ಮನುಷ್ಯ ತನ್ನನ್ನು ತಾನು ಅರಿತು ಜೀವಿಸಬೇಕು; ಡಾ. ಶಿವಾನಂದ ಸ್ವಾಮೀಜಿ

22-RNR-04
Published on

ರಾಣೆಬೆನ್ನೂರ: ಮಾನವ ಜನ್ಮ ದೊರೆಯುವುದೆ ರ್ದುಲಭ. ಹಲವಾರು ಜನ್ಮಗಳ ಪುಣ್ಯದ ಫಲವಾಗಿ ಮನುಷ್ಯ ಜನ್ಮ ಪ್ರಾಪ್ತಿಯಾಗಿದೆ. ಮಾನವನಿಗೂ ಪ್ರಾಣಿಗಳಿಗೂ ವ್ಯತ್ಯಾಸವಿದೆ. ಮನುಷಯನಿಗೆ ಅರಿವಿದೆ ಮತ್ತು ಪ್ರಾಣಿಗಳಿಗೆ ಅರಿವಿಲ್ಲ. ಹಾಗಾಗಿ ಅರಿವಿನ ಜನ್ಮ ಪಡೆದ ಮನುಷ್ಯ ತನ್ನನ್ನು ತಾನು ಅರಿತು ಜೀವಿಸಬೇಕು ಎಂದು ಇಂಚಲ ಶಿವಯೋಗಿಶ್ವರ ಸಾಧು ಸಂಸ್ಥಾನಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.

ತಾಲೂಕಿನ ಖಂಡೇರಾಯನಹಳ್ಳಿಯ ಸಿದ್ಧಾರೂಢ ಮಠದಲ್ಲಿ ಸದ್ಗುರು ಸಿದ್ಧಾರೂಢಸ್ವಾಮಿಯವರ ಜಯಂತಿ ಅಂಗವಾಗಿ ಗುರುವಾರ ಏರ್ಪಡಿಸಿದ್ದ 31ನೇಯ ವೇದಾಂತ ಪರಿಷತ್​ ಹಾಗೂ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

84 ಲಕ್ಷ ಜೀವರಾಶಿಗಳಲ್ಲಿ ಶ್ರೇಷ್ಠ ಜನ್ಮ ಪಡೆದ ಮಾನವ ಪರಬ್ರಹ್ಮ ಜ್ಞಾನವನ್ನು ಅಂತಪ್ಪ ಗುರುವಿನಿಂದ ಪಡೆದು ಜನ್ಮ ಮುಕ್ತನಾಗಬೇಕು. ಎಲ್ಲ ನದಿಗಳು ಒಂದೊಂದು ನಾಮ ಪಡೆದು ಭೂಮಿಯಲ್ಲಿ ಹರಿದರೂ ಸಮುದ್ರ ಸೇರಿದ ಕ್ಷಣ ಮಾತ್ರದಲ್ಲಿ ನಾಮ ರಹಿತವಾಗಿ ನದಿಗಳು ಮುಕ್ತವಾದಂತೆ ಗುರುವಿನ ಸಂಗಮವಾದರೆ ಮನುಷ್ಯ ಜೀವನ್ಮುಕ್ತನಾಗುತ್ತಾನೆ ಎಂದರು.

ಶಿವಾವತಾರಿ ಭೂಲೋಕವಾಸಿಯಾದ ಸಿದ್ಧಾರೂಢರು ಸರ್ವ ಜೀವಿಗಳಿಗೂ ಸುಖ, ಶಾಂತಿ, ನೆಮ್ಮದಿ, ಮುಕ್ತಿ ಪಡೆಯಲೆಂಬ ಸಂಕಲ್ಪದಿಂದ ಜಾತಿ, ಮತ, ಪಂಥಗಳ ಬೇಧವಿಲ್ಲದೆ ಶಾಂತಿ ಮಂತ್ರವನ್ನು ಬೋಧಿಸಿದ ಮಹಾತ್ಮ ಸಿದ್ಧಾರೂಢರು. ಅಂತವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಜಾತಿಯ ಸೋಂಕು ತಗುಲದೆ ಸರ್ವರೂ ಒಂದಾಗಿ ಬಾಳಲು ಸಾಧ್ಯ, ಅಲ್ಲದೆ ಸತ್ಸಂಗವು ಜನ್ಮಜನ್ಮಾಂತರ ಪಾಪಕರ್ಮಗಳು ನಾಶವಾಗಿ ಮುಕ್ತಿಯನ್ನು ಪಡೆಯಲು ಸಾಧ್ಯ ಎಂದರು.

ಶ್ರೀಮಠದ ಪೀಠಾಧಿಪತಿ ನಾಗರಾಜಾನಂದ ಸ್ವಾಮೀಜಿ, ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮೀಜಿ, ಹುಬ್ಬಳ್ಳಿಯ ಸಚ್ಚಿದಾನಂದ ಸ್ವಾಮೀಜಿ, ದಾವಣಗೆರೆಯ ಜಡಿಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ, ಹದಡಿಯ ಚಂದ್ರಗಿರಿ ಮಠದ ಮುರಳಿಧರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಉಪಸಭಾಪತಿ ಹಾಗೂ ಶ್ರೀಮಠದ ಕಾರ್ಯದಶಿರ್ ರುದ್ರಪ್ಪ ಲಮಾಣಿ, ಗ್ರಾಪಂ ಅಧ್ಯಕ್ಷೆ ಲಲಿತಾ ಹಿರೇಬಿದರಿ, ಉಪಾಧ್ಯಕ್ಷೆ ನೀಲಮ್ಮ ಪ್ರಜಾರ, ಶ್ರೀಮಠದ ಅಧ್ಯಕ್ಷ ಫಕ್ಕೀರಪ್ಪಗೌಡ್ರ, ಜನಾರ್ಧನ ಕಡೂರ, ಎಂ.ಬಿ. ಚಿನ್ನಪ್ಪನವರ, ಅರುಣಸ್ವಾಮಿ ಹಿರೇಮಠ, ಡಾಕೇಶ ಲಮಾಣಿ, ಗುರುಶಾಂತ ಬಾಗಿಲದವರ, ಶಿವಣ್ಣ ಬಣಕಾರ, ಗೋಪಾಲ ಕೊಡ್ಲೇರ, ಗುಡ್ಡಪ್ಪ ಹೆಡಿಯಾಲ, ಪ್ರಕಾಶ ಚನ್ನಗೌಡ್ರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net