ಉರಿಯುವ ಮನೆಯಿಂದ ಗಳ ಹಿರಿಯುವ ಕೆಲಸವನ್ನು ಕಾಂಗ್ರೆಸ್​ ಮಾಡುತ್ತಿದೆ

Pressmeet
Published on

ಬೆಂಗಳೂರು: ಕರೊನಾ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಂಭೀರ ಆರೋಪಕ್ಕೆ ಸರ್ಕಾರದ ಐವರು ಸಚಿವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡುತ್ತಿದ್ದಾರೆ.

ಡಿಸಿಎಂ ಡಾ.ಅಶ್ವತ್ಥನಾರಾಯಣ, ಸಚಿವರಾದ ಬಿ.ಶ್ರೀರಾಮುಲು, ಬಸವರಾಜ ಬೊಮ್ಮಾಯಿ, ಆರ್.ಅಶೋಕ್ ಹಾಗೂ ಡಾ.ಸುಧಾಕರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದಾರೆ.

150 ವರ್ಷ ಆಳಿದ ಪಕ್ಷ, ನೂರಾರು ಹಗರಣದಲ್ಲಿ ಭಾಗಿಯಾಗಿ ಸಾವಿರಾರು ಕೋಟಿ ಲೂಟಿ ಮಾಡಿದೆ. ಉರಿಯುವ ಮನೆಯಲ್ಲಿ ಗಳ ಇರಿಯುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ಸಚಿವ ಆರ್.ಅಶೋಕ್ ಕಿಡಿಕಾರಿದರು.

ಕೋವಿಡ್ ಸಂದರ್ಭದಲ್ಲಿ ಸಹಕಾರ ನೀಡಬೇಕಾದವರು ಜನರ ಮನಸ್ಸಿನಲ್ಲಿ ವಿಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಒಂದು ಯುನಿಟ್ ವೆಂಟಿಲೇಟರ್​ಗೆ 21.73 ಲಕ್ಷ ರೂ. ಕೊಟ್ಟು ಖರೀದಿಸಿದ್ದಾರೆ. ಜನವರಿ 2019ರಲ್ಲಿ ತಲಾ 14.51 ಲಕ್ಷ ರೂ. ನಂತೆ 9 ಯುನಿಟ್ ಖರೀದಿಸಲಾಗಿದೆ. ಜುಲೈ 8, 2019ರಲ್ಲಿ ತಲಾ 15.12 ಲಕ್ಷ ರೂ.ನಂತೆ 28 ಯುನಿಟ್ ಖರೀದಿ ಮಾಡಿದ್ದಾರೆ. ಆದರೆ ಈಗ ತಲಾ 5.5 ಲಕ್ಷ ರೂ.ನಂತೆ 80 ಯುನಿಟ್​ಗಳನ್ನು ಖರೀದಿ ಮಾಡಲಾಗಿದೆ ಎಂದು ತಿಳಿಸಿದರು.

ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಕಾಮಾಲೆ ಕಣ್ಣಿಗೆ ಕಾಣಿಸುವುದೆಲ್ಲ ಹಳದಿಯೇ, ಈ ಮುಂಚೆಯೂ ಸಾಕಷ್ಟು ಆಪಾದನೆ ಮಾಡಿದ್ದರು. ನಾವು ಇಲಾಖಾವಾರು ಅನುಮಾನುಗಳಿಗೆ ಉತ್ತರ ಕೊಡುತ್ತೇವೆ. 750 ಕೋಟಿ ರೂ. ಖರ್ಚು ಮಾಡಿದ್ದಾರೆಂದು ಹೇಳಿದ್ದಾರೆ. ಆದರೆ, ಇದುವರೆಗೂ 290 ಕೋಟಿ ರೂ. ಮಾತ್ರ ಖರ್ಚು ಮಾಡಲಾಗಿದೆ. ಪಿಪಿಇ ಕಿಟ್​ ಖರೀದಿಯಲ್ಲೂ ಸಹ ಅಕ್ರಮ ನಡೆದಿಲ್ಲ. ಹೀಗಾಗಿ ಕಾಂಗ್ರೆಸ್​ನವರು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಡಿಸಿಎಂ ಅಶ್ವಥ್​ ನಾರಾಯಣ್​ ಅವರು ಟೀಕಿಸಿದರು.

ಎನ್​ಡಿಆರ್​ಎಫ್ ನಿಧಿಯಿಂದ 233 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ ಕಾಂಗ್ರೆಸ್​ನವರು 733 ಕೋಟಿ ರೂ. ಬಿಡುಗಡೆ ಅಂತ ಸುಳ್ಳು ಆರೋಪ ಮಾಡಿದ್ದಾರೆ. ಆರೋಗ್ಯ ಇಲಾಖೆಯಿಂದ ಖರ್ಚಾಗಿರುವುದು 290 ಕೋಟಿ ರೂ. ಆದರೆ, ಕಾಂಗ್ರೆಸ್ ನವರು 750 ಕೋಟಿ ರೂ. ಖರ್ಚಾಗಿದೆ ಎಂದು ಆರೋಪ ಮಾಡಿದ್ದಾರೆ. ಕಾಂಗ್ರೆಸ್ ನವರ ಹಸಿ ಸುಳ್ಳಿಗೆ ದಾಖಲೆ ಸಮೇತ ಮಾಹಿತಿ ನೀಡಿದ್ದೇವೆ ಎಂದರು.

ಚೀನಾದಿಂದ ಪಿಪಿಇ ಕಿಟ್ ಖರೀದಿಸಲಾಗಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಡಿಸಿಎಂ, ಮಾರ್ಚ್ ಹಾಗೂ ಏಪ್ರಿಲ್​ನಲ್ಲಿ ಪಿಪಿಇ ಕಿಟ್ ತರಿಸಲಾಗಿತ್ತು. ಆ ಸಂದರ್ಭದಲ್ಲಿ ಯುದ್ಧ ಏನು ಇರಲಿಲ್ಲ. ಚೀನಾ ಜತೆಗಿನ ಸಂಬಂಧ ಚನ್ನಾಗಿದ್ದ ಸಂದರ್ಭದಲ್ಲಿ ಪಿಪಿಇ ಕಿಟ್ ತರಿಸಲಾಗಿತ್ತು. ಇದರ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net