

ತೀರ್ಥಹಳ್ಳಿ: ಧಾರ್ಮಿಕ ಸಾಮರಸ್ಯ ಮತ್ತು ಕೋಮು ಸೌಹಾರ್ದಕ್ಕೆ ಹೆಸರಾಗಿರುವ ತಾಲೂಕಿನ ಧಾರ್ಮಿಕ ಕ್ಷೇತ್ರ ಹಣಗೆರೆಕಟ್ಟೆ ಇದೀಗ ವಾಮಾಚಾರ, ಮಾಟ-ಮಂತ್ರ ನಡೆಸುವವರ ತಾಣವಾಗಿ ಬದಲಾಗುತ್ತದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಸಾರ್ವಜನಿಕರು, ವಿದ್ಯಾರ್ಥಿಗಳು ಓಡಾಡುವ ಮಾರ್ಗದಲ್ಲಿ ಕುಂಕುಮ, ಹೂವು, ನಿಂಬೆಹಣ್ಣುಗಳನ್ನು ಇರಿಸಿ ವಾಮಾಚಾರ ನಡೆಸಿರುವ ಕುರುಹುಗಳು ಪತ್ತೆಯಾಗಿವೆ. ಇಂತಹ ಕೃತ್ಯಗಳು ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬುದು ಪಾಲಕರು ಹಾಗೂ ಸಾರ್ವಜನಿಕರ ಆತಂಕ.
ಈ ದೇವಾಲಯದಿಂದ ಮುಜರಾಯಿ ಇಲಾಖೆಗೂ ಕೋಟ್ಯಂತರ ರೂ. ಹಣ ಕಾಣಿಕೆ ರೂಪದಲ್ಲಿ ಸಂದಾಯವಾಗುತ್ತಿದೆ. ಆದರೆ ಮುಜರಾಯಿ ಇಲಾಖೆ ಹಣಕ್ಕೆ ತೋರುವಷ್ಟು ಆಸಕ್ತಿಯನ್ನು ಅಭಿವೃದ್ಧಿಗೆ ಆಸಕ್ತಿ ತೋರುತ್ತಿಲ್ಲ ಎಂಬುದು ಬೇಸರದ ಸಂಗತಿ. ದೇವಸ್ಥಾನಕ್ಕೆ ಹೊಂದಿಕೊಂಡಿರುವ ಪುಷ್ಕರಿಣಿ ಗಬ್ಬೆದ್ದು ನಾರುತ್ತಿದೆ. ವಾಮಾಚಾರಗಳ ಕುರುಹುಗಳು ಕಂಡುಬಂದಿದೆ. ಆದರೆ ವ್ಯವಸ್ಥಾಪನಾ ಸಮಿತಿಯೂ ಕಣ್ಮುಚ್ಚಿ ಕುಳಿತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಹಣಗೆರೆಕಟ್ಟೆ ರಾಜ್ಯದಲ್ಲಿಯೇ ಒಂದು ಮಾದರಿಯಾದ ಮತ್ತು ಪ್ರತಿಷ್ಠಿತ ಧಾರ್ಮಿಕ ಕೇಂದ್ರ. ಜನರ ದೂರಿನಂತೆ ಇದರ ಘನತೆಗೆ ಧಕ್ಕೆಯಾಗುವಂತಹ ವಾಮಾಚಾರ ಮುಂತಾದ ಬೆಳವಣಿಗೆಗೆ ಕಡಿವಾಣ ಹಾಕುವ ಅಗತ್ಯವಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಆರಗ ಜ್ಞಾನೇಂದ್ರ ವಿಜಯವಾಣಿಗೆ ಮಾಹಿತಿ ನೀಡಿದರು.