

ಶಿವಮೊಗ್ಗ: ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತವಾಗಿ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದ್ದ ಸಿದ್ದರಾಮಯ್ಯ ಸರ್ಕಾರ ಬಿಪಿಎಲ್ ಕುಟುಂಬಗಳಿಗೆ ಮಕ್ಮಲ್ ಟೋಪಿ ಹಾಕಿದೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಆರೋಪಿಸಿದರು.
ಸಚಿವ ಸಂಪುಟ ಸಭೆ ನಡೆಸಿದ್ದ ರಾಜ್ಯ ಸರ್ಕಾರ ಬಿಪಿಎಲ್ ಕುಟುಂಬಗಳಿಗೆ ಸಿಟಿ ಸ್ಕಾೃನ್, ಎಂಆರ್‌ಐ ಸ್ಕಾೃನ್, ಆಲ್ಟ್ರಾ ಸೌಂಡ್ ಹಾಗೂ ಅಂಗಾಂಗ ಕಸಿ ಸೌಲಭ್ಯವನ್ನು ಉಚಿತವಾಗಿ ಒದಗಿಸುವುದಾಗಿ ತೀರ್ಮಾನಿಸಿತ್ತು. ಆದರೆ ಏಳು ತಿಂಗಳು ಕಳೆದರೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿ ದೂರಿದರು.
ಈ ಹಿಂದೆ ಬಿಜೆಪಿ ಸರ್ಕಾರ ಹೊಸ ಬಿಪಿಎಲ್ ಕಾರ್ಡ್‌ಗಳಿಗೆ ಅರ್ಜಿ ಕರೆದು ಪರಿಷ್ಕರಣೆ ಮಾಡದೇ ಅರ್ಹರಿಗೆ ಅನ್ಯಾಯ ಮಾಡಿತ್ತು. ಇದೀಗ ಸಿದ್ದರಾಮಯ್ಯ ಸರ್ಕಾರ ಎರಡೂವರೆ ವರ್ಷಗಳಿಂದ ಅಗತ್ಯವಿರುವ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‌ಗೆ ಅರ್ಜಿ ಆಹ್ವಾನಿಸದೇ ಅನ್ಯಾಯ ಮಾಡುತ್ತಿದೆ. ಬಡ ಕುಟುಂಬಗಳು ಬಿಪಿಎಲ್ ಕಾರ್ಡ್ ಇಲ್ಲದೆ ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ, ರಾಷ್ಟ್ರೀಯ ಕುಟುಂಬ ಭದ್ರತಾ ಯೋಜನೆ ಮುಂತಾದ ಸಾಮಾಜಿಕ ಭದ್ರತಾ ಯೋಜನೆಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ ಎಂದು ಕಿಡಿಕಾರಿದರು.
ಅಲ್ಲದೇ ಆಯುಷ್ಮಾನ್ ಭಾರತ್ ಕರ್ನಾಟಕ ಆರೋಗ್ಯ ಚೀಟಿಯನ್ನು ಪಡೆಯುವಲ್ಲಿ ವಂಚಿತರಾಗಿದ್ದು, ಬಡತನ ರೇಖೆಗಿಂತ ಕೆಳಗಿರುವ ಅಮಾಯಕ ಬಡಕುಟುಂಬಗಳು, ಆರೋಗ್ಯ ಸೌಲಭ್ಯಗಳಿಂದ ದೂರ ಉಳಿದಿದ್ದಾರೆ. ಸಬ್ಸಿಡಿ ದರದ ಬಿತ್ತನೆ ಬೀಜ, ರಸಗೊಬ್ಬರ, ಯಂತ್ರೋಪಕರಣಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದು, ರಾಜ್ಯ ಸರ್ಕಾರಕ್ಕೆ ದಿನನಿತ್ಯ ಶಾಪ ಹಾಕುತ್ತಿದ್ದಾರೆ ಎಂದರು.
ರಾಜ್ಯದಲ್ಲಿ 3.27 ಲಕ್ಷ ಬಿಪಿಎಲ್ ಮತ್ತು 1.30 ಲಕ್ಷ ಎಪಿಎಲ್‌ಗೆ ಅರ್ಜಿ ಹಾಕಿದ್ದು, ತಕ್ಷಣವೇ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್‌ಗಳ ಅರ್ಜಿಗಳನ್ನು ಪರಿಷ್ಕರಣೆ ಮಾಡಿಸಿ ಹೊಸ ಕಾರ್ಡ್‌ಗಳನ್ನು ವಿತರಿಸುವ ಜತೆಯಲ್ಲಿ ಹೊಸ ಕಾರ್ಡ್‌ಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಜನಮೇಜಿರಾವ್, ಎಚ್.ಎಂ.ಸಂಗಯ್ಯ, ಎಂ.ಎನ್.ಜೀವನಗೌಡ, ಶ್ರೀಧರ್ ಕೊಡ್ಲು, ಶಂಕ್ರನಾಯ್ಕ, ಕೆ.ಆರ್.ಶಿವಣ್ಣ ಸುದ್ದಿಗೋಷ್ಠಿಯಲ್ಲಿದ್ದರು.