

ರಾಮನಗರ: ಹಿಂಗಾರು ಮಳೆ ಮತ್ತು ಹವಾಮಾನ ವೈಪರೀತ್ಯ ಜಿಲ್ಲೆಯಲ್ಲಿ ರೇಷ್ಮೆ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಉತ್ತಮ ಬೆಳೆ ಬೆಳೆದ ರೈತರಿಗೆ ಬಂಪರ್ ಬೆಲೆ ದೊರೆಯುತ್ತಿದೆ.
ಹಿಂದಿನ ವರ್ಷಗಳಲ್ಲಿ ಹಿಂಗಾರು ಮಳೆ ಪರಿಣಾಮವಾಗಿ ಮಾರುಕಟ್ಟೆಗೆ ಆವಕ ಕುಸಿಯುವುದರ ಜತೆಗೆ ಬೆಲೆಯೂ ಕುಸಿತ ಕಂಡು ರೈತರ ಬದುಕನ್ನು ಬೀದಿಗೆ ತಂದಿತ್ತು. ಆದರೆ, ಈ ಬಾರಿ ಇದಕ್ಕೆ ವ್ಯತಿರಿಕ್ತ ವಾತಾವರಣ ನಿರ್ಮಾಣವಾಗಿದ್ದು, ನಿರೀಕ್ಷೆ ಮಾಡದ ರೀತಿಯಲ್ಲಿ ಬೆಲೆ ಏರಿಕೆ ಕಂಡಿದೆ.
ಜಿಲ್ಲೆಯಲ್ಲಿ ಸಾಮಾನ್ಯ ದಿನಗಳಲ್ಲಿ ಸರಾಸರಿ 40-50 ಟನ್ ಮಿಶ್ರ ತಳಿ ಗೂಡು ಹಾಗೂ 15-20 ಟನ್ ದ್ವಿತಳಿ ಗೂಡು ರಾಮನಗರ ಮಾರುಕಟ್ಟೆಗೆ ಆವಕವಾಗುತ್ತಿತ್ತು. ಹಿಂಗಾರು ಮಳೆ ಸಮಯದಲ್ಲಿ ಇದರ ಪ್ರಮಾಣ ಅರ್ಧಕ್ಕೆ ಕುಸಿಯುವುದು ಸಾಮಾನ್ಯವಾಗಿರುತ್ತಿತ್ತು. ಆದರೆ, ಈ ವರ್ಷ ಸತತ 4 ತಿಂಗಳು ಎಡಬಿಡದೆ ಸುರಿದ ಮಳೆಯಿಂದಾಗಿ ಹಳದಿ ಗೂಡಿನ ಆವಕ 4-6 ಟನ್‌ಗೆ ಹಾಗೂ ಬಿಳಿ ಗೂಡಿನ ಆವಕ ಮಾತ್ರ ಎಂದಿನಂತೆ ಇದೆ. ಇದರಿಂದಾಗಿ ಬೆಲೆಯಲ್ಲಿಯೂ ಭಾರೀ ಏರಿಕೆ ಆಗಿದ್ದು, ಮಿಶ್ರ ತಳಿ ಗೂಡು 700 ರೂ. ಆಸುಪಾಸಿಗೆ ಮಾರಾಟವಾದರೆ, ದ್ವಿತಳಿ ಗೂಡು 900 ರೂ.ವರೆಗೂ ತಲುಪುವ ಮೂಲಕ ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಏರಿದ ಬೆಲೆ: 15 ದಿನಗಳ ರೇಷ್ಮೆಗೂಡು ಮಾರಾಟ ದರ ಗಮನಿಸಿದಾಗ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿರುವುದು ಕಂಡು ಬಂದಿದೆ. ಡಿ.1-16ರವರೆಗೆ ಮಾರುಕಟ್ಟೆಗೆ ಒಟ್ಟು ಸರಾಸರಿ 4-6 ಟನ್ ಮಿಶ್ರ ತಳಿ ಗೂಡು ಆವಕವಾಗಿದ್ದು, ಕೆ.ಜಿ.ಗೆ ಗರಿಷ್ಠ 708 ರೂ.ಗಳಿಗೆ ಮಾರಾಟ ಕಂಡಿರುವುದು ವಿಶೇಷ. ನಂತರ ಇದು ಏರುಮುಖವಾಗಿಯೇ ಸಾಗಿದೆ. ಇನ್ನು ದ್ವಿತಳಿ ಗೂಡು ಡಿ.1-16ರವರೆಗೆೆ 11-28 ಟನ್‌ವರೆಗೂ ಮಾರುಕಟ್ಟೆಗೆ ಆವಕವಾಗಿದ್ದು, ಡಿ.16ರಂದು ಕೆ.ಜಿ.ಗೆ 866 ರೂ.ಗಳಿಗೆ ಮಾರಾಟ ಕಂಡಿದೆ.
ಹಿಂಗಾರು ಅಬ್ಬರ: ಪ್ರತಿವರ್ಷ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ವಾಯುಭಾರ ಕುಸಿತದ ಪರಿಣಾಮ ಮಳೆ ಆಗುವುದು ಸಾಮಾನ್ಯ. ಈ ಅವಧಿಯಲ್ಲಿ ಹೆಚ್ಚಿನ ಮಳೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಷ್ಟೇನೂ ಪ್ರಭಾವ ಬೀರಲಿಲ್ಲ. ಆದರೆ ಈ ಬಾರಿ ಕಂಡು ಕೇಳರಿಯದ ರೀತಿಯಲ್ಲಿ ಮಳೆ ಬಿದ್ದ ಕಾರಣ, ರೇಷ್ಮೆ ಕೃಷಿ ಮಾತ್ರವಲ್ಲದೆ ಎಲ್ಲ ಬೆಳೆಗಳು ನೆಲ ಕಚ್ಚುವಂತೆ ಮಾಡಿದೆ.
ಸರಿ ಸುಮಾರು 3 ತಿಂಗಳು ಮಳೆ ಮತ್ತು ಮೋಡ ಕವಿದ ವಾತಾವರಣದಿಂದ ರೇಷ್ಮೆ ಕೃಷಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರಿಂದಾಗಿ ಮಾರುಕಟ್ಟೆಗೆ ಬರುವ ಗೂಡಿನ ಪ್ರಮಾಣ ಇಳಿಕೆ ಕಂಡು ಬೆಲೆ ಏರಿಕೆ ಆಗಿದೆ. ಹಿಂಗಾರಿನಲ್ಲಿ ಜಿಲ್ಲೆಯಲ್ಲಿ ವಾಡಿಕೆಯಂತೆ 222 ಮಿ.ಮೀ. ಮಳೆ ಆಗಬೇಕಿತ್ತು. ಆದರೆ, ಈ ಬಾರಿ ಅ.1ರಿಂದ ಡಿ.16ರವರೆಗೆ ಜಿಲ್ಲೆಯಲ್ಲಿ 484 ಮಿ.ಮೀ. ಮಳೆ ಸುರಿದಿದ್ದು, ಶೇ.118 ಹೆಚ್ಚುವರಿ ಮಳೆ ಆಗಿದೆ.
ಬೆಲೆ ಏರಿಕೆಗೆ ಇದೂ ಕಾರಣ: ಒಂದೆಡೆ ಹವಾಮಾನ ವೈಪರೀತ್ಯ ಇದ್ದರೂ ರೇಷ್ಮೆ ಗೂಡಿನ ದಾಖಲೆ ಬೆಲೆಗೆ ಮಾರಾಟವಾಗಿರುವುದು ರೇಷ್ಮೆ ನೂಲಿಗೆ ಬೇಡಿಕೆ ಹೆಚ್ಚಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ. ಅಲ್ಲದೆ, ಚೀನಾದಿಂದ ಆಮದಾಗುತ್ತಿದ್ದ ರೇಷ್ಮೆಗೆ ಕಡಿವಾಣ ಹಾಕಿದ ಪರಿಣಾಮವೂ ಬೆಲೆ ಏರಿಕೆಗೆ ಕಾರಣವಾಗಿದೆ. ಅಲ್ಲದೆ, ಡಿ.16ರಂದು ರೇಷ್ಮೆ ಮಾರುಕಟ್ಟೆ ಇತಿಹಾಸದಲ್ಲಿಯೇ 866 ರೂ.ಗೆ ಪ್ರತಿ ಕೆ.ಜಿ ಗೂಡು ಮಾರಾಟವಾಗಿರುವುದು ದಾಖಲೆ ಎನ್ನುತ್ತಾರೆ ಮಾರುಕಟ್ಟೆ ಉಪನಿರ್ದೇಶಕ ವೆಂಕಟೇಶ್.
ಮಳೆ ಪರಿಣಾಮವಾಗಿ ಬೆಳೆ ಪ್ರಮಾಣ ಕುಸಿತ ಕಂಡಿರುವ ಪರಿಣಾಮ ಈಗ ರೈತರಿಗೆ ಹೆಚ್ಚುವರಿ ಬೆಲೆ ಸಿಗುವಂತೆ ಆಗಿದೆ. ಇದು ಸಂತಸದ ವಿಚಾರ. ಬೆಲೆ ಇದೇ ರೀತಿ ದೊರೆತರೆ ಖಂಡಿತವಾಗಿ ರೈತರು ನೆಮ್ಮದಿಯಿಂದ ಬದುಕುತ್ತಾರೆ. ಕೆ.ರವಿ ರೇಷ್ಮೆ ಬೆಳೆಗಾರ, ರೇಷ್ಮೆ ಬೆಲೆಗಾರರ ಹಿತ ರಕ್ಷಣಾ ಸಮಿತಿ ಸದಸ್ಯ. ರಾಮನಗರ ಆವಕ ಕಡಿಮೆ, ರೇಷ್ಮೆ ನೂಲಿನ ಬೆಲೆ ಏರಿಕೆ ಕಾರಣದಿಂದಾಗಿ ರೇಷ್ಮೆ ಗೂಡಿನ ಬೆಲೆಯಲ್ಲಿಯೂ ಭಾರಿ ಏರಿಕೆ ಆಗಿದೆ. ನ.16ರಂದು ದ್ವಿತಳಿ ಗೂಡು ದಾಖಲೆಯ 866 ರೂ.ಗೆ ಮಾರಾಟ ಆಗಿದೆ. ವೆಂಕಟೇಶ್ ಉಪನಿರ್ದೇಶಕ, ರೇಷ್ಮೆ ಮಾರುಕಟ್ಟೆ ರಾಮನಗರ