ಇನ್ನು ಮೂರು ತಿಂಗಳವರೆಗೆ ಶಾಲೆ ತೆರೆಯಬೇಡಿ: ಸಿದ್ದರಾಮಯ್ಯ ಸಲಹೆ

School Fees
Published on

ಮೈಸೂರು: ಫ್ರಾನ್ಸ್ ಮತ್ತಿತರ ದೇಶಗಳಲ್ಲಿ ಶಾಲೆ ತೆರೆದ ನಂತರ ಮಕ್ಕಳಿಗೆ ಕರೊನಾ ಕಾಣಿಸಿಕೊಂಡಿದೆ. ಆದ್ದರಿಂದ ನಮ್ಮ ರಾಜ್ಯದಲ್ಲಿಯೂ ಸುರಕ್ಷತೆಯ ದೃಷ್ಟಿಯಿಂದ ಇನ್ನು ಮೂರು ತಿಂಗಳವರೆಗೆ ಶಾಲೆ ತೆರೆಯದೆ ಇರುವುದು ಉತ್ತಮ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಮೂರು ತಿಂಗಳು ಕಳೆದ ನಂತರ ಸಾಧ್ಯವಾದರೆ ಎರಡು ಪಾಳಿಯಲ್ಲಿ ತರಗತಿಗಳನ್ನು ನಡೆಸಲಿ. ಮಕ್ಕಳಿಗೆ ಕರೊನಾ ಕಾಣಿಸಿಕೊಂಡರೆ ಮನೆಯಲ್ಲಿ ಎಲ್ಲರಿಗೂ ಸೋಂಕು ಹರಡುತ್ತದೆ. ಹೀಗಾಗಿ ಸರ್ಕಾರ ಶಾಲೆ ತೆರೆಯಲು ಬೇಕಿದ್ದಲ್ಲಿ ಪೂರ್ವಸಿದ್ಧತೆ ಮಾಡಿಕೊಳ್ಳಲಿ. ಆದರೆ, ಯಾವುದೇ ಕಾರಣಕ್ಕೂ ಮುಂದಿನ ಮೂರು ತಿಂಗಳವರೆಗೆ ಶಾಲೆ ತೆರೆಯುವುದು ಸೂಕ್ತ ಅಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

ಶಾಲೆ ತೆರೆಯಲು ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಆತುರ ತೋರುತ್ತಿವೆ. ಖಾಸಗಿ ಶಾಲೆಗಳಿಗೆ ಸರ್ಕಾರ ಕಡಿವಾಣ ಹಾಕಬೇಕು. ಯಾವುದೇ ಕಾರಣಕ್ಕೂ ಪಾಲಕರಿಂದ ಶುಲ್ಕ ವಸೂಲಾತಿಗೆ ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿದರು.

ಅದೇ ರೀತಿ ಆನ್‌ಲೈನ್ ಶಿಕ್ಷಣ ನಡೆಸಲು ಕೂಡ ಯಾವುದೇ ಶಾಲೆಗೆ ಅವಕಾಶ ಮಾಡಿಕೊಡಬಾರದು. ಹಳ್ಳಿಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಇದೆ. ಆನ್‌ಲೈನ್ ಶಿಕ್ಷಣವನ್ನು ನಡೆಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net