

ರಾಮನಗರ : ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೈತರಿಗೆ ಸಂದಾಯ ಅಗಬೇಕಾದ ಹಣದ ದುರುಪಯೋಗ ಆಗಿದೆಯೇ? ಹೀಗೊಂದು ಸಂದೇಹಾತ್ಮಕ ಪ್ರಶ್ನೆ ಮೂರ‌್ನಾಲ್ಕು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಯಿಂದ ಮೂಡಲು ಕಾರಣವಾಗಿದೆ.
ಕಳೆದ ಕೆಲ ವರ್ಷಗಳಿಂದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಗೂಡು ಖರೀದಿಗೆ ಆಲ್‌ಲೈನ್ ವ್ಯವಸ್ಥೆ ಜಾರಿಗೆ ಬಂದಿದ್ದು, ಇತ್ತೀಚೆಗೆ ಆನ್‌ಲೈನ್ ಮೂಲಕವೇ ರೈತರಿಗೆ ಹಣ ಸಂದಾಯ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೆ, ಈ ವ್ಯವಸ್ಥೆಯೇ ಇದೀಗ ದೋಷವಾಗಿ ಪರಿಣಮಿಸಿದ್ದು, ಕೋಟ್ಯಂತರ ರೂಪಾಯಿ ಹಣ ರೈತರಿಗೆ ಸಂದಾಯವಾಗದೆ ಬಾಕಿ ಉಳಿದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಅಧಿಕಾರಿಗಳ ಹುಡುಕಾಟ: ಮಾರುಕಟ್ಟೆಯಲ್ಲಿ ಪ್ರತಿ ದಿನ ಕೋಟ್ಯಂತರ ರೂ. ವ್ಯವಹಾರ ನಡೆಯುತ್ತದೆ. ಈ ಮೊದಲು ರೀಲರ್‌ಗಳು ಗೂಡು ಖರೀದಿ ನಂತರ ಚೆಕ್ ಇಲ್ಲವೇ ನಗದು ಮೂಲಕ ರೈತರಿಗೆ ಹಣ ಸಂದಾಯ ಮಾಡುತ್ತಿದ್ದರು. ಆನ್‌ಲೈನ್ ವ್ಯವಸ್ಥೆ ಜಾರಿಗೆ ಬಂದ ನಂತರ ರೈತರ ಖಾತೆಗೆ ಗೂಡು ಮಾರಾಟವಾದ 24 ಗಂಟೆಯೊಳಗೆ ಸಂದಾಯವಾಗುತ್ತಿತ್ತು. ಆದರೆ, ಸುಮಾರು 20 ದಿನಗಳಿಂದ ಹಲವಾರು ರೈತರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ ಎನ್ನುವ ಮಾಹಿತಿ ಲಭ್ಯವಾಗುತ್ತಿದ್ದಂತೆ ರೇಷ್ಮೆ ಇಲಾಖೆ ಹಿರಿಯ ಅಧಿಕಾರಿಗಳ ತಂಡ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದೆೆ.
ಎಷ್ಟು ಹಣ?: ಪ್ರಸ್ತುತ ಎಷ್ಟು ಹಣ ರೈತರ ಖಾತೆಗೆ ತಲುಪಿಲ್ಲ ಎನ್ನುವ ಸ್ಪಷ್ಟ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿಲ್ಲ. ಭಾನುವಾರದ ಅಂತ್ಯಕ್ಕೆ 140ಕ್ಕೂ ಹೆಚ್ಚು ರೈತರಿಗೆ ಹಣ ಸಂದಾಯವಾಗಿಲ್ಲ ಎಂದು ತಿಳಿದು ಬಂದಿದ್ದು, ಮತ್ತಷ್ಟು ರೈತರ ಮಾಹಿತಿ ಸೋಮವಾರ ಸಂಜೆ ವೇಳೆಗೆ ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ರೇಷ್ಮೆ ಮಾರುಕಟ್ಟೆ ಬ್ಯಾಂಕ್ ಖಾತೆಯಲ್ಲಿ ಸಮಾರು 60 ಲಕ್ಷ ರೂ. ಹಣ ಬಾಕಿ ಉಳಿದಿದೆ. ರೈತರಿಗೆ ನೀಡಬೇಕಾದ ಹಣ, ರೀಲರ್‌ಗಳಿಂದ ಬಾಕಿ ಬರಬೇಕಿರುವ ಹಣ ಹಾಗೂ ಬ್ಯಾಂಕ್ ಖಾತೆಯಲ್ಲಿ ಬಾಕಿ ಉಳಿದಿರುವ ಹಣವನ್ನು ತಾಳೆ ಮಾಡಿದಾಗ, ರೈತರಿಗೆ ಬಾಕಿ ನೀಡಬೇಕಿರುವ ಹಣದ ವಿವರ ದೊರೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಹಣ ದುರ್ಬಳಕೆ ಆಗಿದೆ ಎನ್ನುವ ಗುಸುಗುಸು ನಡೆದಿರುವ ನಡುವೆಯೇ ರಾಮನಗರ ಗೂಡು ಮಾರುಕಟ್ಟೆಯ ಉಪನಿರ್ದೇಶಕರು ನಾಪತ್ತೆ ಆಗಿದ್ದಾರೆ ಎನ್ನಲಾಗಿದೆ. ಕಳೆದ ನಾಲ್ಕೈದು ದಿನಗಳಿಂದಲೂ ಅವರು ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆ ಆಗಿರುವುದು ಆತಂಕ ಹೆಚ್ಚಿಸಿದೆ. ಈ ನಡುವೆ ಅವರ ನಾಪತ್ತೆ ಸಂಬಂಧ ಬೆಂಗಳೂರಿನ ಠಾಣೆಯೊಂದರಲ್ಲಿ ಕುಟುಂಬ ಸದಸ್ಯರು ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ರೇಷ್ಮೆ ಇಲಾಖೆ ಹಿರಿಯ ಅಧಿಕಾರಿಗಳು ಅವರ ನಾಪತ್ತೆಯನ್ನು ಅಲ್ಲಗಳೆದಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಬಂದಿಲ್ಲ ಎಂದಷ್ಟೇ ಉತ್ತರ ನೀಡುತ್ತಿದ್ದಾರೆ.
ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೈತರಿಗೆ ನೀಡಬೇಕಾದ ಹಣ ದುರುಪಯೋಗವಾಗಿರುವ ಸಾಧ್ಯತೆ ಬಗ್ಗೆ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಆದರೆ ಹೇಗೆ ಇಷ್ಟೊಂದು ಹಣ ರೈತರಿಗೆ ಸಂದಾಯವಾಗಿಲ್ಲ ಎನ್ನುವುದೇ ಪ್ರಶ್ನೆಯಾಗಿದೆ. ಹಿರಿಯ ಅಧಿಕಾರಿಗಳು ಮತ್ತು ಸರ್ಕಾರ ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸಬೇಕಿದೆ. ಕೆ.ರವಿ ಮಾರುಕಟ್ಟೆ ಸಲಹಾ ಸಮಿತಿ ಸದಸ್ಯ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಹಣವಿದೆ. ರೈತರ ಖಾತೆಗೆ ಹಾಕುತ್ತೇವೆ. ಉಪನಿರ್ದೇಶಕರಿಗೆ ಹುಷಾರಿಲ್ಲ. ಕುಮಾರ್ ಜಂಟಿ ನಿರ್ದೇಶಕ, ರೇಷ್ಮೆಇಲಾಖೆ