

ಕೋಲಾರ: ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡುವಂತಹ ಸಂದರ್ಭ ಬಂದಿಲ್ಲ, ಸಿದ್ದರಾಮಯ್ಯ ಅವರೇ ಪೂರ್ಣ ಅವಧಿ ಮುಗಿಸುತ್ತಾರೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರ್ಖಗೆಯವರ ಕಾಲದಿಂದ ದಲಿತ ಸಿಎಂ ಕೂಗು ಬರುತ್ತಲೇ ಇದೆಯಾದರೂ ಮಾಡಿದಿಲ್ಲ. ಸದ್ಯಕ್ಕೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಇಳಿಯುವಂತಹ ಪರಿಸ್ಥಿತಿ ಎಂದಿಗೂ ಬರುವುದಿಲ್ಲ. ಒಂದು ವೇಳೆ ಬಂದರೆ ಹೈಕಮಾಂಡ್ ತೀಮಾರ್ನ ತೆಗೆದುಕೊಳ್ಳುತ್ತಾರೆ. ನಾನು ಸಿಎಂ ಆಕಾಂಕ್ಷಿಯಲ್ಲ ಎಂದರು.
ಚಿತ್ರದುರ್ಗದಲ್ಲಿ ಐಕ್ಯತಾ ಸಮಾವೇಶ ನಡೆದಾಗಿನಿಂದ ಎಸ್ಸಿ, ಎಸ್ಟಿ ಸಮುದಾಯದವರು ಕಾಂಗ್ರೆಸ್ನೊಂದಿಗೆ ಇದ್ದಾರೆ. ಅವರ ಬಲದಿಂದ 136 ಸ್ಥಾನಗಳು ಬಂದು ಸರ್ಕಾರ ಮಾಡಿದ್ದೇವೆ. ದಲಿತ ಸಿಎಂ ವಿಚಾರವನ್ನು ಹೈಕಮಾಂಡ್ಗೆ ಬಿಟ್ಟು, ಈಗಿನ ಮುಖ್ಯಮಂತ್ರಿಯೊಂದಿಗೆ ಸಂಪೂರ್ಣವಾಗಿ ಶಾಸಕರು, ಸಚಿವರು ಒಗ್ಗಟ್ಟಾಗಿ ನಿಂತು ಅವರ ಕೈಯನ್ನು ಬಲಪಡಿಸುತ್ತೇವೆ. ಜತೆಗೆ ಬಿಜೆಪಿಯ ಹುನ್ನಾರಗಳಿಗೆ ಪಾಠ ಹೇಳುವ ಶಕ್ತಿಯನ್ನು ತುಂಬಿತ್ತೇವೆ ಎಂದು ತಿಳಿಸಿದರು.
ಜಾತಿಗಣತಿ ವಿಚಾರವು ಸಂಪುಟದಲ್ಲಿ ಚರ್ಚೆಯಾಗಬೇಕಿದ್ದು, ಗಣತಿಯಿಂದಾಗಿ ಯಾವ ಸಮುದಾಯಕ್ಕೂ ಅನ್ಯಾಯವಾಗಲು ಅವಕಾಶವಿರುವುದಿಲ್ಲ. ಹಿಂದುಳಿದ ವರ್ಗದಲ್ಲಿ ನೂರಾರು ಉಪಜಾತಿಗಳಿವೆ ಅವರಿಗೆಲ್ಲ ನ್ಯಾಯ ಸಿಗಲು ಅಂಕಿಅಂಶಗಳು ಇರಬೇಕು. ಸದ್ಯ ಅಲ್ಲಿಯೂ ಕೆಲವೇ ಕೆಲವರು ಪ್ರಯೋಜನ ಪಡೆದುಕೊಳ್ಳುತ್ತಿದ್ದು, ಎಲ್ಲರಿಗೂ ಸಿಗುತ್ತಿಲ್ಲ. ಹೀಗಾಗಿ ಜಾತಿಗಣತಿ ಆರೋಗ್ಯಕರವಾಗಿರುತ್ತದೆಯೇ ಹೊರತು ಯಾರಿಗೂ ತೊಂದರೆಯಾಗುವುದಿಲ್ಲ. ಅದರ ಬಗ್ಗೆ ಸಂಶಯಬೇಡ. ಚರ್ಚೆಯಾದ ಬಳಿಕ ಏನಾದರೂ ಲೋಪದೋಷಗಳಿದ್ದರೆ ಸರಿಪಡಿಸಿಯೇ ಜಾರಿ ಮಾಡಲಾಗುವುದು ಎಂದು ಹೇಳಿದರು.
ಕೆಪಿಸಿಸಿ ಹಂತದಲ್ಲಿ ಸಮಸ್ಯೆ ಇತ್ಯರ್ಥ
ಪಕ್ಷದಲ್ಲಿ ಇತ್ತೀಚಿನ ಬೆಳವಣಿಗೆಗಳಿಂದಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಕಾರ್ಯಾಧ್ಯಕ್ಷರನ್ನು ಅಮಾನತು ಮಾಡುವುದಕ್ಕೆ ಆಗುವುದಿಲ್ಲ, ಅವರೇ ಮುಂದುವರೆಯುತ್ತಾರೆ. ಜಿಲ್ಲೆಯಲ್ಲಿನ ಗುಂಪುಗಾರಿಕೆ ವಿಚಾರವಾಗಿ ಕೆಪಿಸಿಸಿಯಿಂದ ವಾರದೊಳಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಕೆ.ಎಚ್.ಮುನಿಯಪ್ಪ ಹೇಳಿದರು.
ಹಲ್ಲೆ, ದೌರ್ಜನ್ಯಗಳಂತಹ ಘಟನೆಗಳು ನಡೆಯಬಾರದು. ಕಾಂಗ್ರೆಸ್ ಪಕ್ಷ ದೊಡ್ಡದಾಗಿದ್ದು, ಎಲ್ಲರೂ ಒಟ್ಟಿಗೆ, ಸಮಾಧಾನವಾಗಿ ಹೋಗಬೇಕು. ಸ್ವಪ್ರತಿಷ್ಠೆಗಳನ್ನು ಇವರಾಗಲಿ, ಅವರಾಗಲಿ ತೋರಿಸದೆ ಪಕ್ಷ ಕಟ್ಟಬೇಕು. ತಾಪಂ, ಜಿಪಂ ಚುನಾವಣೆಗಳು ಬರಲಿದ್ದು, ಎಲ್ಲರೂ ಪಕ್ಷ ಕಟ್ಟಬೇಕು ಎಂದು ಸಲಹೆ ನೀಡಿದರು.
ಈಗಾಗಲೇ ಕೆಪಿಸಿಸಿ ಉಪಾಧ್ಯಕ್ಷ ನಾರಾಯಣಸ್ವಾಮಿ ಅವರೊಂದಿಗೆ ನಾನೂ ಮಾತನಾಡಿದ್ದು, ಇಂತಹ ಘಟನೆಗಳಿಗೆ ಅವಕಾಶ ಬೇಡ. ಒಂದು ವೇಳೆ ಘಟನೆಯಾದ ತಕ್ಷಣವೇ ಕೆಪಿಸಿಸಿಯವರು ಗಮನಹರಿಸಿ, ಸಮಸ್ಯೆ ಬಗೆಹರಿಸಬೇಕು ಎಂದು ತಿಳಿಸಿದ್ದೇನೆ. ಗುಂಪುಗಾರಿಕೆ, ಸ್ವಪ್ರತಿಷ್ಠೆಯಿಂದ ಪಕ್ಷಕ್ಕೆ ಒಳ್ಳೆಯದಿಲ್ಲ. ಎಲ್ಲರೂ ಒಟ್ಟಿಗೆ ಹೋದರೆ ಪಕ್ಷ ಉಳಿಯುತ್ತದೆ ಎಂದರು.
ಇನ್ನು ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಿದ ಸಚಿವರು, ದೇಶಕ್ಕೆ ಅಪಾರ ಕೊಡುಗೆ ನೀಡಿ ಕೈಗಾರಿಕೆಯ ಭೀಷ್ಮರಂತಿದ್ದ ರತನ್ ಟಾಟಾ ಅವರು ನಿಧನರಾಗಿದ್ದು, ಎಲ್ಲ ಕೈಗಾರಿಕೋದ್ಯಮಿಗಳಿಗೆ ಅವರ ಮಾರ್ಗದರ್ಶನ ದಾರಿದೀಪವಾಗಲಿ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದರು.