

| ಕೆ.ಎಂ. ರೇವಣ್ಣ
ಹನ್ನೆರಡನೇ ಶತಮಾನದಲ್ಲಿ ಕನ್ನಡನಾಡನ್ನು ಪಾವನಗೊಳಿಸಿದ ಶಿವಶರಣರಲ್ಲಿ ಸೊನ್ನಲಾಪುರದ ಸಿದ್ದರಾಮ ಶಿವಯೋಗಿಗಳು ಅಗ್ರಗಣ್ಯರು. ಭಕ್ತಿ, ಜ್ಞಾನ, ವೈರಾಗ್ಯಮೂರ್ತಿಯಾಗಿ ಕಾಯಕಯೋಗಿಯಾಗಿ ಶರಣ ಸಂಕುಲದಲ್ಲಿ ಬೆಳಗಿ ಕಾರಣಿಕ ಮಹಾ ಪುರುಷರಾಗಿ ಬಾಳಿದವರು. ಯೋಗ ಸಾಧನೆಯಲ್ಲಿ ಮಹತ್ತನ್ನು ಸಾಧಿಸಿದವರು ಎಂಬಿತ್ಯಾದಿ ಸಂಗತಿಗಳು ಅನೇಕ ಸಾಹಿತ್ಯ ಕೃತಿಗಳಲ್ಲಿ ದೊರೆಯುತ್ತವೆ. ಅವುಗಳಲ್ಲಿ ರಾವಾಂಕ ಕವಿಯ "ಸಿದ್ದರಾಮ ಚರಿತ' ಮತ್ತು ಹರಿಹರನ "ರೇವಣ್ಣಸಿದ್ದೇಶ್ವರರಗಳೆ', ಪ್ರಭುದೇವರ ರಗಳೆ, ಭೀಮಕವಿಯ "ಬಸವ ಪುರಾಣ', ಚಾಮರಸನ "ಪ್ರಭುಲಿಂಗಲೀಲೆ' ಮತ್ತು "ಶೂನ್ಯ ಸಂಪಾದನೆ' ಹಾಗೂ "ಸಾನಂದ ಚರಿತೆ' ಇತ್ಯಾದಿ ಶರಣಸಾಹಿತ್ಯದಲ್ಲಿ ವಿುಲವಾಗಿ ಕಂಡು ಬರುತ್ತವೆ.
ಶಾಸನಗಳಲ್ಲಿ ಸಿದ್ಧರಾಮನ ವ್ಯಕ್ತಿತ್ವವನ್ನು ಚಿತ್ರಿಸಿರುವಂತೆ ಇನ್ನಾವ ಶರಣರನ್ನು ಕುರಿತ ಶಾಸನಗಳೂ ರಚನೆಯಾಗಿಲ್ಲ. ಸುಮಾರು 22 ಶಾಸನಗಳು ಸಿದ್ಧರಾಮರ ನಾಮಾಂಕಿತದಲ್ಲಿ ಉಪಲಬ್ಧವಿದೆ. ಅತ್ಯಧಿಕ ಸಂಖ್ಯೆಯ ಕಾವ್ಯಗಳಲ್ಲಿ ಬಸವಣ್ಣನವರು ಕೀರ್ತಿತರಾಗಿದ್ದರೆ, ಶಾಸನಗಳಲ್ಲಿ ಸಿದ್ದರಾಮ ದೇವರು ಎಂದು ಪ್ರಾರಂಭವಾಗಿ ಲೋಕೈಕ ನಾಥ ನೆನಿಪ ಸಿದ್ದೇಂದ್ರ ಚಕ್ರವರ್ತಿ ಎಂದು ಮುಗಿಯುತ್ತದೆ. ಆದರೆ ಸಿದ್ದರಾಮರ ಸಮಗ್ರ ಜೀವನ ದರ್ಶನ ಮತ್ತು ಸಾಧನೆಯನ್ನು ಸಿದ್ದರಾಮರನ್ನು ಕುರಿತು ಇತರ ಶರಣರು ರಚಿಸಿರುವ ವಚನಗಳಲ್ಲಿ ಕಾಣಬಹುದಾಗಿದೆ.
ಶರಣ ಸಿದ್ದರಾಮ ಮಹಾರಾಷ್ಟ್ರದ ಸೊನ್ನಲಿಗೆಯ ಸುಗ್ಗವ್ವೆ ಮುದ್ದು ಗೌಡರೆಂಬ ರೈತ ದಂಪತಿಗಳಿಗೆ ಕ್ರಿ.ಶ. 1130ರಲ್ಲಿ ಜನಿಸಿದನೆಂದು ತಿಳಿದುಬರುತ್ತದೆ. ಲೌಕಿಕ ಆಸಕ್ತಿಗಳಿಂದ ನಿರಾಸಕ್ತನಾಗಿ ಅಲೌಕಿಕ ಕರೆಗೆ ಓಗೊಟ್ಟು ಸೊನ್ನಲಿಗೆಯಿಂದ ಶ್ರೀಶೈಲಕ್ಕೆ ಹೋಗಿ ದೀೆ ಪಡೆದು ಪುನಃ ಸೊನ್ನಲಿಗೆಗೆ ಬಂದು ಕರ್ಮಯೋಗಿಯಾಗಿ ಸಾಧನೆಯಲ್ಲಿ ತೊಡಗುತ್ತಾನೆ. ಲೋಕ ಕಲ್ಯಾಣಾರ್ಥವಾಗಿ ಕೆರೆ ಕಟ್ಟೆಗಳನ್ನು ಕಟ್ಟಿಸಿ ದೇವಾಲಯಗಳನ್ನು ನಿರ್ಮಾಣ ಮಾಡಿ ಅನ್ನದಾನ, ವಸ್ತ್ರದಾನ, ಸಾಮೂಹಿಕ ವಿವಾಹ ಮುಂತಾದ ಕಾರ್ಯಗಳನ್ನು ಮಾಡುತ್ತ ಭೂತ ದಯೆ ತೋರುತ್ತಾನೆ. ಲೋಕದ ಜನರೊಂದಿಗೆ ತಾನೂ ದುಡಿಯುತ್ತಾನೆ. "ಸಾಕಾರನಿಷ್ಠೆ ಭೂತಂಗಳಲ್ಲಿ ಅನುಕಂಪೆ' ಎಂಬ ಕಾಯಕದಲ್ಲಿ ನಿರತನಾಗುತ್ತಾನೆ. ಶರಣ ಅಲ್ಲಮ ಪ್ರಭುಗಳ ಸಂದರ್ಶನದಿಂದ ಆಕರ್ಷಿತನಾಗಿ ದೈವಿ ಚೈತನ್ಯಗಳನ್ನು ಅರಿಯಲು ಕಲ್ಯಾಣನಗರ ಅನುಭವ ಮಂಟಪಕ್ಕೆ ಅಲ್ಲಮನೊಡನೆ ಬಂದು ಪರಿವ್ರಾಜಕ ಸ್ಥಿತಿಯನ್ನು ಹೊಂದಿ ಅಂತ್ಯದಲ್ಲಿ ಸೊನ್ನಲಾಪುರದಲ್ಲಿ ಐಕ್ಯನಾಗುತ್ತಾನೆ. ಇದು ಆತನ ಜೀವನ ಚರಿತ್ರೆಯಾದರೆ, ಅವನ ಮಹತ್ವವನ್ನು ಅರಿಯಲು ನಾವು ಸಮಕಾಲೀನ ಶರಣರ ವಚನಗಳ ಮೊರೆ ಹೋಗಬೇಕಾಗುತ್ತದೆ. ಶರಣರು ಕಂಡುಂಡ ಸತ್ಯದ ಸೊಲ್ಲುಗಳು ಯಥಾರ್ಥವಾಗಿ ಅವರ ವಚನಗಳಲ್ಲಿ ಪ್ರತಿಬಿಂಬಿಸುತ್ತವೆ.
ಸಿದ್ಧರಾಮನು ಅಲ್ಲಮಪ್ರಭುವಿನ ಅಣತಿಯಂತೆ ಬಸವಾದಿ ಶರಣರ ಕೆಗೆ ಬಂದ ನಂತರ ಆಧ್ಯಾತ್ಮಿಕ ಜ್ಞಾನವನ್ನು ಸಂಪಾದಿಸು ತ್ತಾನೆ. ಸರ್ವಜನರ ಒಳಿತನ್ನು ಒಪ್ಪಿಕೊಳ್ಳುತ್ತಾನೆ. ಇದು ಮಹಾತ್ಮರ ಮಹತ್ವದ ಗುಣ. ತಾನು ಹಿರಿಯನೆಂದು ಹೇಳುತ್ತಾ ಇತರರ ಧ್ಯೇಯ ಧೋರಣೆಗಳನ್ನು ತಿರಸ್ಕರಿಸುವುದು ಮನುಷ್ಯತ್ವವಲ್ಲ ಎಂಬುದನ್ನು ಸಾದರಪಡಿಸುತ್ತಾನೆ. ಕಿರಿಯವನಾದ ಚನ್ನಬಸವಣ್ಣನಿಂದ ಜ್ಞಾನ ಪಡೆಯುತ್ತಾನೆ. ಈ ಮೂಲಕ ಇತರರ ವಾದಕ್ಕೂ ಬೆಲೆ ಕೊಟ್ಟು ಸರಿಯಾಗಿದ್ದನ್ನು ಪುರಸ್ಕರಿಸಬೇಕೆಂಬ ಮನೋಭಾವನೆಯನ್ನು ವ್ಯಕ್ತ ಪಡಿಸುತ್ತಾನೆ. ಶರಣರು ಇದನ್ನೆ "ದೇಹ ಭಿನ್ನವಾದರೂ ಆತ್ಮಭಾವ ಒಂದೇ ಆಗಿರುವುದರಿಂದ ಎಲ್ಲರ ಅಭಿಪ್ರಾಯಕ್ಕೆ ತಲೆ ಬಾಗಬೇಕು' ಎನ್ನುತ್ತಾನೆ. ಇದನ್ನೆ ಅಲ್ಲಮ ಪ್ರಭುಗಳು ಸಿದ್ದರಾಮರ ಬಗ್ಗೆ ಹೀಗೆ ಹೇಳುತ್ತಾರೆ.
ಕರಚರಣಾದಿಗಳು ಬೇಕಾದವಲ್ಲದೆ/ ಅರಿದು ಮುಟ್ಟುವುದು ಒಂದೇ ಆತ್ಮ/ ಬಿಂದುವಿನೊಂದು ಸಾರದಲ್ಲಿ ಸಸಿ ಹಲವು/ ನಾಮ ಬೆಳೆವಂತೆ ಗುಹೇಶ್ವರ ಲಿಂಗದಲ್ಲಿ/ ನಾನೀನೆಂಬ ಭಾವವಿಲ್ಲ ಸಿದ್ದರಾಮ...
ಆತ್ಮಜ್ಞಾನಿ ಎನಿಸಿಕೊಂಡ ಅಲ್ಲಮಪ್ರಭು ಸಿದ್ದರಾಮರನ್ನು ಕುರಿತು ನನಗೂ ನಿನಗೂ ಭೇದವಿಲ್ಲ. ನಾನೇ ನೀನು ನೀನೇ ನಾನು. ಆತ್ಮ ಆತ್ಮಗಳು ಒಂದಾದಾಗ ವ್ಯಕ್ತಿತ್ವಕ್ಕಷ್ಟೆ ಬೆಲೆ ಅಲ್ಲದೆ ವ್ಯಕ್ತಿಗೂ ಉನ್ನತ ಸ್ಥಾನವಿದೆ ಎನ್ನುವುದನ್ನು ತಿಳಿಸುತ್ತಾರೆ. ಈತನ ಬಗ್ಗೆ ಶಿವಶರಣರಲ್ಲಿ ಎಂತಹ ಗೌರವ ಭಾವ ಇತ್ತೆಂದರೆ, ಇದಕ್ಕೆ ಸಾಯಾಗಿ ಶೂನ್ಯ ಸಂಪಾದನೆಯಲ್ಲಿ ಸಾಕಷ್ಟು ನಿದರ್ಶನಗಳು ದೊರೆಯುತ್ತವೆ. ಸಿದ್ದರಾಮನಿಗೆ ಚನ್ನಬಸವನಿಂದ ಲಿಂಗ ದೀೆಯಾಯಿತು ಎಂಬುದಕ್ಕೆ ಪುರಾವೆಗಳು ಇಲ್ಲದಿದರೂ ಸ್ವಯಂಲಿಂಗವಾಗಿದ್ದಾತ ಎಂಬುದನ್ನು ಚನ್ನಬಸವಣ್ಣ ತನ್ನ ವಚನವೊಂದರಲ್ಲಿ ಈ ರೀತಿ ಹೇಳಿದ್ದಾರೆ.
ಲಿಂಗ ಲಕ್ಷಣವಂತ ಸಿದ್ದರಾಮಯ್ಯ/ಲಿಂಗ ಸಿರಿವಂತ ಸಿದ್ದರಾಮಯ್ಯ/ಜಂಗಮ ಲಕ್ಷಣವಂತ ಸಿದ್ದರಾಮಯ್ಯ/ಪ್ರಸಾದ ಲಕ್ಷಣವಂತ ಸಿದ್ದರಾಮಯ್ಯ/ಕೂಡಲ ಚನ್ನಸಂಗಯ್ಯನಲ್ಲಿ ಸಿದ್ದರಾಮಯ್ಯನ/ ಶ್ರೀಪಾದಕ್ಕೆ ನಮೋನಮೋ ಎಂಬೆನು
ನಿತ್ಯಸತ್ಯದ ಎಲ್ಲೆಯ ಮೀರಿ ಮುಕ್ತ ಕಳೆಯ ಹೊರಹೊಮ್ಮಿ ಸಿದ್ದರಾಮದೇವರ ನಿಲುವ ತದ್ರೂಪವಾಗಿ ಕಂಡಿದ್ದಾರೆ ಬಸವಣ್ಣನ ವರು. ಆತನಲ್ಲಿದ್ದ ಕ್ರಿಯಾಜ್ಞಾನ ಕಳೆ, ಅನುಭಾವ, ನಿಷ್ಕಲಮನ ಈ ಗುಣಗಳು ಆರೂಢನಲ್ಲಿರುವುದನ್ನು ಸಿದ್ದರಾಮನಲ್ಲಿ ಕಂಡು ಧನ್ಯರಾಗಿದ್ದಾರೆ. ಅಂತೆಯೇ ಮಹಗಣಪ್ರಸಾದಿ ಮರುಳ ಶಂಕರ ದೇವರು ಕಲ್ಯಾಣದ ಮಹಾಮನೆಯಲ್ಲಿ ನೆರೆಯುತ್ತಿದ್ದ ಪ್ರತಿಯೊಬ್ಬ ಶರಣರನ್ನು ಪರೀಸಿ, ಪರತತ್ತ್ವವನ್ನು ಅವರಲ್ಲಿ ಕಂಡು ಉಪಚರಿಸುತ್ತಿದ್ದರಂತೆ. ಸಿದ್ದರಾಮರ ಲ್ಲಿದ್ದ ಆತ್ಮಪರಮಾತ್ಮಗಳ ಪ್ರಭೇದವನರಿತವನಾಗಿದ್ದ ಮರಳು ಶಂಕರದೇವರು ಸಿದ್ದರಾಮರ ಶಿವಯೋಗ ಸಿದ್ದಿಯನ್ನು ಸ್ಮರಿಸಿದ್ದಾರೆ. ಸಿದ್ದರಾಮರ ಸಮಗ್ರ ಜೀವನವನ್ನು ಅವಲೋಕಿಸಿದಾಗ ಬದುಕಿನ ಆದರ್ಶಗಳೇ ಕೇಂದ್ರಬಿಂದುಗಳಾಗಿ ಕಾಣುತ್ತವೆ. ನಿತ್ಯ ನಿರಂಜನ ಮೂರ್ತಿಯಾದರೂ ಭಾವವಿದೆ. ಅನುಭಾವವಿದೆ. ಯೋಗಿಯಾದರೂ ಜಗದ್ಕುಟುಂಬಿಯಾಗಿದ್ದಾನೆ. ಆಳನಿರಾಳನಾಗಿದ್ದಾನೆ. ಮಾನವೀಯತೆಯ ಪ್ರತಿಕನಾಗಿದ್ದಾನೆ. ಇದನ್ನು ಪ್ರಭು ದೇವರು ಕಾಯದೊಳಗೆ ಕರುಣವಿಲ್ಲ... ವಚನದಲ್ಲಿ ಹೇಳಿದ್ದಾರೆ. ಸಿದ್ದರಾಮನ ಬೌದ್ದಿಕ ದೇಹ, ಆಧ್ಯಾತ್ಮಿಕ ನಿಲುವು ಬೆಟ್ಟದ ತುದಿಗೇರಿದ ಲಿಂಗಲೀಲಾ ವಿಲಾಸವಾಗಿದೆ. ಆತನ ಶಿವಯೋಗ ಇತರ ಶರಣರಿಗೆ ಮಾದರಿಯಾಗಿದೆ. ಲೌಕಿಕ ಜಗತ್ತಿನ ಜಂಜಡದಲ್ಲಿಯೂ ಪಾರಮಾರ್ಥಿಕ ಪ್ರಭೆಯನ್ನು ಮೂಡಿಸಿದ್ದಾನೆ.
ಇದನ್ನೆ ಮಡಿವಾಳ ಮಾಚೀದೇವರು ಅಕ್ಕತಂಗಿಯರೈವರು ಒಬ್ಬನ ಅರಸಿಯರು/ಕಿರಿಯಾಕೆ ಕೊಡುವಡೆ ಹಿರಿಯಾಕೆ ಕುಂಟಿಣಿ... ಎಂಬ ವಚನದಲ್ಲಿ ಹೇಳಿದ್ದಾರೆ.
ಹೀಗೆ ಸಿದ್ದರಾಮ ಶಿವಯೋಗಿಯನ್ನು ಆತನ ಸಮಕಾಲೀನರು ಹಾಗೂ ನಂತರದ ಶರಣರು ಮುಕ್ತ ಕಂಠದಿಂದ ಕೊಂಡಾಡಿದ್ದಾರೆ. ಅದಕ್ಕೆ ಅವನಲ್ಲಿದ್ದ ಕಾರಣೀಕಶಕ್ತಿಯೇ ಕಾರಣವೆನ್ನುವುದನ್ನು "ಏಕೋಭಾವನಿಷ್ಠೆ ಸಿದ್ದರಾಮದೇವರಿಂದೆನಗಾಯ್ತು' ಎಂದು ಪ್ರಭು ದೇವರು ನುಡಿದಿದ್ದಾರೆ. ಹಾಗೆಯೇ ಇತರ ಅನೇಕ ಶರಣರು ಅವರವರ ವಚನಗಳಲ್ಲಿ ಸಾಂದರ್ಭಿಕವಾಗಿ ನುಡಿದಿದ್ದಾರೆ.
ಹೀಗೆ ರ್ನಿವಿಕಲ್ಪದ ಅದ್ವೆ$$ೃತದಲ್ಲಿ ಮೈಮರೆದು ಬೆಳಗಿನೊಳಗಣ ಬೆಳಕಾಗಿ ಬಾಳಿದ ಸಿದ್ದರಾಮನ ಸಾಧನೆ ಅಪೂರ್ವ. ಸಿದ್ದರಾಮನ ಬದುಕು ಸತ್ಯ ಶಿವಗಳ ಅಂತೀಕಸ್ವರೂಪವೇ ಆಗಿ ಆ ಎರಡರ ಸ್ಪರ್ಶದಿಂದ ಮೂಡಿದ ಜ್ಯೋತಿಯಲ್ಲಿ ಜ್ಯೋತಿಯಾಗಿ ಬೆಳಗಿ ಲೋಕಮಾನ್ಯರಾಗಿದ್ದಾರೆ ಎಂಬುದನ್ನು ಅವರ ಸಮಕಾಲೀನ ಶರಣರ ವಚನ ದರ್ಶನದಲ್ಲಿ ಕಲಾತ್ಮಕವಾಗಿ ಕಾಣುತ್ತೇವೆ.
(ಲೇಖಕರು, ನಿವೃತ್ತ ತಹಶೀಲ್ದಾರರು)