ಮೋದಿ ಎಷ್ಟೇ ಬಾರಿ ರಾಜ್ಯಕ್ಕೆ ಬಂದರೂ ಕಾಂಗ್ರೆಸ್ಸೇ ಅಧಿಕಾರಕ್ಕೆ ಬರುತ್ತದೆ : ಸಿದ್ದರಾಮಯ್ಯ

Siddaramaiah
Published on

ಬೆಳಗಾವಿ: ಬಿಜೆಪಿ ಅವರು ಎಷ್ಟೇ ಸುಳ್ಳು ಹೇಳಿದರೂ, ಪ್ರಧಾನಿ ನರೇಂದ್ರ ಮೋದಿ ಅವರು ಎಷ್ಟು ಬಾರಿ ರಾಜ್ಯಕ್ಕೆ ಬಂದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡ್ವಾಣಿ ಅವರನ್ನು ಸೈಡ್ ಲೈನ್ ಮಾಡಿ ಅವಮಾನ ಮಾಡಿದ್ದು ಯಾರು?ರಾಜಕೀಯವಾಗಿ ಮೋದಿಯವರಿಗೆ ಜೀವನ ಕೊಟ್ಟವರನ್ನ ಸೈಡ್ ಲೈನ್ ಮಾಡಿದ್ದಾರೆ. ಎಷ್ಟೇ ಸುಳ್ಳು ಹೇಳಿದರೂ ಎಷ್ಟೇ ಬಾರಿ ರಾಜ್ಯಕ್ಕೆ ಬಂದರೂ ಈ ಬಾರಿ ಬಿಜೆಪಿ ತೆಗೆದು ಹಾಕಬೇಕು ಅಂತ ಜನ ತೀರ್ಮಾನ ಮಾಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್​​ ಅಧಿಕಾರಕ್ಕೆ ಬರುತ್ತದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ಬೆಳಗಾವಿ ರೋಡ್ ಶೋ ಗೆ 500 ರೂಪಾಯಿ ಕೊಟ್ಟು ಜನರನ್ನು ಕರೆದುಕೊಂಡು ಬಂದಿದ್ದರು ಅಂತಾ ನಾನು ಹೇಳಿದ್ದೆ. ಅದನ್ನು ಬಿಜೆಪಿಯವರು ತಿರುಚಿ ಕಾಂಗ್ರೆಸ್ ಸಭೆಗೆ ಜನರನ್ನು 500 ರೂ. ಕೊಟ್ಟು ಕರೆದುಕೊಂಡು ಬರುತ್ತಾರೆ ಎನ್ನುವ ಅರ್ಥ ಬರುವಂತೆ ಮಾಡಿದ್ದಾರೆ. ಬಿಜೆಪಿ ಅವರು ಪ್ರತಿ ಸಭೆಗೂ ಕೂಡ ಸರ್ಕಾರದ ಹಣ, ಲೂಟಿ ಹೊಡದ ಹಣ, ಲಂಚದ ಹಣದಿಂದ ಪ್ರಚಾರ ಕೈಗೊಳ್ಳುತ್ತಾರೆ. ಚುನಾವಣೆ ಆಯೋಗ ಕೂಡ ಇಂದು ಸುಮ್ಮನೆ ಇದೆ. ಕೂಡಲೇ ಚುನಾವಣೆ ಘೋಷಣೆ ಮಾಡಿ, ನೀತಿ ಸಂಹಿತೆ ಜಾರಿಯಾಗಲಿ ಅಂತಾ ನಾನು ಚುನಾವಣೆ ಆಯೋಗಕ್ಕೆ ಮನವಿ ಕೊಡುತ್ತೇನೆ ಎಂದರು.

ಅಶ್ವಥ್ ನಾರಾಯಣ್ ಟಿಪ್ಪು ಮುಗಿಸಿದ ರೀತಿಯಲ್ಲಿ ನನ್ನಾ ಮುಗಿಸಿ ಎನ್ನುತ್ತಿದ್ದರು. ಆಗ ಪ್ರಧಾನ ಮಂತ್ರಿ ತಲೆ ಮೇಲೆ ಹೊಡೆದು ಹೀಗೆಲ್ಲ ಮಾತನಾಡ ಬೇಡಾ ಎಂದು ಹೇಳ ಬೇಕಿತ್ತು. ನೀನು ಮಂತ್ರಿಯಾಗಲು ಯೋಗ್ಯನಲ್ಲ ಎಂದು ಸಚಿವ ಸ್ಥಾನದಿಂದ ಕೆಳಗಿಳಿಸಬೇಕಿತ್ತು ಎಂದು ಕಿಡಿಕಾರಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net