

ಬೆಂಗಳೂರು: ರಾಜ್ಯದಲ್ಲಿ ಗುರಿ ಮೀರಿದ ತೆರಿಗೆ ಸಂಗ್ರಹಣೆ ಮಾಡಲು ತೆರಿಗೆ ವಂಚನೆ, ಕಳ್ಳತನ ಹಾಗೂ ಸೋರಿಕೆ ಪ್ರಕರಣಗಳ ಬಗ್ಗೆ ತೀವ್ರ ನಿಗಾವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ವಾಣಿಜ್ಯ ತೆರಿಗೆ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ತೆರಿಗೆ ಸಂಗ್ರಹ ಬೆಳವಣಿಗೆ ದರ ಶೇ.19.2 ರಷ್ಟಿದ್ದು, ಇದು ದೇಶದಲ್ಲಿಯೇ ಅತಿ ಹೆಚ್ಚಿನದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ಇಷ್ಟಕ್ಕೆ ಸಮಾಧಾನ ಪಟ್ಟುಕೊಳ್ಳದೆ ತೆರಿಗೆ ವಂಚನೆ ಪ್ರಕರಣಗಳನ್ನು ಹೆಚ್ಚೆಚ್ಚು ಪತ್ತೆ ಹಚ್ಚಿ ತೆರಿಗೆ ಸಂಗ್ರಹ ಗುರಿಯನ್ನು ದಾಟಿ ಸಾಧನೆ ಮಾಡುವ ಅವಕಾಶಗಳಿವೆ. ಇದನ್ನು ಸಾಧಿಸಿ ತೋರಿಸಿ ಎಂದು ಹುರಿದುಂಬಿಸಿದರು.
ಇಲಾಖೆ ದಾಳಿಯನ್ನು ಇನ್ನಷ್ಟು ತೀವ್ರವಾಗಿ ನಡೆಸುವ ಮೂಲಕ ತೆರಿಗೆ ವಂಚನೆ ತಡೆಗಟ್ಟುವ ಕಡೆಗೆ ಹೆಚ್ಚು ಆಸಕ್ತಿ ಕೊಡಬೇಕು ಎಂದು ನಿರ್ದೇಶನ ನೀಡಿದರು. ದೇಶದ ಸರಾಸರಿ ತೆರಿಗೆ ಸಂಗ್ರಹ ಬೆಳವಣಿಗೆ ದರ ಶೇ.15 ಮಾತ್ರ ಇದೆ. ದೇಶದ ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ ರಾಜ್ಯದ ಪಾಲು ಶೇ. 9.4 ಇದೆ. ಕಳೆದ ಬಾರಿಗಿಂತ ಈ ಬಾರಿ ರಾಜ್ಯದ ಪಾಲು ಹೆಚ್ಚಾಗಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ವಿವರಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, ಶೇ.24ರ ಬೆಳವಣಿಗೆ ಗುರಿಯನ್ನು ನೀಡಲಾಗಿದೆ, ಈ ಗುರಿ ದಾಟಿ ಸಾಧಿಸಬೇಕು. ತೆರಿಗೆ ವಂಚನೆ ಮಾಡುವವರ ವಿರುದ್ಧ ಕ್ರಮ ಕೈಗೊಂಡು ಸೋರಿಕೆ ತಡೆಗಟ್ಟಬೇಕು ಎಂದು ನಿರ್ದೇಶನ ನೀಡಿದರು.
ತೆರಿಗೆ ಸಂಗ್ರಹಣೆಯಲ್ಲಿ ಹಿಂದೆ ಉಳಿದವರು ಎಲ್ಲ ಪ್ರಯತ್ನ ಮಾಡಬೇಕು. ಜಾಗೃತ ದಳದವರು ಸಹಕರಿಸಬೇಕು. ಎರಡು ತಿಂಗಳ ನಂತರ ಮತ್ತೆ ಪ್ರಗತಿ ಪರಿಶೀಲಿಸಲಾಗುವುದು. ಆ ವೇಳೆಗೆ ಇನ್ನಷ್ಟು ವರದಿ ನೀಡಿ. ಮುಂದಿನ ಸಭೆ ವೇಳೆಗೆ ಒಟ್ಟಾರೆ ಪರಿಸ್ಥಿತಿ ಈಗಿರುವುದಕ್ಕಿಂತ ಹೆಚ್ವು ಆಶಾದಾಯವಾಗಿರುವಂತೆ ಕ್ರಮ ವಹಿಸಿ ಎಂದು ಸೂಚಿಸಿದರು.
ಉತ್ಪನ್ನಗಳಲ್ಲಿ ತೆರಿಗೆ ವಂಚನೆ: ಅನೇಕ ಉತ್ಪನ್ನಗಳಲ್ಲಿ ತೆರಿಗೆ ವಂಚನೆ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಹೆಚ್ಚಿನ ಗಮನಹರಿಸಿ ತೆರಿಗೆ ಸಂಗ್ರಹಿಸಬೇಕು. ಹೆಚ್ಚು ತೆರಿಗೆ ಸಂಗ್ರಹ ಮಾಡಿದರೆ ಅಭಿವೃದ್ಧಿ ಕೆಲಸ ಮಾಡಲು ಹೆಚ್ಚು ಅನುಕೂಲವಾಗುತ್ತದೆ. ಸಾಮೂಹಿಕ ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕು ಎಂದು ಹೇಳಿದರು.
ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಹಣಕಾಸು ಇಲಾಖೆ ಕಾರ್ಯದರ್ಶಿಗಳಾದ ಡಾ. ಪಿ.ಸಿ. ಜಾಫರ್ ಹಾಗೂ ಡಾ. ಎಂ.ಟಿ. ರೇಜು, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ.ಶಿಖಾ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಮತ್ತು ನಸೀರ್ ಅಹ್ಮದ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮುಖ್ಯ ಖನಿಜ ಮತ್ತು ಉಪ ಖನಿಜ ಕಳ್ಳತನ, ತೆರಿಗೆ ವಂಚನೆ ಬಗ್ಗೆ ತೀವ್ರ ನಿಗಾ ಇಟ್ಟು ಅಗತ್ಯ ಕ್ರಮ ಕೈಗೊಳ್ಳಲು ಸಿಎಂ ಸೂಚನೆ ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಸಾರಿಗೆ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ವೇಳೆ ಇಲಾಖೆಯ ಕಾರ್ಯಕ್ಷಮತೆ ಮತ್ತು ತೆರಿಗೆ ಸಂಗ್ರಹದ ಗುರಿ ತಲುಪಲು ತೆಗೆದುಕೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಮುಖ್ಯ ಖನಿಜ ಮತ್ತು ಉಪ ಖನಿಜ ಕಳ್ಳತನ, ತೆರಿಗೆ ವಂಚನೆ ಬಗ್ಗೆ ತೀವ್ರ ನಿಗಾ ಇಡಬೇಕು. ಡ್ರೋನ್ ಸಮೀಕ್ಷೆ ಮೂಲಕ ಸರ್ಕಾರಕ್ಕೆ ಸುಳ್ಳು ಲೆಕ್ಕ, ತಪ್ಪು ಲೆಕ್ಕ ಕೊಡುತ್ತಿರುವ ಗಣಿಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಬೇಕು. ಡ್ರೋನ್ ಸಮೀಕ್ಷೆ ಬಳಿಕ ನೈಜ ಚಿತ್ರಣ ದೊರಕುತ್ತದೆ. ಹೀಗಾಗಿ ಈ ಪ್ರಯತ್ನದ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲಿಸುವಂತೆ ಸಲಹೆ ನೀಡಿದರು. ಅರಣ್ಯ ಮತ್ತು ಗಣಿ ಇಲಾಖೆ ನಡುವೆ ಇರುವ ವ್ಯಾಜ್ಯ ಮತ್ತು ವಿವಾದಗಳನ್ನು ತ್ವರಿತವಾಗಿ ಬಗೆಹರಿಸಲು ಎರಡೂ ಇಲಾಖೆಗಳ ಸಚಿವರ ನೇತೃತ್ವದಲ್ಲಿ ಪ್ರತ್ಯೇಕ ಸಭೆಯನ್ನು ತ್ವರಿತವಾಗಿ ನಡೆಸಬೇಕು. ಅರಣ್ಯ ಪ್ರದೇಶದಲ್ಲಿ ಬಿದ್ದಿರುವ ಗಣಿ ಸಂಪತ್ತು ಸೋರಿಕೆ ಆಗದಂತೆ, ಕಳ್ಳತನ ಆಗದಂತೆ ಕಟ್ಟೆಚ್ಚರ ವಹಿಸಬೇಕೆಂದರು.
ಸಾರಿಗೆ-ಗಣಿ-ಮುದ್ರಾಂಕ ಇಲಾಖೆ ತೆರಿಗೆ ಸಂಗ್ರಹದಲ್ಲಿ ಆಶಾದಾಯಕ ಬೆಳವಣಿಗೆ ಕಾಣುತ್ತಿದೆ. ಆದರೆ ಗುರಿ ಮುಟ್ಟುವ ದಿಕ್ಕಿನಲ್ಲಿ ಸಮರ್ಪಕ ಕಾರ್ಯಯೋಜನೆಯನ್ನು ರೂಪಿಸಿಕೊಳ್ಳಿ ಎಂದು ಮುಖ್ಯಮಂತ್ರಿಗಳು ಮೂರೂ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಾರಿಗೆ ಆಯುಕ್ತ ಎನ್.ವಿ.ಪ್ರಸಾದ್, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಾರ್ಯದರ್ಶಿ ರಶ್ಮಿ ಮಹೇಶ್, ನೋಂದಣಿ ಮಹಾ ಪರಿವೀಕ್ಷಕರಾದ ಮಮತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜಾ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಕೆ. ಗೋವಿಂದರಾಜು ಮತ್ತು ನಸೀರ್ ಅಹ್ಮದ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪುರುಷ ಪ್ರಯಾಣಿಕರ ಸಂಖ್ಯೆ ಹೆಚ್ಚಳ!: ಶಕ್ತಿ ಯೋಜನೆ ಯಿಂದಾಗಿ ಪುರುಷ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿ ಯೋಜನೆ ಯಶಸ್ವಿ ಆಗಿದೆ ಎನ್ನುವ ಮಾಹಿತಿ ಅಧಿಕಾರಿಗಳಿಂದ ಪಡೆದ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು. ಹೊಸ ಬಸ್ ಗಳ ಖರೀದಿ ಬಳಿಕ ಹೊಸ ಚಾಲಕರು ಮತ್ತು ನಿರ್ವಾಹಕರ ಅಗತ್ಯ ಬೀಳುತ್ತದೆ. ಅವರ ನೇಮಕದ ಕುರಿತು ಪ್ರತ್ಯೇಕ ಸಭೆ ನಡೆಸಲು ನಿರ್ಧರಿಸಲಾಯಿತು.
ಬೆಂಗಳೂರು: ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ವಸತಿ ಯೋಜನೆಗಳಲ್ಲಿ ಫಲಾನುಭವಿಗಳ ವಂತಿಗೆ ಪಾವತಿ ಆಗುತ್ತಿಲ್ಲ. ಹೀಗಾಗಿ 2015 ರಿಂದ ಒಂದೇ ಒಂದು ಮನೆ ಕೊಡಲು ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲೇ ವಸತಿ ಸಚಿವ ಜಮೀರ್ ಅಹಮದ್ ಖಾನ್ ವಸ್ತುಸ್ಥಿತಿ ಬಿಚ್ಚಿಟ್ಟರು. ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒಗಳ ಸಭೆಯಲ್ಲಿ ವಸತಿ ಇಲಾಖೆ ಯೋಜನೆ ಬಗ್ಗೆ ಪ್ರಸ್ತಾಪಿಸಿ, ಸರ್ಕಾರ ನೆರವು ನೀಡಿದರೆ ಮಾತ್ರ ಯೋಜನೆ ಪೂರ್ಣಗೊಳಿಸಿ ಬಡವರಿಗೆ ಮನೆ ಕೊಡಲು ಸಾಧ್ಯ ಎಂದು ಪ್ರತಿಪಾದಿಸಿದರು. ವಸತಿ ಇಲಾಖೆ ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಸಭೆ ಕರೆಯೋಣ ಎಂದು ಸಿಎಂ ಹೇಳಿದರು.