ಕಿಲಾರಿ ರಾಸು ಬಲು ದುಬಾರಿ!; ಸಿದ್ಧೇಶ್ವರ ಜಾನುವಾರು ಜಾತ್ರೆಯಲ್ಲಿ ಭರ್ಜರಿ ವಹಿವಾಟು

Kilari Rasu 13 Jan 20
Published on

ಸಿದ್ಧೇಶ್ವರ ಜಾನುವಾರು ಜಾತ್ರೆಗೆ ರಾಜ್ಯ- ನೆರೆ ರಾಜ್ಯಗಳಿಂದ ಆಗಮಿಸಿರುವ ಲಕ್ಷಕ್ಕೂ ಅಧಿಕ ಜಾನುವಾರುಗಳು ಬಣ್ಣ, ಮೈಕಟ್ಟು, ತಳಿ ಮತ್ತು ದರದಲ್ಲಿ ಒಂದಕ್ಕೊಂದು ಮೀರಿಸುವಂತಿದ್ದು, ವಹಿವಾಟು ಭರ್ಜರಿಯಾಗಿದೆ.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಪಕ್ಕದಲ್ಲಿರುವ ಎಪಿಎಂಸಿಯ 110 ಎಕರೆ ಜಾಗ ಸಂಪೂರ್ಣ ಜಾನುವಾರುಗಳಿಂದ ತುಂಬಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ. ಉತ್ತರ ಕರ್ನಾಟಕದ ಬೃಹತ್ ಜಾನುವಾರು ಜಾತ್ರೆ ಹೆಗ್ಗಳಿಕೆ ಹೊತ್ತ ಈ ಜಾತ್ರೆಯಲ್ಲಿ ಆಕಳು, ಹೋರಿ ಮತ್ತು ಎತ್ತಿನ ದರ ದುಬಾರಿಯಾಗಿದ್ದು, ಐಷಾರಾಮಿ ಕಾರಿನ ಬೆಲೆ ಮೀರಿಸುತ್ತಿವೆ. ಜ.18ರವರೆಗೆ ನಡೆಯಲಿರುವ ಈ ಜಾತ್ರೆ ನೋಡಲು ಜನ ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ.

ನಾಲ್ಕು ಹಲ್ಲಿನ ಹೋರಿಗೆ 4 ಲಕ್ಷ ರೂ.

ಕಿಲಾರಿ ತಳಿಯ ಬೀಜದ ಹೋರಿಯೊಂದಕ್ಕೆ ಕನಿಷ್ಠ 4 ಲಕ್ಷ ರೂ. ದರ ನಿಗದಿಗೊಳಿಸಲಾಗಿದೆ. ಬಬಲೇಶ್ವರದ ರೈತ ರಾಜುಗೌಡ ಬಿರಾದಾರ ಅವರ ನಾಲ್ಕು ಹಲ್ಲಿನ ಹೋರಿಗೆ 3.50 ಲಕ್ಷ ರೂ.ಗೆ ಬೇಡಿಕೆ ಬಂದರೂ ಮಾರಿಲ್ಲ. ಮೂರೂವರೆ ವರ್ಷದ ಈ ಕಿಲಾರಿ ತಳಿ ಹೋರಿಯ ದೈನಂದಿನ ನಿರ್ವಹಣೆಗೆ ಕನಿಷ್ಠ 1000 ರೂ. ಬೇಕು. ಗೋಧಿ, ಜವೆ, ಕುಸುಬೆ ಎಣ್ಣೆ, ಕಾಟ್ಯಾಳ... ಹೀಗೆ ಗುಣಮಟ್ಟದ ಆಹಾರ ಬೇಕೇ ಬೇಕು. ಒಂದು ಬಾರಿ ಕ್ರಾಸಿಂಗ್ ಮಾಡಿಸಲು 1000 ರೂ. ನಿಗದಿ ಪಡಿಸಲಾಗಿದ್ದು ವರ್ಷಕ್ಕೆ 5 ಲಕ್ಷ ರೂ. ಆದಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ರಾಜುಗೌಡ.

ಕಾರಜೋಳರ ಆಕಳಿಗೆ ಡಿಮಾಂಡ್

ಡಿಸಿಎಂ ಗೋವಿಂದ ಕಾರಜೋಳ ಅವರ ಕಾಂಕ್ರೆಜ್ ಆಕಳು ಈ ಬಾರಿ ಜಾತ್ರೆಯಲ್ಲಿ ಆಕರ್ಷಣೆಗಳಲ್ಲೊಂದು. ಡಿಸಿಎಂ ಪುತ್ರ ಉಮೇಶ ಅವರು ಗುಜರಾತ್​ನಿಂದ ತರಿಸಿದ ಕಾಂಕ್ರೆಜ್ ತಳಿಯ ಆಕಳು ಹಾಗೂ ಹೋರಿ ವಿಜಯಪುರ ಜಿಲ್ಲೆಯ ಅಪರೂಪದ ತಳಿ. ಈ ಭಾಗದಲ್ಲಿ ಜಮಖಂಡಿ ಬಿಟ್ಟರೆ ವಿಜಯಪುರದಲ್ಲಿ ಇವರೊಬ್ಬರೇ ಈ ತಳಿ ಸಾಕುತ್ತಿರುವುದು. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ 5 ಲೀಟರ್ ಹಾಲು ಕೊಡುವ ಈ ಆಕಳು ಆಕರ್ಷಕವಾಗಿವೆ. ಆಕಳಿಗೆ 1.5 ಲಕ್ಷ ರೂ. ಹಾಗೂ ಹೋರಿಗೆ 2 ಲಕ್ಷ ರೂ. ದರ ನಿಗದಿ ಮಾಡಲಾಗಿದೆ.

ಆಕಳಿಗೆ 6 ಲಕ್ಷ ರೂಪಾಯಿ

ಸ್ಥಳೀಯ ಮಮದಾಪುರದ ಸದಾಶಿವ ಶಿವಪ್ಪಗೋಳ ಅವರ ಕಿಲಾರಿ ಆಕಳನ್ನು 4 ಲಕ್ಷ ರೂ.ಗೆ ಖರೀದಿದಾರರು ಕೇಳಿದ್ದರೂ ಕೊಟ್ಟಿಲ್ಲ. ಬೆಳಗ್ಗೆ 5, ಸಂಜೆ 4 ಲೀಟರ್ ಹಾಲು ಕೊಡುವ ಈ ಆಕಳನ್ನು 6 ಲಕ್ಷ ರೂ.ಗೆ ಮಾರುವ ಇರಾದೆ ಸದಾಶಿವ ಅವರದ್ದು. ಬಾಗಲಕೋಟೆ, ವಿಜಯಪುರ ಸೇರಿ ಹಲವು ಜಾತ್ರೆಗಳಲ್ಲಿ ಪ್ರಥಮ ಬಹುಮಾನ ಗಿಟ್ಟಿಸಿಕೊಂಡಿರುವ ಈ ಆಕಳು ಇಲ್ಲೂ ಬಹುಮಾನದ ನಿರೀಕ್ಷೆಯಲ್ಲಿದೆ.

ಈ ಬಾರಿ ಹಿಂಗಾರಿನಿಂದ ಸಮೃದ್ಧ ಮೇವು ಸಿಕ್ಕು ಹೋರಿ ದಷ್ಟಪುಷ್ಟವಾಗಿದೆ. ಉತ್ತಮ ದರ ಬಂದರೆ ಮಾತ್ರ ಮಾರುವೆ. ಈಗಾಗಲೇ 3.50 ಲಕ್ಷ ರೂ.ಗೆ ಬೇಡಿಕೆ ಬಂದಿದೆ. ಕನಿಷ್ಠ 4 ಲಕ್ಷ ರೂ. ಸಿಗಲಿ ಎಂದು ಸುಮ್ಮನಿದ್ದೇನೆ. ಪ್ರತಿ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಹಿವಾಟು ಚೆನ್ನಾಗಿದೆ. | ರಾಜುಗೌಡ ಬಿರಾದಾರ ಬಬಲೇಶ್ವರ ರೈತ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿ ರಾಜ್ಯದ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಯಾದಗಿರಿ, ಕಲಬುರಗಿ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರು ಬಂದಿವೆ. ಮಹಾರಾಷ್ಟ್ರದ ಜತ್ತ, ಸಾಂಗಲಿ, ಮೀರಜ್, ಸೋಲಾಪುರದ ರೈತರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ವಹಿವಾಟು ಭರ್ಜರಿಯಾಗಿದೆ. ಪಶು ವೈದ್ಯಕೀಯ ಆಸ್ಪತ್ರೆ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. | ಡಾ. ಬಸವರಾಜ ಕನಮಡಿ, ಮುಖ್ಯ ಪಶುವೈದ್ಯಾಧಿಕಾರಿ ವಿಜಯಪುರ

| ಪರಶುರಾಮ ಭಾಸಗಿ ವಿಜಯಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net