9ರಂದು ಲೀಡ್​ ಬ್ಯಾಂಕ್​ಗೆ ಮುತ್ತಿಗೆ

raithasanga
ಕೋಲಾರ ನಗರದ ಹೊರ ವಲಯದ ಅರಣ್ಯ ಇಲಾಖೆ ಆವರಣದಲ್ಲಿ ಆಯೋಜಿಸಿದ್ದ ರೈತ ಸಂಘದ ಸಭೆಯಲ್ಲಿ ರಾಜ್ಯ ಮುಖಂಡ ಮರಗಲ್​ ಶ್ರೀನಿವಾಸ್​, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಸುಪ್ರೀಂ ಚಲ, ಗಿರೀಶ್​, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಮಂಜುಳ, ರತ್ನಮ್ಮ, ಶೋಭಾ ಇದ್ದರು.
Published on

ಕೋಲಾರ: ಬರ ಹಾಗೂ ಬೆಳೆ ನಷ್ಟದಿಂದ ತತ್ತರಿಸಿರುವಾಗ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್​ಗಳಿಂದ ಸಾಲ ಪಡೆದ ರೈತರಿಗೆ ಬ್ಯಾಂಕ್​ ವ್ಯವಸ್ಥಾಪಕರು ನೋಟಿಸ್​ ನೀಡುವ ಮೂಲಕ ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಜ.9ರಂದು ಪಾತ್ರೆ, ಸಾಮಾನು ಹಾಗೂ ನಷ್ಟ ಬೆಳೆ ಸಮೇತ ಲೀಡ್​ಬ್ಯಾಂಕ್​ಗೆ ಮುತ್ತಿಗೆ ಹಾಕಲು ರೈತ ಸಂಘದ ಸಭೆ ತೀಮಾರ್ನಿಸಿದೆ.

ನಗರ ಹೊರವಲಯದ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ರೈತ ಸಂಘದ ಸಭೆಯಲ್ಲಿ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಬರ ಎಂದು ರಾಜ್ಯ ಸರ್ಕಾರವೇ ಘೋಷಣೆ ಮಾಡಿ, ಹೆಕ್ಟೇರ್​ಗೆ 2 ಸಾವಿರ ರೂ. ಪರಿಹಾರ ನೀಡಿರುವ ಜತೆಗೆ ಹೆಚ್ಚಿನ ಅನುದಾನಕ್ಕೆ ಕೇಂದ್ರ ಸರ್ಕಾರದ ಕಡೆಗೆ ಬೆರಳು ತೋರಿಸುತ್ತಿರುವ ಸಂದರ್ಭದಲ್ಲೇ ಇದೀಗ ಹಿಂಬದಿಯಿಂದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್​ಗಳಿಂದ ಸಾಲ ವಸೂಲಿಗೆ ಮುಂದಾಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾನುವಾರಗಳಿಗೆ ಮೇವಿಲ್ಲದಂತಾಗಿದೆ. ಬೆಳೆಗಳಿಗೆ ಬಾಧಿಸುತ್ತಿರುವ ರೋಗಗಳಿಂದಾಗಿ ಹಾಕಿದ ಬಂಡವಾಳ ಬಾರದೆ ರೈತನು ತತ್ತರಿಸುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಪಡೆದಿರುವ 1 ಲಕ್ಷದಿಂದ 10 ಲಕ್ಷ ರೂ.ಗಳವರೆಗಿನ ಸಾಲ ವಸೂಲಿಗೆ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್​ಗಳವರು ನೋಟಿಸ್​ ನೀಡಿ ನಿಮ್ಮ ಆಸ್ತಿ, ಜಾನುವಾರು ಹರಾಜು ಹಾಕುತ್ತೇವೆ. ಮರ್ಯಾದೆ ಕಳೆಯುತ್ತೇವೆ ಎಂದು ಬೆದರಿಕೆ ಹಾಕುತ್ತಿರುವುದು ಸರಿಯಲ್ಲ ಎಂದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್​ ಮಾತನಾಡಿ, ಬರ ಪರಿಸ್ಥಿತಿ ಇರುವುದರಿಂದ ಬ್ಯಾಂಕ್​ನಿಂದ ರೈತರಿಗೆ ಯಾವುದೇ ನೋಟಿಸ್​ಗಳನ್ನು ನೀಡಬಾರದು ಎಂದು ಆದೇಶ ಇದ್ದರೂ ಇದಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ನೋಟೀಸ್​ ನೀಡಿ, ನ್ಯಾಯಾಲಯಕ್ಕೆ ಹಾಕುವುದಾಗಿ ಹೆದರಿಸುತ್ತಿರುವುದು ರೈತ ವಿರೋಧಿ ಧೋರಣೆಯಾಗಿದೆ ಎಂದರು. ಮೊದಲು ಬಲಾಢ್ಯರ ಸಾಲ ವಸೂಲಿ ಮಾಡಲು ಮುಂದಾಗಿ, ಇಲ್ಲವಾದರೆ ಪ್ರತಿ ಹಳ್ಳಿಗೆ ಸಾಲ ವಸೂಲಾತಿಗೆ ಬರುವ ಬ್ಯಾಂಕ್​ ಅಧಿಕಾರಿ, ಸಿಬ್ಬಂದಿ ವಿರುದ್ಧ ರೈತಸಂಘದಿಂದ ಸಗಣಿ ಎರಚುವ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net