ಬೆಂಗಳೂರು: ಕರ್ನಾಟಕದಲ್ಲಿ ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್.ಪಿ.ಒ) ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ರ್ಕಾರ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ಸಹಯೋಗದೊಂದಿಗೆ ಸ್ಥಾಪಿತವಾದ ಬೆಂಗಳೂರಿನ ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟತಾ ಕೇಂದ್ರವು ಮಹತ್ವದ ಹೆಜ್ಜೆಯನ್ನು ತೆಗೆದುಕೊಂಡಿದ್ದು ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಸಹ್ಯಾದ್ರಿ ಫಾರ್ಮರ್ಸ್ ಪ್ರೊಡ್ಯೂಸರ್ಕಂಪನಿ ಲಿಮಿಟೆಡ್ ಮತ್ತು ಸಹ್ಯಾದ್ರಿ ಗ್ರಾಮಿಣಾಭಿವೃದ್ಧಿ ಪ್ರತಿಷ್ಠಾನದೊಂದಿಗೆ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ. ಸಾಮಥ್ರ್ಯ ನಿರ್ಮಾಣ ಮತ್ತು ಸಂದರ್ಶನ ಪ್ರವಾಸಗಳ ಮೂಲಕ ಎಫ್.ಪಿ.ಒ ಗಳ ಸುಸ್ಥಿರತೆ ಹೆಚ್ಚಿಸುವುದು ಈ ಒಪ್ಪಂದದ ಪ್ರಮುಖ ಗುರಿಯಾಗಿದೆ.
ಸರಿಸುಮಾರು 1460 ಎಫ್.ಪಿ.ಒಗಳನ್ನು ಹೊಂದಿರುವ ಕರ್ನಾಟಕವು ಸುಸ್ಥಿರ ಎಫ್.ಪಿ.ಒ ಮಾದರಿಯನ್ನು ನಿರ್ಮಿಸುವಲ್ಲಿ ಸಹ್ಯಾದ್ರಿ ಫಾರ್ಮ್‍ಗಳ ಪರಿಣತಿಯಿಂದ ಅಪಾರ ಪ್ರಯೋಜನವನ್ನು ಪಡೆಯುತ್ತದೆ. ಈ ಸಹಯೋಗವು ಆಧುನಿಕ ಕೃಷಿ ಸವಾಲುಗಳನ್ನು ಎದುರಿಸಲು, ಆಡಳಿತವನ್ನು ಸುಧಾರಿಸಲು ಮತ್ತು ದೃಢವಾದ ಮೌಲ್ಯ ಸರಪಳಿಗಳನ್ನು ಅಭಿವೃದ್ಧಿಪಡಿಸಲು ಎಫ್.ಪಿ.ಒ ಗಳಿಗೆ ಅಧಿಕಾರ ನೀಡುತ್ತದೆ.
ಕರ್ನಾಟಕ ಅಧಿಕಾರಿಗಳ ನಿಯೋಗದ ನೇತೃತ್ವವನ್ನು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿ ಡಾ. ಶಮ್ಲಾ ಇಕ್ಬಾಲ್ ವಹಿಸಿದ್ದು, ತೋಟಗಾರಿಕೆ ಇಲಾಖೆಯ ನಿರ್ದೇಶಕರಾದ ಡಿ.ಎಸ್. ರಮೇಶ್, ಐಎಎಸ್, ಜಲಾನಯನ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾದ ಪರ್ವೇಜ್ ಬಂಥನಾಳ್, ತೋಟಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಡಾ.ಪ್ರಕಾಶ್ ಸೊಬರದ್, ಜಂಟಿ ನಿರ್ದೇಶಕರಾದ ಡಾ.ಎಂ. ವಿಶ್ವನಾಥ್ ಹಾಗೂ ಉಪನಿರ್ದೇಶಕರಾದ ಕ್ಷಮಾ ಪಾಟೀಲ್, ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರ, ಬೆಂಗಳೂರಿನ ನಿರ್ದೇಶಕರಾದ ಡಾ. ರಾಘವೇಂದ್ರ ಕೆ. ಮೇಸ್ತಾ ಮತ್ತು ಉಪನಿರ್ದೇಶಕರಾದ ಡಾ.ಸದಾನಂದ ಜಿ.ಕೆ, ಜಲಾನಯನ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಪಂಕಜಾ ಜತೆಗೂಡಿದರು.