

ಶಿವಮೊಗ್ಗ: ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಲಾಗಿರುವ ಸಿಗಂದೂರು ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ಹೊಳೆಬಾಗಿಲು ಮತ್ತು ಕಳಸವಳ್ಳಿ ನಡುವೆ ನಿರ್ಮಾಣವಾಗಿರುವ 2.14 ಕಿಮೀ ಉದ್ದದ ಸೇತುವೆಯ ವಿಹಂಗಮ ನೋಟ ಎಲ್ಲರ ಮನಸೂರೆಗೊಂಡಿದೆ. ಇದೀಗ ಸೇತುವೆಯನ್ನು ಸಂಪೂರ್ಣವಾಗಿ ಸಾರ್ವಜನಿಕರ ಬಳಕೆಗೆ ಒದಗಿಸಲು ದಿನಗಣನೆ ಆರಂಭವಾಗಿದೆ.
ಇದರ ನಡುವೆ ಸೇತುವೆಯ ಗುಣಮಟ್ಟ ತಿಳಿಯುವ ಸಲುವಾಗಿ ಬುಧವಾರ ಮೊದಲ ಹಂತದ ಪರೀಕ್ಷೆ ನಡೆಸಲಾಯಿತು. ಕಳೆದ ಭಾನುವಾರದಿಂದ ಆರಂಭವಾಗಿದ್ದ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಮೊದಲ ಹಂತದ ಟೆಸ್ಟ್‌ನಲ್ಲಿ ನೂರು ಟನ್ ಭಾರವಿರುವ ಜಲ್ಲಿ, ಮರಳುಗಳನ್ನು ತುಂಬಿದ ಲಾರಿಗಳನ್ನು ಸೇತುವೆ ಮೇಲೆ ನಿಲ್ಲಿಸಿ ಪರೀಕ್ಷೆ ನಡೆಸಲಾಗಿದೆ. ಈ ಪರೀಕ್ಷೆಯ ಫೋಟೊ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೊಳೆಬಾಗಿಲು ಮತ್ತು ಕಳಸವಳ್ಳಿ ಮಧ್ಯೆ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗಿರುವ ಈ ಸೇತುವೆ ದೇಶದ ಎರಡನೇ ಅತಿ ಉದ್ದದ ಕೇಬಲ್ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸೇತುವೆಯ ಕೇಬಲ್ ಭಾಗವನ್ನು ಎಕ್ಸ್‌ಟ್ರಾ ಡೋಸ್ ಪೋರ್ಷನ್, ಉಳಿದ ಭಾಗವನ್ನು ಬ್ಯಾಲೆನ್ಸ್ ಕ್ಯಾಂಟಿಲಿವರ್ ಎಂದು ಕರೆಯಲಾಗುತ್ತದೆ. ಈಗ ಬ್ಯಾಲೆನ್ಸ್ ಕ್ಯಾಂಟಿಲಿವರ್ ಭಾಗದಲ್ಲಿ ಲೋಡ್ ಟೆಸ್ಟಿಂಗ್ ನಡೆಸಲಾಗಿದೆ.