ನೋಡು ನಾನು ಕುಡಿದಿಲ್ಲ... ಮಹಿಳೆಯ ಕುತ್ತಿಗೆಗೆ ಕೈಹಾಕಿ ತುಟಿಗೆ ಚುಂಬಿಸಲು ಯತ್ನಿಸಿದ ಎಸ್​ಐ! SI Try to Kiss

SI Try to Kiss
Published on

SI Try to Kiss : ಮದ್ಯ ಸೇವನೆ ಮಾಡಿಲ್ಲ ಎಂಬುದನ್ನು ಸಾಬೀತು ಮಾಡುವ ನೆಪದಲ್ಲಿ ಮಹಿಳೆಯ ತುಟಿಯನ್ನು ಚುಂಬಿಸಲು ಯತ್ನಿಸುವ ಮೂಲಕ ಮಹಿಳಾ ಸಬ್​ ಇನ್ಸ್​ಪೆಕ್ಟರ್​ ಒಬ್ಬರು ವಿವಾದದ ಸುಳಿಗೆ ಸಿಲುಕಿದ ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿದೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ವಿವಾದಕ್ಕೆ ಸಿಲುಕಿದ ಮಹಿಳಾ ಎಸ್​ಐ ಹೆಸರು ತಾನಿಯಾ ರಾಯ್. ಸಿಲಿಗುರಿಯಲ್ಲಿ ಗಸ್ತು ಕರ್ತವ್ಯದ ವೇಳೆ ಕುಡಿದ ಅಮಲಿನಲ್ಲಿ ತಾನಿಯಾ ಕಾಣಿಸಿಕೊಂಡಿದ್ದಾರೆ. ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಇತ್ತೀಚೆಗೆ ಪಶ್ಚಿಮ ಬಂಗಾಳ ಸರ್ಕಾರ ಪರಿಚಯಿಸಿದ ಪಿಂಕ್ ಮೊಬೈಲ್ ವ್ಯಾನ್‌ನಲ್ಲಿದ್ದಾಗಲೇ ಮಹಿಳಾ ಎಸ್​ಐ ಈ ಅಸಭ್ಯ ವರ್ತನೆ ತೋರಿದ್ದಾರೆ.

ಬುಧವಾರ (ಅ.23) ರಾತ್ರಿ ಈ ಘಟನೆ ನಡೆದಿದ್ದು, ಅನುಚಿತವಾಗಿ ವರ್ತಿಸಿದಲ್ಲದೆ, ಇಬ್ಬರು ಅಪ್ರಾಪ್ತರ ಮೇಲೆ ಹಲ್ಲೆ ನಡೆಸಿರುವ ವಿಡಿಯೋಗಳು ಸಹ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಮಹಿಳಾ ಪೊಲೀಸ್​ ಅಧಿಕಾರಿ ಅಮಲೇರಿದ ಸ್ಥಿತಿಯಲ್ಲಿ ಇರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸ್ಥಳೀಯ ಮಹಿಳಾ ಎಸ್​ಐ ಅನ್ನು ತೀವ್ರವಾಗಿ ಪ್ರಶ್ನಿಸಿದ್ದು, ಕೆಲಕಾಲ ಭಾರಿ ವಾಗ್ವಾದ ಸಹ ನಡೆಯಿತು.

ಘಟನೆಗೆ ಸಂಬಂಧಿಸಿದ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ, ಸಾಮಾಜಿಕ ಮಾಧ್ಯಮದಲ್ಲಿ ಲೇಡಿ ಎಸ್​ಐ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ವಿಶೇಷವಾಗಿ ನಗರದಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸಲು ನೇಮಕಗೊಂಡ ಅಧಿಕಾರಿಯಿಂದಲೇ ಇಂತಹ ಕೃತ್ಯ ಸ್ವೀಕಾರಾರ್ಹವಲ್ಲ ಎಂದು ನೆಟ್ಟಿಗರು ಖಂಡಿಸಿದ್ದಾರೆ.

SI Try to Kiss 1

ಈ ಘಟನೆಯ ಬಗ್ಗೆ ಬಂಗಾಳದ ಬಿಜೆಪಿ ನಾಯಕ ಸಮಿಕ್ ಭಟ್ಟಾಚಾರ್ಯ ಅವರ ಎಕ್ಸ್​ ಖಾತೆ ಮೂಲಕ ಪ್ರತಿಕ್ರಿಯಿಸಿದ್ದು, ಪಶ್ಚಿಮ ಬಂಗಾಳ ಪೊಲೀಸರ ಇಂತಹ ವರ್ತನೆ ನೋಡಿ ಜನರು ಆಘಾತಕ್ಕೆ ಒಳಗಾಗಲಿದ್ದಾರೆ. ಸಿಲಿಗುರಿ ಮೆಟ್ರೋಪಾಲಿಟನ್ ಪೊಲೀಸ್‌ನ ಪಿಂಕ್ ವ್ಯಾನ್ ಪಡೆಯ ಎಎಸ್‌ಐ ತಾನಿಯಾ ರಾಯ್ ಅವರು ಬುಧವಾರ ಕುಡಿದ ಮತ್ತಿನಲ್ಲಿ ಜೂಜಿನ ಅಡ್ಡೆಯ ಮೇಲೆ ದಾಳಿ ಮಾಡಿದರು. ಈ ವೇಳೆ ಅಲ್ಲಿಯೇ ಇದ್ದ ಮಹಿಳೆಯ ಕುತ್ತಿಗೆಯನ್ನು ಹಿಡಿದು ಅಸಹಜ ರೀತಿಯಲ್ಲಿ ನಡೆದುಕೊಂಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅಧಿಕಾರಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net