ಮೈಸೂರು - ಬೆಂಗಳೂರು ಹೆದ್ದಾರಿ ಪರಿಶೀಲನೆಗೆ ಮುಂದಾದ ಸಿದ್ದರಾಮಯ್ಯ; ರಸ್ತೆ ಕ್ರೆಡಿಟ್ ನಮಗೆ ಸಲ್ಲಬೇಕು ಎಂದ ಮಾಜಿ ಸಿಎಂ

bengaluru mysuru expressway
Published on

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರು - ಬೆಂಗಳೂರು ನಡುವಿನ ದಶಪಥ ಹೆದ್ದಾರಿಯನ್ನು ಮಾರ್ಚ್.9ರಂದು ಪರಿಶೀಲನೆ ನಡೆಸಲು ಮುಂದಾಗಿದ್ದು, ಈ ರಸ್ತೆಯ ಕ್ರೆಡಿಟ್ ನಮ್ಮ ಸರ್ಕಾರಕ್ಕೆ ಸಲ್ಲಬೇಕು. ರಸ್ತೆ ನಿರ್ಮಾಣದಲ್ಲಿ ಸಂಸದ ಪ್ರತಾಪ್ ಸಿಂಹ ಹಾಗು ಬಿಜೆಪಿ ಸರ್ಕಾರದ ಯಾವ ಪಾತ್ರವೂ ಇಲ್ಲ ಎಂದು ಹೇಳಿದ್ದಾರೆ.

ಸಂಸದ ಪ್ರತಾಪ ಸಿಂಹ ಅವರ ಲೋಕಸಭಾ ವ್ಯಾಪ್ತಿಗೆ ಕೆಲ ಕಿ.ಮೀ ಮಾತ್ರ ಸೇರುತ್ತದೆ. ಹೀಗಿದ್ದರೂ ಈ ರಸ್ತೆ ನಮ್ಮದು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ ಈ ಬಗ್ಗೆ ಎಲ್ಲಾ ಮಾಹಿತಿ ಇದೆ. ಅವರೇ ಮುಂದೆ ನಿಂತು ಹೆದ್ದಾರಿ ನಿರ್ಮಿಸಿದ್ದಾರೆ ಎಂದರು.

ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುತ್ತಾ, ನಾನು ಲೋಕಾಯುಕ್ತ ಬಂದ್ ಮಾಡಿಲ್ಲ. ಒಂದು ವೇಳೆ ಲೋಕಾಯುಕ್ತ ಬಂದ್ ಮಾಡಿದ್ದರೆ ಇವತ್ತೇ ರಾಜೀನಾಮೆ ಕೊಡುತ್ತೇನೆ. ನಾವು ಭ್ರಷ್ಟಾಚಾರ ನಿಗ್ರಹಕ್ಕೆ ಎಸಿಬಿ ರಚನೆ ಮಾಡಿದ್ದಷ್ಟೆ. ಲೋಕಾಯುಕ್ತದ ಯಾವ ಅಧದಿಕಾರವನ್ನೂ ಕಿತ್ತುಕೊಂಡಿಲ್ಲ. ನಮ್ಮ ಆಡಳಿತ ಕಾಲದಲ್ಲೂ ಲೋಕಾಯುಕ್ತ ಇತ್ತು. ಎಲ್ಲಾ ಸತ್ಯ ಗೊತ್ತಿದ್ದರು ಸಿಎಂ ಬೊಮ್ಮಯಿ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದರು.

ಎಸಿಬಿ ರದ್ದು ಮಾಡುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿತ್ತು. ಆದರೆ ಎಸಿಬಿ ರದ್ದು ಮಾಡಿದ್ದು ಬಿಜೆಪಿ ಸರ್ಕಾರವಲ್ಲ. ನ್ಯಾಯಾಲಯ ಎಸಿಬಿ ರದ್ದು ಮಾಡಿರುವುದು. ಬಿಜೆಪಿಯವರಿಗೆ ಸುಳ್ಳು ಹೇಳುವುದು ಚಟ‌. ಸುಳ್ಳೇ ಬಿಜೆಪಿ ಮನೆದೇವರು. ಹೀಗಾಗಿ ಲೋಕಾಯುಕ್ತ ವಿಚಾರದಲ್ಲಿ ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net