

ನವದೆಹಲಿ: ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಇರುವ ಈ ಸಂದರ್ಭದಲ್ಲಿ ಯೋಧರೊಬ್ಬರ ಮರಣಾವಶೇಷ 38 ವರ್ಷಗಳ ಬಳಿಕ ಪತ್ತೆಯಾಗಿದೆ. ಈ ಮೂಲಕ ಹಿಮಪಾತಕ್ಕೆ ಒಳಗಾಗಿದ್ದ ಸೈನಿಕರ ಪೈಕಿ ಇನ್ನೊಬ್ಬರ ಅವಶೇಷ ಹಾಗೂ ಗುರುತು ಪತ್ತೆ ಆದಂತಾಗಿದೆ.
ಸಿಯಾಚಿನ್ ಹೀರೋ ಲ್ಯಾನ್ಸ್ ನಾಯ್ಕ್ ಚಂದ್ರಶೇಖರ್ ಅವರು ಅಸ್ಥಿಪಂಜರದ ಭಾಗಗಳು ಆ. 13ರಂದು ಸಿಯಾಚಿನ್ನ 16,000 ಅಡಿ ಆಳದಲ್ಲಿ ಸಿಕ್ಕಿವೆ. ಇವರ ಪತ್ನಿಗೆ ಈಗ 65 ವರ್ಷವಾಗಿದ್ದು, ಇವರೊಂದಿಗೆ ಇಬ್ಬರು ಪುತ್ರಿಯರು 38 ವರ್ಷಗಳ ಬಳಿಕ ಇವರ ಮರಣಾವಶೇಷವನ್ನಾದರೂ ಪಡೆಯುವಂತಾಗಿದೆ. ಚಂದ್ರಶೇಖರ್ 1984ರಲ್ಲಿ ಸಿಯಾಚಿನ್ನಲ್ಲಿ ನಡೆದ ಆಪರೇಷನ್ ಮೇಘದೂತ್ನಲ್ಲಿ ಪಾಲ್ಗೊಂಡಿದ್ದರು.
ಪಾಕಿಸ್ತಾನ ಕಣ್ಣಿಟ್ಟಿದ್ದ ಪಾಯಿಂಟ್ 5965 ವಶದಲ್ಲಿರಿಸಿಕೊಳ್ಳುವ ಕಾರ್ಯಾಚರಣೆಯಲ್ಲಿದ್ದ ತಂಡದಲ್ಲಿ ಚಂದ್ರಶೇಖರ್ ಇದ್ದರು. ಇವರಿದ್ದ 19 ಕುಮಾವೊನ್ ರೆಜಿಮೆಂಟ್ 1984ರ ಮೇ 29ರಂದು ಸಿಯಾಚಿನ್ ಗ್ಲೇಸಿಯರ್ನಲ್ಲಿ ನಡೆದ ಆಪರೇಷನ್ ಮೇಘದೂತ್ನಲ್ಲಿ ಪಾಲ್ಗೊಂಡಿತ್ತು. ಆದರೆ ಅಂದು ಒಬ್ಬ ಅಧಿಕಾರಿ ಸೇರಿದಂತೆ 18 ಮಂದಿ ಯೋಧರು ಹಿಮಪಾತಕ್ಕೆ ಸಿಲುಕಿದ್ದು, ಆ ಪೈಕಿ 14 ಮಂದಿಯ ಪತ್ತೆಯಾಗಿತ್ತು. ಉಳಿದವರ ಸುಳಿವು ಕೂಡ ಸಿಕ್ಕಿರಲಿಲ್ಲ. ಆದರೆ ಆಗಸ್ಟ್ 13ರಂದು ಸೈನಿಕರಿಗೆ ಅದೃಷ್ಟವಶಾತ್ ಲ್ಯಾನ್ಸ್ ನಾಯ್ಕ್ ಅಸ್ತಿಪಂಜರದ ಅವಶೇಷಗಳು ಸಿಕ್ಕಿವೆ. ಇದರೊಂದಿಗೆ ಸೇನೆಯ ಸಂಖ್ಯೆ ಇರುವ ಡಿಸ್ಕ್ ಕೂಡ ಸಿಕ್ಕಿದ್ದರಿಂದು ಅದು ಲ್ಯಾನ್ಸ್ ನಾಯ್ಕ್ ಚಂದ್ರಶೇಖರ್ ಮರಣಾವಶೇಷ ಎಂಬುದನ್ನು ಗುರುತು ಹಿಡಿಯಲಾಗಿದೆ.
ಹಿಮ ಕರಗಲಾರಂಭಿಸಿದಾಗ ನಾಪತ್ತೆಯಾದ ಯೋಧರ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತದೆ. ಅಂಥದ್ದೇ ಕಾರ್ಯಾಚರಣೆಯಲ್ಲಿ ಸಿಯಾಚಿನ್ ಗ್ಲೇಷಿಯರ್ನ ಹಳೇ ಬಂಕರ್ನಲ್ಲಿ ಈ ಮರಣಾವಶೇಷಗಳು ಪತ್ತೆಯಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ದುರಂತ ಸಂಭವಿಸಿದ್ದಾಗ ಲ್ಯಾನ್ಸ್ ನಾಯ್ಕ್ ಚಂದ್ರೇಶೇಖರ್ ಅವರ ಮೊದಲ ಪುತ್ರಿಗೆ 8 ಹಾಗೂ ಎರಡನೇ ಪುತ್ರಿ ನಾಲ್ಕು ವರ್ಷಗಳಾಗಿದ್ದವು. ಈಗ 38 ವರ್ಷಗಳ ಬಳಿಕ ಅವರು ತಮ್ಮ ತಂದೆಯನ್ನು ಈ ರೀತಿ ನೋಡುವಂತಾಗಿದೆ. ಈ ಮರಣಾವಶೇಷಗಳನ್ನು ಉತ್ತರಾಖಂಡದ ಹಲ್ದ್ವಾನಿಯಲ್ಲಿರುವ ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದು, ಅಲ್ಲಿಯೇ ಅಂತಿಮ ವಿಧಿ-ವಿಧಾನಗಳು ನಡೆಯಲಿವೆ.