

ಶ್ರೀಕೃಷ್ಣ ಅಕ್ರೂರನಿಗೆ ಹೇಳಿದ ಮಾತು:
ನ ಹ್ಯಮ್ಮಯಾನಿ ತೀರ್ಥಾನಿ ನ ದೇವಾ ಮೃಚ್ಛಿಲಾಮಯಾಃ
ತೇ ಪುನಂತ್ಯುರುಕಾಲೇನ ದರ್ಶನಾದೇವ ಸಾಧವಃ (ಭಾ.ದಶಮ.ಸ್ಕ.47ನೇ ಅಧ್ಯಾಯ 32 ಶ್ಲೋಕ)
ತೀರ್ಥಗಳು ನದಿಗಳು ಅಥವಾ ಅನೇಕ ವಿಧವಾದ ಶಿಲಾಮಯವಾದ ಮಣ್ಣಿನ ಪ್ರತಿಮೆಗಳು ಜಡ. ಇವುಗಳಿಂದ ನೇರವಾಗಿ ನಮ್ಮ ಉದ್ಧಾರ ಆಗುವುದಿಲ್ಲ. ಆದರೆ ಸಜ್ಜನರ ಸಮಾಗಮ ಆದರೆ ಅವರ ದರ್ಶನ, ಜ್ಞಾನೋಪದೇಶದಿಂದ ಅತಿಶೀಘ್ರದಲಿಯೇ ಉದ್ಧಾರ. ಅಂತಹ ಸಜ್ಜನರ ಸಾಲಿಗೆ ಸೇರಿದವನು ನೀನೂ ಒಬ್ಬ ಎಂದು ಅಕ್ರೂರನಿಗೆ ಶ್ರೀಕೃಷ್ಣ ಹೇಳುತ್ತಾನೆ. ಮತ್ತೆ ಕೇಳುತ್ತಾನೆ: ಪಾಂಡವರ ಜೊತೆಗೆ ಧೃತರಾಷ್ಟ್ರ ಹೇಗೆ ವ್ಯವಹರಿಸುತ್ತಾನೆ? ಪಾಂಡುರಾಜನನ್ನು ಕಳೆದುಕೊಂಡು ಅನಾಥರಾದ ಆ ಪಾಂಡವರನ್ನು ಸರಿಯಾಗಿ ನೆೋಡುತ್ತಿದ್ದಾನೋ ಅಥವಾ ತನ್ನ ಮಕ್ಕಳ ಮೇಲೆ ವಿಶೇಷ ಪ್ರೀತಿಯನ್ನು ತೋರಿ ಇವರಿಗೆ ಏನಾದರೂ ತೊಂದರೆ ಕೊಡುತ್ತಿದ್ದಾನೋ ನೋಡಿಕೊಂಡು ಬಾ ಎಂದು ಕಳುಹಿಸಿದ್ದಾನೆ. ಅದನ್ನು ನೋಡುವುದಕ್ಕೆ ಬಂದ ಉದ್ಧವ ಧೃತರಾಷ್ಟ್ರನಿಗೆ ಬೇಕಾದಷ್ಟು ಉಪದೇಶವನ್ನು ಮಾಡುತ್ತಾನೆ.
ಧೃತರಾಷ್ಟ್ರ ಕೇಳದಿದ್ದಾಗ ಅವನ ಎಲ್ಲ ದುರ್ಗಣಗಳು ಇವನಿಗೆ ತಿಳಿಯುತ್ತದೆ. ಕೊನೆಗೆ ಧೃತರಾಷ್ಟ್ರ ಒಂದು ಮಾತು ಹೇಳುತ್ತಾನೆ. ‘ದೇವರು ಸವೋತ್ತಮ. ದೇವಕಿ ವಸುದೇವರಲ್ಲಿ ಅವತಾರ ಮಾಡಿದವನು ಅವನೇ. ಅವನು ಸರ್ವಪ್ರೇರಕ. ನನ್ನೊಳಗೆ ಇದ್ದು ಅವನು ಪ್ರೇರಣೆ ಮಾಡುತ್ತಿಲ್ಲ, ನಾನು ಏನು ಮಾಡಲಿ?’ ಯಾವ ರೀತಿಯಾಗಿ ಒಬ್ಬ ದುಷ್ಟ ದೇವರ ಮೇಲೆ ಹಾಕಿ ತಪ್ಪಿಸಿಕೊಳ್ಳಬೇಕೋ ಹಾಗೆ ತಪ್ಪಿಸಿಕೊಳ್ಳುತ್ತಿದ್ದಾನೆ. ಯಾರಾದರೂ ವಿಷ್ಣು ಭಕ್ತರು ಬಂದಿದ್ದಾರೆ ಎಂದರೆ ಕೆಲವರು ಏನಾದರೂ ದಾನ ಧರ್ಮ ಮಾಡು ಎಂದು ಹೇಳಿದರೆ ನೀವೇ ಹೇಳುತ್ತೀರಲ್ಲ ಎಲ್ಲದಕ್ಕೂ ದೇವರು ಪ್ರೇರಣೆ ಮಾಡಬೇಕು. ದೇವರು ನನಗೆ ಪ್ರೇರಣೆ ಮಾಡಿದರೆ ನಾನು ಮಾಡಿಯೇ ಮಾಡುತ್ತೇನೆ ಎಂದು ಧೃತರಾಷ್ಟ್ರ ಹೇಳಿದ್ದಾನೆ. ಅವನ ಮೋಸದ ಮಾತು ಅಕ್ರೂರನಿಗೆ ತಿಳಿದಿದೆ. ಕೃಷ್ಣನಿಗೆ ಅದನ್ನು ಹೇಳಿದ್ದಾನೆ.