ಸಿದ್ದರಾಮಯ್ಯ ನಿಲುವು ಬಹಿರಂಗವಾಗಲಿ: ವಿಜಯೇಂದ್ರ | Separate religion status demand

bjp mla b.y.vijayendra
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
Published on

ಬೆಂಗಳೂರು: ಎಲ್ಲ ಸಮಾಜ, ಧರ್ಮಗಳನ್ನು ರಕ್ಷಿಸುವ ಆದ್ಯ ಕರ್ತವ್ಯ ಮುಖ್ಯಮಂತ್ರಿಗಳಿಗೆ ಇರಬೇಕಾಗುತ್ತದೆ. ಬಸವೇಶ್ವರರ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ಇಡುವುದನ್ನು ಸ್ವಾಗತಿಸುತ್ತೇವೆ. ಆದರೆ, ಸಿದ್ದರಾಮಯ್ಯನವರ ಅಂತರಂಗದಲ್ಲಿ ಏನಿದೆ ಎಂಬುದನ್ನು ಬಹಿರಂಗ ಪಡಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಬಹಿರಂಗವಾಗಿ ಹೇಳುವುದು ಬೇರೆ. ಮುಖ್ಯಮಂತ್ರಿಗಳ ಅಂತರಂಗದ ಅಪೇಕ್ಷೆ ಏನೆಂಬುದನ್ನು ಅವರು ಬಹಿರಂಗಪಡಿಸಬೇಕಿದೆ ಎಂದರು.

ಪ್ರತ್ಯೇಕ ಧರ್ಮದ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಇದನ್ನು ಪತ್ರಿಕೆಗಳಲ್ಲಿ ಗಮನಿಸಿದ್ದೇನೆ. ವೀರಶೈವ ಲಿಂಗಾಯತ ಅಥವಾ ಲಿಂಗಾಯತ ಧರ್ಮದ ಕೂಗು ಇವತ್ತು ಮುನ್ನೆಲೆಗೆ ಬಂದಿದ್ದು, ಅದರ ಹಿನ್ನೆಲೆಯಲ್ಲಿ ಇದ್ದು ಮಾತನಾಡುವವರು ಯಾರೆಂಬ ಅರಿವು ಸಮಾಜಕ್ಕೆ ಇದೆ ಎಂದು ತಿಳಿಸಿದರು.

ನಾವಿಂದು ಹಿಂದೂ ಧರ್ಮವನ್ನು ರಕ್ಷಿಸಬೇಕಿದೆ. ಧರ್ಮ ಒಡೆಯುವ ದುಸ್ಸಾಹಸವನ್ನೂ ಗಮನಿಸಬೇಕಿದೆ. ಇದರ ಮಧ್ಯೆ ಸಮಾಜ ಒಗ್ಗೂಡಿಸುವ ಕೆಲಸ ಆಗಬೇಕಾಗಿದೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಸಮಾಜ, ಒಕ್ಕಲಿಗ, ವೀರಶೈವ ಲಿಂಗಾಯತ ಸಮಾಜ, ಸೇರಿ ಎಲ್ಲ ಸಮಾಜಗಳಲ್ಲಿ ಆರ್ಥಿಕ- ಸಾಮಾಜಿಕ- ಶೈಕ್ಷಣಿಕವಾಗಿ ಹಿಂದುಳಿದವರು ಇದ್ದಾರೆ.

ಆತುರ ಏಕೆ ?

ಎಲ್ಲ ಸಮಾಜಕ್ಕೆ ನ್ಯಾಯ ಕೊಡುವ ಕೆಲಸ ಆಗಬೇಕಾಗಿದೆ. ಸಿದ್ದರಾಮಯ್ಯನವರಿಗೆ ಆತುರವೇಕೆ? ಎಂದು ಕೇಳಿದರು.

ಜಾತಿ ಜನಗಣತಿಯಲ್ಲಿ ಕೆಲವೆಡೆ ವಿಕಲಚೇತನರನ್ನೂ ಬಳಸಿಕೊಳ್ಳುತ್ತಿದ್ದಾರೆ. ಸಮರ್ಪಕ ಸಿದ್ಧತೆಯೂ ಇಲ್ಲ; ಆತುರಾತುರವಾಗಿ ಮುಖ್ಯಮಂತ್ರಿಗಳೇ 15 ದಿನದಲ್ಲಿ ಮುಗಿಸಬೇಕೆನ್ನುತ್ತಾರೆ. ಈ ಆತುರ ಯಾಕೆ ಎಂಬುದು ಯಕ್ಷಪ್ರಶ್ನೆ ಎಂದರು.

ಕೆಲವು ಶಕ್ತಿಗಳು ಸಮಾಜ ಒಡೆಯುವ ಕೆಲಸಕ್ಕೂ ಕೈ ಹಾಕಿವೆ. ಹಿಂದೂ ಧರ್ಮವನ್ನು ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಹಿಂದೆಯೂ ಇಂಥ ಷಡ್ಯಂತ್ರ, ಪ್ರಯತ್ನ ನಡೆದಿತ್ತು. ಅದರಲ್ಲಿ ಯಶಸ್ಸು ಸಿಕ್ಕಿರಲಿಲ್ಲ. ಮುಂದೆಯೂ ಸಿಗಲು ಸಾಧ್ಯವಿಲ್ಲ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net