VIDEO| ಸಿಗಂದೂರು ಚೌಡೇಶ್ವರಿ ಸನ್ನಿಧಿಯಲ್ಲೇ ದಾಂಧಲೆ! ಭಕ್ತರ ಮೇಲೂ ಹಲ್ಲೆ

sigandhuru galate 2
Published on

ಶಿವಮೊಗ್ಗ: ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಶುಕ್ರವಾರ ಮಧ್ಯಾಹ್ನ ಎರಡು ಬಣಗಳ ನಡುವೆ ಮಾರಾಮಾರಿ ನಡೆದಿದ್ದು, ಪರಿಸ್ಥಿತಿ ಪ್ರಕ್ಷ್ಯುಬ್ಧವಾಗಿದೆ.

ದೇವಸ್ಥಾನ ಆಡಳಿತ ಮಂಡಳಿಯ ಒಳ ಜಗಳ ಸ್ಫೋಟಗೊಂಡಿದ್ದು, ಸಿಗಂಧೂರು ಧರ್ಮದರ್ಶಿ ರಾಮಪ್ಪ ಬೆಂಬಲಿಗರ ಮೇಲೆ ಪ್ರಧಾನ ಅರ್ಚಕ ಶೇಷಗಿರಿ ಭಟ್ಟರ ಬೆಂಬಲಿಗರು ಹಲ್ಲೆ‌ ನಡೆಸಿದ್ದಾರೆ. ದೇವಾಲಯಕ್ಕೆ ಪೂಜೆ ಮಾಡಿಸಲು ಬಂದಿದ್ದ ಭಕ್ತರ ಮೇಲೂ ಹಲ್ಲೆಯಾಗಿದೆ. ದೇವಾಲಯದ ಆಡಳಿತ ಕಚೇರಿಯ ಗ್ಲಾಸ್​ಗಳು, ಪೀಠೋಪಕರಣ ಧ್ವಂಸ ಮಾಡಿದ್ದಾರೆ.

ಪರಿಸ್ಥಿತಿ ಕೈಮೀರುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಪೊಲೀಸರು, ಹತೋಟಿಗೆ ತಂದಿದ್ದಾರೆ. ಪೊಲೀಸರ ಎದುರಲ್ಲೇ ಎರಡೂ ಬಣಗಳ ನಡುವೆ ಮಾತಿನ‌ ಚಕಮಕಿ ಜೋರಾಗಿತ್ತು. ದೇವಾಲಯ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್​ ಬಂದೋಬಸ್ತ್​ ಕಲ್ಪಿಸಲಾಗಿದೆ.

ಬೀದಿಗೆ ಬಂದ ಒಳ ಜಗಳ: ನವರಾತ್ರಿ ಚಂಡಿಕಾ ಹೋಮ ನಡೆಸಲು ಧರ್ಮದರ್ಶಿ ಮಂಡಳಿ ಅಡ್ಡಿ ಪಡಿಸುತ್ತಿದೆ ಎಂದು ಸಿಗಂದೂರು ದೇವಸ್ಥಾನದ ಪ್ರಧಾನ ಅರ್ಚಕ ಶೇಷಗಿರಿ ಭಟ್ ಕುಟುಂಬಸ್ಥರೊಂದಿಗೆ ಶುಕ್ರವಾರ ಬೆಳಗ್ಗೆ ಚೌಡೇಶ್ವರಿ ದೇವಿ ಎದುರು ಮೌನ ಪ್ರತಿಭಟನೆ ನಡೆಸುತ್ತಿದ್ದರು.

ಈ ವೇಳೆ ಧರ್ಮದರ್ಶಿ ರಾಮಪ್ಪ ಕಡೆಯ ಮಂಜಯ್ಯ ಜೈನ್​ ಎಂಬುವವರು ದೇವರ ದರ್ಶನ ಪಡೆಯಲೆಂದು ಬಂದಿದ್ದರು. ಆಗ ಶೇಷಗಿರಿ ಭಟ್ ಕುಟುಂಬಸ್ಥರು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ ಇತರರ ಮೇಲೂ ಕೈಮಾಡಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net