ರೈಲು ನಿಲ್ದಾಣಕ್ಕೆ ಸಿದ್ಧಗಂಗಾ ಮಠದ ಸ್ಪರ್ಶ

3
Published on

120 ಕೋಟಿ ರೂಪಾಯಿ ವೆಚ್ಚದಲ್ಲಿ ತುಮಕೂರಿನಲ್ಲಿ ಮೇಲ್ದರ್ಜೆಗೇರಿಸಲು ನಿರ್ಧಾರ

ವಿಶೇಷ ವರದಿ ತುಮಕೂರು
ತ್ರಿವಿಧ ದಾಸೋಹದ ಮಹಾಮನೆ ಸಿದ್ಧಗಂಗಾ ಮಠದ ಮಾದರಿಯಲ್ಲೇ ತುಮಕೂರಿನ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಅಮೃತ್​ ಭಾರತ್​ ಯೋಜನೆಯಡಿ ತುಮಕೂರು ರೈಲು ನಿಲ್ದಾಣವನ್ನು 120 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಈಗಾಗಲೇ ನಿಲ್ದಾಣಕ್ಕೆ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರಿಡುವಂತೆ ಒತ್ತಾಯ ಕೇಳಿ ಬಂದಿರುವಾಗಲೇ ನಿಲ್ದಾಣವನ್ನು ಶ್ರೀಮಠದ ಮಾದರಿಯಲ್ಲಿ ವಿನ್ಯಾಸಗೊಳಿಸುತ್ತಿರುವುದು ವಿಶೇಷವೆನಿಸಿದೆ.


ಬೆಂಗಳೂರಿನ ಕಂಟೋನ್ಮೆಂಟ್​, ಯಶವಂತಪುರ ವ್ಯವಸ್ಥಿತ ರೈಲು ನಿಲ್ದಾಣಗಳಂತೆ ತುಮಕೂರಿನ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಕ್ರಮವಹಿಸಲಾಗಿದೆ. ಇದಲ್ಲದೆ, ರಾಜ್ಯದ 61 ರೈಲು ನಿಲ್ದಾಣಗಳನ್ನು ಒಟ್ಟು 2 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ರೈಲ್ವೆ ಇಲಾಖೆ ಗ್ರೀನ್​ ಸಿಗ್ನಲ್​ ತೋರಿದೆ.


ಸುಸಜ್ಜಿತ ನಿಲ್ದಾಣ: ರೈಲ್ವೆ ಖಾತೆ ರಾಜ್ಯ ಸಚಿವರೂ ಆದ ತುಮಕೂರು ಸಂಸದ ವಿ.ಸೋಮಣ್ಣ ಪ್ರತಿನಿಧಿಸುವ ಕ್ಷೇತ್ರದ ಈ ರೈಲು ನಿಲ್ದಾಣಕ್ಕೆ ಹೊಸ ಸ್ಪರ್ಶ ನೀಡಲಾಗುತ್ತಿದೆ. ಲಾಂತರ ಬಡಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ಕಲ್ಪಿಸಿದ ಸಿದ್ಧಗಂಗಾ ಮಠದ ಮಾದರಿಯನ್ನೇ ಹೋಲುವಂತೆ ರೈಲು ನಿಲ್ದಾಣದ ಕಟ್ಟಡ ವಿನ್ಯಾಸ ಇರಲಿದೆ. ನಿಲ್ದಾಣದಲ್ಲಿ ಬಹುಹಂತದ ಪಾರ್ಕಿಂಗ್​ ವ್ಯವಸ್ಥೆ ಇರಲಿದೆ. ಪ್ರಯಾಣಿಕರ ಅತ್ಯಾಧುನಿಕ ಲಾಂಜ್​ಗಳು, ಪ್ರತ್ಯೇಕ ಪ್ರವೇಶ ಹಾಗೂ ನಿರ್ಗಮನ ದ್ವಾರ ಒಳಗೊಂಡಿರುತ್ತದೆ. ಪ್ರಯಾಣಿಕರ ಸ್ನೇಹಿ ಸೌಕರ್ಯಗಳೊಂದಿಗೆ ನವೀಕರಣಗೊಂಡು ಬಹು ಹಂತದ ಪಾರ್ಕಿಂಗ್​ ವ್ಯವಸ್ಥೆ, ಬೆಳೆಯುತ್ತಿರುವ ತುಮಕೂರಿನ ಭವಿಷ್ಯದ ಅಗತ್ಯಗಳನ್ನು ಪೂರೈಸಲು ಹೆಚ್ಚಿನ ಪ್ಲಾಟ್​ ಫಾಮ್​ರ್ ನಿರ್ಮಿಸಲಾಗುತ್ತಿದೆ. ಈ ಸಂಬಂಧ ಎಕ್ಸ್​ ಪೋಸ್ಟ್​ನಲ್ಲಿ ಸೋಮಣ್ಣ ಮಾಹಿತಿ ಹಂಚಿಕೊಂಡಿದ್ದಾರೆ.


ಶ್ರವಣಬೆಳಗೊಳ ನಿಲ್ದಾಣಕ್ಕೂ ಹೊಸ ರೂಪ: ರಾಜ್ಯದ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿರುವ 61 ರೈಲು ನಿಲ್ದಾಣಗಳನ್ನು ಅಮೃತ್​ ಭಾರತ್​ ಯೋಜನೆಯಡಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಇದಕ್ಕಾಗಿ 2 ಸಾವಿರ ಕೋಟಿ ರೂ. ಅನುದಾನ ವ್ಯಯಿಸಲಾಗುವುದು. ಹಾಸನ ಜಿಲ್ಲೆಯ ಶ್ರವಣಬೆಳಗೊಳ ರೈಲು ನಿಲ್ದಾಣವನ್ನು 9 ಕೋಟಿ ರೂಪಾಯಿ ಹಾಗೂ ಗುಬ್ಬಿ ರೈಲು ನಿಲ್ದಾಣವನ್ನು 7 ಕೋಟಿ ರೂಪಾಯಿ ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗುವುದು.

ಕ್ಯಾತಸಂದ್ರಕ್ಕೆ ನಿಲ್ದಾಣ: ತುಮಕೂರು ರೈಲು ನಿಲ್ದಾಣಕ್ಕೆ ಸಿದ್ಧಗಂಗೆಯ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರಿಡುವಂತೆ ಒತ್ತಾಯ ಬಂದಿವೆ. ಹಾಗೆಯೇ ಕ್ಯಾತಸಂದ್ರ ನಿಲ್ದಾಣಕ್ಕೆ ಸಿದ್ಧಗಂಗಾ ನಿಲ್ದಾಣ ಎಂದು ಹೆಸರಿಡುವಂತೆಯೂ ಪತ್ರಗಳು ಬಂದಿವೆ. ಈ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮನವಿ ಮಾಡಿದ್ದಾರೆ.

ಸ್ವಯಂ ಚಾಲಿತ ಸಿಗ್ನಲ್​ ವ್ಯವಸ್ಥೆ: ನೈರುತ್ಯ ರೈಲ್ವೆ ವಲಯದಲ್ಲೇ ಮೊದಲು ಎಂಬಂತೆ ತುಮಕೂರು&-ಅರಸೀಕೆರೆ ಮಾರ್ಗದಲ್ಲಿ ಸ್ವಯ ಚಾಲಿತ ಸಿಗ್ನಲ್​ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ನಿರ್ಮಾಣಕ್ಕಾಗಿ 220 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಯಶವಂತಪುರ& ಅರಸೀಕೆರೆ ನಡುವೆ ಒಟ್ಟು 165.86 ಕಿ.ಮೀ., ಮಾರ್ಗವನ್ನು ಸಿಗ್ನಲ್​ ಫ್ರೀ ಮಾಡಲಾಗುತ್ತಿದೆ. ಯಶವಂತಪುರ& ಸಂಪಿಗೆ ರೋಡ್​ (107.21 ಕಿ.ಮೀ.,) ಹಾಗೂ ಸಂಪಿಗೆ ರೋಡ್​& ಅರಸೀಕೆರೆ (58.65 ಕಿ.ಮೀ.,) ಒಟ್ಟು 165 ಕಿ.ಮೀ., ಮಾರ್ಗದಲ್ಲಿ ಸ್ವಯಂ ಚಾಲಿನ ಸಿಗ್ನಲ್​ ವ್ಯವಸ್ಥೆ ನಿರ್ಮಾಣ ಮಾಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net