

ಬೆಂಗಳೂರು: ವಕ್ಫ್ ಹೆಸರಿನಲ್ಲಿ ಜನರ ಜಮೀನುಗಳನ್ನು ನುಂಗಿ ಹಾಕಲಾಗಿದೆ. ವಕ್ಫ್ ಸ್ವತ್ತು ರಕ್ಷಣೆ ಜತೆಗೆ ಬೇರೆಯವರ ಸ್ವತ್ತು ವಕ್ಫ್ ಕಬಳಿಸದಂತೆ ತಡೆಯುವುದು ಕೇಂದ್ರ ಸರ್ಕಾರದ ‘ಉಮ್ಮೀದ್’ ಕಾಯ್ದೆ ಉದ್ದೇಶವಾಗಿದೆ. ಇದರ ವಿರುದ್ಧ ಮಂಗಳೂರಿನಲ್ಲಿ ಸಿದ್ದರಾಮಯ್ಯ ಪ್ರಾಯೋಜಿತ ಪ್ರತಿಭಟನೆ ನಡೆದಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಮುಸ್ಲಿಮರಿಗೆ ಪ್ರತ್ಯೇಕ ಕಾನೂನು ನೀಡಲು ಸಾಧ್ಯವಿಲ್ಲ. ನೆಲದ ಕಾನೂನನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.
ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಜನಿವಾರಕ್ಕೆ ಅವಕಾಶ ನೀಡದೆ ಅಪಮಾನ ಮಾಡಲಾಗಿದೆ. ಬ್ರಾಹ್ಮಣರು ಮಾತ್ರವಲ್ಲ, ವೈಶ್ಯರು, ಮರಾಠರು ಸಮುದಾಯದವರು ಜನಿವಾರ ಹಾಕುತ್ತಾರೆ. ಜನಿವಾರ ಧರಿಸುವ ಎಲ್ಲ ಸಮುದಾಯಗಳಿಗೆ ಅವಮಾನ ಮಾಡಲಾಗಿದೆ ಎಂದು ಆರ್.ಅಶೋಕ್ ಕಿಡಿಕಾರಿದರು.
ಮುಸ್ಲಿಮ್ ಹುಡುಗಿಯರ ಹಿಜಾಬ್‌ಗೆ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳ ಜನಿವಾರಕ್ಕೆ ಅವಕಾಶ ನಿರಾಕರಿಸಿದ್ದು, ಹಿಂದುಗಳ ಬಗ್ಗೆ ಸರ್ಕಾರಕ್ಕಿರುವ ಕೋಪ ಎಷ್ಟೆಂದು ಗೊತ್ತಾಗುತ್ತದೆ. ಈ ಘಟನೆಗೆ ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಿ, ಅಧಿಕಾರಿಗಳನ್ನು ಮಾಡಬೇಕು ಎಂದು ಆಗ್ರಹಿಸಿದರು.
ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-2015ರ ದತ್ತಾಂಶ (ಜಾತಿ ಜನಗಣತಿ)ಗಳ ವರದಿ ಸಚಿವ ಸಂಪುಟ ಸಭೆಗೆ ಮಂಡಿಸಲು 10 ವರ್ಷಗಳಾದವು. ಆದರೆ ಈ ಬಗ್ಗೆ ಯಾವುದೇ ನಿರ್ಧಾರ ಮಾಡಲು ಸಾಧ್ಯವಾಗಿಲ್ಲ. ಈ ವರದಿಗೆ ‘ನಾಳೆ ಬಾ’ ಎನ್ನುವ ಸ್ಥಿತಿ ಎದುರಾಗಿದೆ ಎಂದು ಆರ್.ಅಶೋಕ್ ಛೇಡಿಸಿದರು.
ನನ್ನ ಸೀಟು ಉಳಿದರೆ ಸಾಕು ಎಂಬ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ವರದಿ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಜಾತಿಗಳನ್ನು ಒಡೆದು ಹಾಕಿದ್ದಾರೆ. ಸಚಿವ ಸಂಪುಟ ಸಭೆಯಲ್ಲೂ ಒಡಕು ಪ್ರತಿಧ್ವನಿಸಿದೆ ಎಂದು ಹೇಳಿದರು.
ಸಚಿವರಿಗೆ ಲಿಖಿತ ಅಭಿಪ್ರಾಯ ನೀಡುವಂತೆ ಸೂಚಿಸಲಾಗಿದೆ. ಸಚಿವ ಸಂಪುಟದ ಸದಸ್ಯರನ್ನೇ ಜಾತಿಯ ಬಲೆಯಲ್ಲಿ ಸಿಕ್ಕಿ ಹಾಕಿಸಿ ಅಪಮಾನ ಮಾಡಲಾಗುತ್ತಿದೆ. ನವೆಂಬರ್‌ನಲ್ಲಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾಗಿದೆ. ಆ ಸಮಯದಲ್ಲಿ ಇದನ್ನು ಬಳಸಿಕೊಳ್ಳಲಾಗುತ್ತದೆ ಎಂದು ಆರ್.ಅಶೋಕ್ ವಿಶ್ಲೇಷಿಸಿದರು.
ಸಿದ್ದರಾಮಯ್ಯ ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಆಯೋಗಕ್ಕೆ ಆದೇಶಿಸಿದ್ದರು. ವರದಿ ಸಿದ್ಧವಾಗಿದ್ದರೂ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಬಾಯಿಗೆ ಹೊಲಿಗೆ ಹಾಕಿಕೊಂಡಿದ್ದರು. ಆಗಲೇ ಜಾತಿ ಗಣತಿ ವರದಿ ಬಿಡುಗಡೆ ಮಾಡಬಹುದಿತ್ತು ಎಂದರು.
ಸಿಎಂ ಸಿದ್ದರಾಮಯ್ಯ ಗ್ಯಾಂಗ್ ಎಲ್ಲೋ ಕುಳಿತು ಸಿದ್ಧಪಡಿಸಿದ ವರದಿಯನ್ನು ಯಾರೂ ಒಪ್ಪ ಬೇಕಿಲ್ಲ. 10 ವರ್ಷಗಳಲ್ಲಿ ಒಂದು ಕೋಟಿ ಮಕ್ಕಳು ಹುಟ್ಟಿಕೊಂಡಿದ್ದಾರೆ ಎಂದುಕೊಂಡರೆ ಇವರನ್ನು ಯಾವ ವರ್ಗಕ್ಕೆ ಸೇರಿಸುತ್ತಾರೆ. ಹೊಸ ಪೀಳಿಗೆಯ ಭವಿಷ್ಯ, ಮೀಸಲಾತಿಯ ಮಾನದಂಡವೇನು ? ಎಂದು ಆರ್.ಅಶೋಕ್ ಕೇಳಿದರು.