ಸಿದ್ದರಾಮಯ್ಯ ಅವರು ಅನೈತಿಕವಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದಾರೆ

shobha
Published on

ಎರಡು ಪ್ರಕರಣಗಳಲ್ಲಿ ಸಿಲುಕಿರುವ ಸಿದ್ದರಾಮಯ್ಯ ಅವರು ಅನೈತಿಕವಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಸಂಬಂಧ ಪ್ರತಿಕ್ರಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಎರಡು ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಒಂದು ಮುಡಾ ವಿಚಾರದಲ್ಲಿ ಸೈಟ್ ವಾಪಸ್ ಕೊಟ್ಟು ಸಿಲುಕಿಕೊಂಡಿದ್ದಾರೆ. ಇನ್ನೊಂದು ವಾಲ್ಮೀಕಿ ಹಗರಣ. ಜನರ ದುಡ್ಡನ್ನು ಚುನಾವಣೆ ಉಪಯೋಗ ಮಾಡಿದ್ದಾರೆ. ಈ ಸಂಬಂಧ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂತ್ರಿ ಒಬ್ಬರು ರಾಜೀನಾಮೆ ನೀಡಿದ್ದಾರೆ. ಇದರ ನೇರ ಹೊಣೆ ಸಿದ್ದರಾಮಯ್ಯ ಹೊರಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಅವರೇ ಹಣಕಾಸು ಸಚಿವರಾಗಿದ್ದಾರೆ. ನಮ್ಮ ಹಣ ತೆಲಂಗಾಣ ಮತ್ತು ಆಂಧ್ರಪ್ರದೇಶದ ಚುನಾವಣೆಗೆ ಹೋಗಿದೆ. ಇದನ್ನು ಈಗಾಗಲೇ ಇಡಿ ಸೇರಿದಂತೆ ಇತರೆ ಸಂಸ್ಥೆಗಳು ತಿಳಿಸಿವೆ. ಹಾಗಾಗಿ ಈ ಎರಡು ಪ್ರಕರಣದಲ್ಲೂ ಸಿದ್ದರಾಮಯ್ಯ ಆರೋಪಿ ಆಗಿದ್ದು, ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಲು ಅವರಿಗೆ ನೈತಿಕತೆ ಇಲ್ಲ. ಆದ್ದರಿಂದ ಸಿದ್ದರಾಮಯ್ಯ ತಕ್ಷಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಲೋಕಾಯುಕ್ತವನ್ನು ತೆಗೆದುಹಾಕಿದ್ದರು. ಈಗಲೂ ಲೋಕಾಯುಕ್ತ ತನಿಖೆಯ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎನಿಸುತ್ತಿದೆ. ಸೈಟ್ ವಾಪಸ್ ಮಾಡಿದ್ದು ಕಣ್ಮುಂದೆ ಇದೆ. ಅವರ ಕುಟುಂಬದವರೇ ಪತ್ರ ಬರೆದು ಸೈಟ್‌ಗಳನ್ನು ವಾಪಸ್ ಕೊಟ್ಟಿದ್ದಾರೆ, ಇದು ಯಾರ ತಪ್ಪು. ಸಿದ್ದರಾಮಯ್ಯ ಅವರು 1992 ರಿಂದಲೂ ಒಂದಲ್ಲಾ ಒಂದು ಸಂವಿಧಾನಿಕ ಸ್ಥಾನದಲ್ಲಿದ್ದಾರೆ. ಹೀಗಿರುವಾಗ ಇವರಿಗೆ ಗೊತ್ತಿಲ್ಲದೇ ಈ ರೀತಿ ಆಗಿದೆ ಎನ್ನುವುದು ಸುಳ್ಳು. ಆದ್ದರಿಂದ ಸಿದ್ದರಾಮಯ್ಯ ಅವರು ರಾಜಕೀಯದಲ್ಲಿ ಇರಲು ಲಾಯಕ್ಕಲ್ಲ ಎಂದು ಟೀಕಿಸಿದರು.
ನಾನು ಜಿಲ್ಲಾ ಉಸ್ತುವಾರಿ ಸಚಿವೆಯಾಗಿದ್ದಾಗ ವೈಭವದ ದಸರಾ ಮಾಡಿದ್ದವು. ದಸರೆಗೆ ಹೊಸ ಆಯಾಮ ಕೊಟ್ಟು, ಹೊಸ ಯೋಜನೆ ಜಾರಿ ಮಾಡಲಾಗಿತ್ತು. ಮೊದಲ ಬಾರಿ ರೈತ ದಸರಾ, ಮಹಿಳಾ ದಸರಾ ಆಯೋಜಿಸುವ ಮೂಲಕ ಗ್ರಾಮಾಂತರ ಪ್ರದೇಶದವರಿಗೂ ಮೈಸೂರು ತೋರಿಸುವ ಕೆಲಸ ಮಾಡಿದ್ದೇವು. ಇದನ್ನು ಎಲ್ಲ ಸರ್ಕಾರ ಮುಂದುವರೆಸಬೇಕು. ದಸರಾ ಜನರ ದಸರಾ ಆಗಬೇಕು. ಸರ್ಕಾರದ ದಸರಾ ಆಗಬಾರದು. ಹಿಂದೆ ಮಹಾರಾಜರ ದಸರಾ. ಈಗ ಜನರ ದಸರಾ ಆಗಬೇಕು ಎನ್ನುವ ಅಪೇಕ್ಷೆ ಇತ್ತು. ಈಗ ಕೆಲವನ್ನು ಇಟ್ಟುಕೊಂಡಿದ್ದಾರೆ, ಕೆಲವನ್ನು ಬಿಟ್ಟಿದ್ದಾರೆ ಎಂದರು.
ಚಾಮುಂಡಿಬೆಟ್ಟದಲ್ಲಿ ಭಕ್ತರಿಗೆ ಮತ್ತಷ್ಟು ಯೋಜನೆಗಳು ಜಾರಿಯಾಗಬೇಕಿವೆ. ಹೊಸ ಕಟ್ಟಡಗಳಿಂದ ಬೆಟ್ಟಕ್ಕೆ ಹಾನಿಯಾಗುವ ಭಯ ಇದೆ. ಬೆಟ್ಟವನ್ನು ಹಾಗೇ ಉಳಿಸಿಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net