯ ಉತ್ಪಾದನೆಯಾಗಿ ನಷ್ಟವಾಗುತ್ತಿದೆ. ತ್ಯಾಜ್ಯಕ್ಕೆ ಮೌಲ್ಯವರ್ಧನೆ ಮಾಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುವುದು ಸರ್ಕಾರದ ಉದ್ದೇಶವಾಗಿದೆ. ಅದಕ್ಕೆ ಸೂಕ್ತ ವೇದಿಕೆ ಸಿದ್ಧಪಡಿಸುತ್ತಿದೆ.

ಕೆಲ ಜಿಲ್ಲೆಗಳಲ್ಲಿ ವರ್ಷಕ್ಕೆ 12 ಬೆಳೆ ಬೆಳೆದರೆ, ಕೆಲವು ಕಡೆ 8-10 ಬೆಳೆ ಬೆಳೆಯಲಾಗುತ್ತಿದೆ. ಈಗ ರೇಷ್ಮೆ ಗೂಡಿಗೆ ಉತ್ತಮ ಬೆಲೆ ಸಿಕ್ಕಿರುವುದರಿಂದ ವಾರ್ಷಿಕ 6-8 ಲಕ್ಷ ರೂ.ಗಳ ಆದಾಯ ರೈತರಿಗೆ ಬರುತ್ತಿದೆ. ಉಪ ಉತ್ಪನ್ನಗಳ ತಯಾರಿಕೆಯಿಂದ ಆದಾಯ 2ರಿಂದ 3 ಪಟ್ಟು ಹೆಚ್ಚಾಗುತ್ತದೆ ಎಂದೇ ಅಂದಾಜಿಸಲಾಗಿದೆ. ರೇಷ್ಮೆಯಿಂದ ಸುಮಾರು 8 ಲಕ್ಷ ಜನ ದುಡಿಮೆ ಕಂಡುಕೊಂಡಿದ್ದಾರೆ. ಪರೋಕ್ಷ ಉದ್ಯೋಗಾವಕಾಶಗಳು ಹೆಚ್ಚಿವೆ. ರೇಷ್ಮೆಯಿಂದ ಈಗ ಕೇವಲ ನೂಲು ತೆಗೆಯುವುದು, ಬಟ್ಟೆ ನೇಯ್ಗೆ ಮತ್ತು ರೇಷ್ಮೆ ಗೂಡಿನ ಹಾರಗಳನ್ನು ಸಿದ್ಧಪಡಿಸಲಾಗುತ್ತದೆ. ಆದರೆ, ರೇಷ್ಮೆಯ ಮೌಲ್ಯವರ್ಧನೆಯಾಗುತ್ತಿಲ್ಲ. ಈ ಕೊರತೆಯನ್ನು ನೀಗಿಸಲಾಗುತ್ತಿದೆ.

ಮೌಲ್ಯವರ್ಧನೆ ಹಂತಗಳು: ಹಿಪು್ಪನೇರಳೆ ಕಡ್ಡಿ, ಸೊಪು್ಪ, ಹಣ್ಣು, ರೇಷ್ಮೆ ಗೂಡು, ಅದರೊಳಗೆ ಸತ್ತ ಹುಳು, ಹುಳುವಿನ ಹಿಕ್ಕೆ ಹೀಗೆ ಪ್ರತಿಯೊಂದರಿಂದಲೂ ಉಪ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದೆಲ್ಲವನ್ನೂ ಬಳಸಿಕೊಂಡು ರೈತರನ್ನು ಇನ್ನಷ್ಟು ಸಶಕ್ತರನ್ನಾಗಿ ಮಾಡುವುದರ ಜತೆಗೆ ರೇಷ್ಮೆ ಬೆಳೆಯುವ ಪ್ರದೇಶ ಹೆಚ್ಚಳ ಮಾಡಲಾಗುತ್ತದೆ.

ಎರಡು ರೀತಿಯಲ್ಲಿ ನೆರವು: ರೇಷ್ಮೆ ಸಂಶೋಧನಾ ಕೇಂದ್ರ ಯಾವ ಯಾವ ಉತ್ಪನ್ನಗಳನ್ನು ತಯಾರು ಮಾಡಬಹುದು ಎಂಬ ಬಗ್ಗೆ ಸಂಶೋಧನೆ ಮಾಡಿದೆ. ಇಲಾಖೆಯಿಂದ ಉತ್ಪನ್ನಗಳನ್ನು ತಯಾರು ಮಾಡಲು ಮುಂದಾಗುವ ರೈತರಿಗೆ ತಾಂತ್ರಿಕ ನೆರವು ನೀಡುವುದು ಹಾಗೂ ಮಾರುಕಟ್ಟೆ ಸೌಲಭ್ಯ ಒದಗಿಸುವುದು ಎಂಬ ಎರಡು ರೀತಿಯ ಚಿಂತನೆ ಮಾಡಲಾಗಿದೆ.

ಎಣ್ಣೆಗೆ ಇದೆ ಬೇಡಿಕೆ: ಸೌಂದರ್ಯವರ್ಧಕಗಳಲ್ಲಿ ಬಳಸುವ ಸೆರಿಸನ್ ಎಣ್ಣೆಗೆ ಪ್ರತಿ ಲೀಟರ್​ಗೆ 6000 ರೂ.ಗಳ ದರ ಇದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ.

ಮಾರುಕಟ್ಟೆ ವ್ಯವಸ್ಥೆ: ಉಪ ಉತ್ಪನ್ನಗಳನ್ನು ತಯಾರು ಮಾಡಿದರೆ ಸಾಲದು, ಬದಲಾಗಿ ಅದಕ್ಕೆ ಮಾರುಕಟ್ಟೆಯನ್ನು ಒದಗಿಸಬೇಕಾಗುತ್ತದೆ. ಇದಕ್ಕಾಗಿ ರೇಷ್ಮೆ ಇಲಾಖೆ ಹಲವು ಸಿದ್ಧತೆ ಮಾಡಿಕೊಳ್ಳುತ್ತಿದೆ. ಸ್ಟಾರ್ಟಪ್​ಗಳನ್ನು ಸ್ಥಾಪನೆ ಮಾಡಿ ತಂತ್ರಜ್ಞಾನ ಬಳಸಿಕೊಂಡರೆ, ಕೇಂದ್ರದ ಆರ್ಥಿಕ ನೆರವು ಸಿಗುತ್ತದೆ. ಅಲ್ಲದೆ, ಇ-ಕಾಮರ್ಸ್ ವೇದಿಕೆಯಲ್ಲಿ ಉತ್ಪನ್ನಗಳ ಮಾರಾಟ ಮಾಡುವುದಕ್ಕೆ ಚರ್ಚೆ, ಕೆಎಸ್​ಐಸಿ ಮಳಿಗೆಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ. ಕೃಷಿ ಹಾಗೂ ತೋಟಗಾರಿಕೆ ಮೇಳದಲ್ಲಿ ಮಾರಾಟ. ಅಲ್ಲದೇ ರೇಷ್ಮೆ ಇಲಾಖೆಯಿಂದಲೇ ಮೇಳ ನಡೆಸುವುದು ಹೀಗೆ ಮಾರುಕಟ್ಟೆ ಕಂಡುಕೊಳ್ಳುವ ಪ್ರಯತ್ನ ನಡೆದಿದೆ.

ರೈತರ ಆದಾಯ ದ್ವಿಗುಣಗೊಳಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ರೇಷ್ಮೆ ಉಪ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸಿದ್ದು ಸದ್ಯದಲ್ಲಿಯೇ ಬಿಡುಗಡೆ ಮಾಡುತ್ತೇವೆ. ಈ ಉತ್ಪನ್ನಗಳ ಮಾರಾಟದಿಂದ ರೈತರ ಆದಾಯ ಮೂರು ಪಟ್ಟು ಹೆಚ್ಚಾಗುತ್ತದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆ ಒದಗಿಸುವ ಬಗ್ಗೆ ಮಾತುಕತೆ ನಡೆದಿವೆ. | ಡಾ. ಕೆ.ಸಿ. ನಾರಾಯಣಗೌಡ ರೇಷ್ಮೆ ಸಚಿವ

ಉಪಯೋಗಗಳು

  • ರೇಷ್ಮೆಯಲ್ಲಿ ಯಾವುದೇ ವಸ್ತು ವೇಸ್ಟ್ ಆಗುವುದಿಲ್ಲ
  • ತ್ಯಾಜ್ಯದ ಉತ್ಪಾದನೆ ಸಹ ಕಡಿಮೆಯಾಗುತ್ತದೆ
  • ರೈತರಿಗೆ ಆದಾಯ ವೃದ್ಧಿಯಾಗುತ್ತದೆ
  • ರೇಷ್ಮೆ ಬೆಳೆಯುವ ಪ್ರದೇಶ ಹೆಚ್ಚಾಗುತ್ತದೆ
  • ರಾಸಾಯನಿಕ ಅಂಶಗಳ ಸೌಂದರ್ಯವರ್ಧಕಗಳಿಗಿಂತ ಇವು ಉತ್ತಮ

ಉಪ ಉತ್ಪನ್ನಗಳು

  • ಹಿಪ್ಪುನೇರಳೆ ಚಹಾ: ಹಿಪ್ಪುನೇರಳೆ ಸೊಪ್ಪಿನಿಂದ ಚಹಾ ತಯಾರಿಸಬಹುದಾಗಿದೆ. ಈ ಸೊಪ್ಪಿನಲ್ಲಿ ಅಲ್ಕಲೈಡ್ ಎಂಬ ಅಂಶವಿದೆ. ಮಧುಮೇಹವನ್ನು ನಿಯಂತ್ರಿಸುತ್ತದೆ. ಮೂರು ಸ್ವಾದಗಳಲ್ಲಿ ಚಹಾವನ್ನು ಅಭಿವೃದ್ಧಿಪಡಿಸಲಾಗಿದೆ.
  • ನೂಲು ಬಿಚ್ಚಾಣಿಕೆ ತ್ಯಾಜ್ಯದ ಮೌಲ್ಯವರ್ಧನೆ: ರೇಷ್ಮೆ ಗೂಡಿನಲ್ಲಿ ನೂಲು ತೆಗೆದ ನಂತರವೂ ಶೇ.15 ರಿಂದ 20ರಷ್ಟು ರೇಷ್ಮೆ ಅಂಶ ಇದ್ದೇ ಇರುತ್ತದೆ. ಈ ಕೋಶದಲ್ಲಿ ಶೇ.20 ರಷ್ಟು ಎಣ್ಣೆ, ಶೇ.40 ರಷ್ಟು ಪ್ರೋಟಿನ್ ಹಾಗೂ ಶೇ.40ರಷ್ಟು ಪಾಲಿಪಾರಕ ರೈಟ್ಸ್ ಇರುತ್ತದೆ. ಇದನ್ನು ಜೈವಿಕ ತಂತ್ರಜ್ಞಾನ, ವಾಹನ ಉದ್ಯಮ, ಔಷಧ, ಆಹಾರ, ವಸ್ತ್ರ, ಪಶು ಆಹಾರ, ಮೀನು ಆಹಾರದಲ್ಲಿ ಬಳಸಬಹುದಾಗಿದೆ. ರಾಮನಗರ ಜಿಲ್ಲೆಯೊಂದರಲ್ಲಿಯೇ ವಾರ್ಷಿಕ 50 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತದೆ.
  • ಸೌಂದರ್ಯವರ್ಧಕ: ರೇಷ್ಮೆ ಅಂಟಿನಿಂದ ಸೌಂದರ್ಯವರ್ಧಕಗಳನ್ನು ತಯಾರಿಸಲಾಗುತ್ತದೆ. ಸೆರಿಸಿನ್ ಎಂಬ ಅಂಟು ರೇಷ್ಮೆ ಹುಳುವಿನಿಂದ ಲಭ್ಯವಾಗುತ್ತದೆ. ಇದರಿಂದ ತಯಾರಿಸಿರುವ ಸೌಂದರ್ಯವರ್ಧಕಗಳು ಚರ್ಮದ ಸ್ಥಿತಿ ತಾಪಕೃತವಾಗಿರುವಂತೆ ನೋಡಿಕೊಂಡು ಸುಕ್ಕು ನಿರೋಧವಾಗಿ ಕಾರ್ಯನಿರ್ವಹಿಸುತ್ತವೆ.
  • ಯುವಿ ಪ್ರೊಟೆಕ್ಷನ್ ಕ್ರೀಮ್: ಇದೊಂದು ಸೌಂದರ್ಯವರ್ಧಕ. ಇದರಿಂದ ಚರ್ಮದ ಕ್ಯಾನ್ಸರ್ ಕಡಿಮೆಯಾಗುತ್ತದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಸನ್ ಬರ್ನ್ ಸಹ ತಡೆಯುವ ಶಕ್ತಿಯನ್ನು ಹೊಂದಿದೆ.
  • ವಿವಿಧ ಕ್ರೀಮ್​ಗಳು: ಸಿಲ್ಕ್ ಆಂಟಿ ಏಜಿಂಗ್ ಕ್ರೀಮ್ ಮತ್ತೊಂದು ಕ್ರೀಮ್ ಆಗಿದೆ. ಇದು ಚರ್ಮದ ತೇವಾಂಶವನ್ನು ಕಾಯ್ದುಕೊಳ್ಳುತ್ತದೆ. ಸಿಲ್ಕ್ ಫೇರ್​ನೆಸ್ ಕ್ರೀಮ್ ಕಪು್ಪ ಕಲೆಗಳನ್ನು ದೂರ ಮಾಡುತ್ತದೆ. ಸಿಲ್ಕ್ ಪೆಪ್ಪಡ್ ಸೀರಮ್ ಮೊಡವೆಗಳನ್ನು ನಿಯಂತ್ರಿಸುತ್ತದೆ. ಸಿರಿ ಮುಲ್ತಾನಿ ಮಿಟ್ಟಿ ತೇವಾಂಶ, ಪೋಷಕಾಂಶ, ಕಪು್ಪಕಲೆ ನಿವಾರಣೆ, ಚರ್ಮದಲ್ಲಿ ರಂಧ್ರಗಳನ್ನು ತಡೆಯುತ್ತದೆ. ಸಿರಿ ಹೀಲ್​ಗಾರ್ಡ್ ಹಿಮ್ಮಡಿಯಲ್ಲಿ ಬಿರುಕುಗಳನ್ನು ತಡೆಯುತ್ತದೆ. ನೈಟ್ ಕ್ರೀಮ್ ಸಹ ಸಿದ್ಧಪಡಿಸಲಾಗಿದೆ.
  • ಶಾಂಪೂ, ಸೋಪು: ಕೂದಲು ಉದುರುವುದನ್ನು ತಡೆಯುವ ಸಿಲ್ಕ್ ಪ್ರೋಟಿನ್ ಶ್ಯಾಂಪು, ಚರ್ಮ ಬಿಗಿಗೊಳಿಸುವ ಸಿಲ್ಕ್ ಪ್ರೋಟಿನ್ ಸೋಪು ಸಹ ಅಭಿವೃದ್ಧಿ ಮಾಡಲಾಗಿದೆ.
  • ಮಾತ್ರೆಗಳು: ಹಿಪ್ಪುನೇರಳೆ ಸೊಪ್ಪಿನಿಂದ ತಯಾರಿಸಿರುವ ಮಧುಮೇಹ ನಿಯಂತ್ರಣದ ವಿವಿಧ ಮಾತ್ರೆಗಳನ್ನು ಸಂಶೋಧನೆ ಮಾಡಲಾಗಿದೆ.
  • ರೇಷ್ಮೆ ಹುಳು ಹಿಕ್ಕೆ: ರೇಷ್ಮೆ ಹುಳು ಗೂಡು ಕಟ್ಟುವ ಮುನ್ನ ಹಿಕ್ಕೆ ಹಾಕುತ್ತವೆ. 20 ಗ್ರಾಂ ಸೊಪು್ಪ ತಿನ್ನುವ ಒಂದು ಹುಳು 5 ರಿಂದ 6 ಗ್ರಾಂ ಹಿಕ್ಕೆ ಹಾಕುತ್ತದೆ. ಹಿಕ್ಕೆಯಿಂದ ಜೈವಿಕ ಅನಿಲ ಉತ್ಪಾದನೆಯಾಗುತ್ತದೆ. ಈ ಹಿಕ್ಕೆಯನ್ನು ಹಸು, ಆಡು, ಕುರಿ, ಮೀನಿನ ಆಹಾರ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಚೀನಾದಲ್ಲಿ ಪಾರ್ಶ್ವವಾಯು ಔಷಧಿಗೂ ಈ ಹಿಕ್ಕೆ ಬಳಸಲಾಗುತ್ತದೆ.
  • ಹಲ್ವ, ಜೆಲ್ಲಿ, ವೈನ್: ಹಿಪ್ಪುನೇರಳೆ ಹಣ್ಣಿನಿಂದ ಜಾಮ್ ಹಲ್ವಾ, ವೈನ್, ಜೆಲ್ಲಿ ತಯಾರಿಸಲಾಗುತ್ತದೆ. ವರ್ಷಕ್ಕೆ 2 ರಿಂದ 3 ಬಾರಿ ಹಣ್ಣು ಈ ಗಿಡದಲ್ಲಿ ಲಭ್ಯವಾಗುತ್ತದೆ.
  • ಹಿಪ್ಪುನೇರಳೆ ಸಂಯುಕ್ತ ಹಲಗೆಗಳು: ಒಂದು ಎಕರೆಯಲ್ಲಿ 8 ರಿಂದ 10 ಮೆಟ್ರಿಕ್ ಟನ್ ಹಿಪ್ಪುನೇರಳೆ ಕಡ್ಡಿ ಉತ್ಪಾದನೆಯಾಗುತ್ತದೆ. ಈ ಕಡ್ಡಿಗಳು ಸೆಲ್ಯೂಲೇಸ್ ಅಂಶದಿಂದ ಕೂಡಿರುತ್ತವೆ. ಇದರಿಂದ ಸಂಯುಕ್ತ ಹಲಗೆಗಳನ್ನು ತಯಾರಿಸಬಹುದಾಗಿದೆ. ಈ ತ್ಯಾಜ್ಯದ ಶೇ.50 ರಷ್ಟು ಬಳಸಿದರೂ 500 ಕೋಟಿ ರೂ.ಗಳ ವಹಿವಾಟು ನಡೆಯಲಿದೆ.
  • ರೇಷ್ಮೆ ಹಾಳೆ: ಕಾಂಡದಿಂದ ರೇಷ್ಮೆ ಹಾಳೆಗಳನ್ನು ತಯಾರಿಸಲಾಗುತ್ತದೆ. ಇದರಿಂದ ಕೌದಿ, ಟೋಪಿ ಇತ್ಯಾದಿ ತಯಾರಿ ಮಾಡಬಹುದಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net