

ಸ್ವತಃ ಕೋಟಿ ಸೂರ್ಯರ ಕಾಂತಿಯಿಂದ ಕೂಡಿದವ ಳಾಗಿ ಶುಂಭಾಸುರನನ್ನು ಮರ್ದನಮಾಡಿ ದೇವತೆಗಳಿಂದಲೂ ಪೂಜಿತಳಾದ ಮಹಾದೇವಿ. ಮೇಲಾಗಿ ಭಕ್ತಿಯಿಂದ ಪೂಜಿಸಿದವರಿಗೆ ಬೇಕಾದ ಇಷ್ಟಾರ್ಥಗಳನ್ನು ಕೊಡುವವಳು. ಇಂದು ಆಯುಧ ಪೂಜೆಯೂ ಹೌದು. ನಮ್ಮ ನಿತ್ಯಜೀವನಕ್ಕೆ ಸಹಕಾರ ಕೊಟ್ಟು ರಕ್ಷಣೆ ಮಾಡುತ್ತಿರುವ ಎಲ್ಲ ಪದಾರ್ಥಗಳೂ ಆಯುಧಗಳೇ. ಅವುಗಳನ್ನು ದುರ್ಗಿಯ ರೂಪದಲ್ಲಿ, ಮಹಾಲಕ್ಷ್ಮಿಯ ರೂಪದಲ್ಲಿ ಭಾವಿಸಿ ಪೂಜಿಸುವುದು ಸಂಪ್ರದಾಯ. ಆಯುಧಗಳನ್ನು ಗಂಧ ಪುಷ್ಪ ಧೂಪ ದೀಪ ನೈವೇದ್ಯಗಳಿಂದ ಪೂಜಿಸಬೇಕು. ಯಾರು ಮಾಂಸಾಹಾರವನ್ನು ಬಳಸುತ್ತಾರೋ ಅಂಥವರು ಆಯುಧಗಳಿಗೆ ಬಲಿಯನ್ನು ಕೊಡುವ ಸಂಪ್ರದಾಯವಿದೆ. ಉಳಿದವರು ಬೂದುಗುಂಬಳಕಾಯಿ, ನಿಂಬೆಹಣ್ಣು, ಉದ್ದು ಇತ್ಯಾದಿಗಳಿಂದ ಕೂಡಿದ ಅನ್ನ, ಹಿಟ್ಟಿನಿಂದ ಮಾಡಿದ ಪಶು ಇತ್ಯಾದಿಗಳಿಂದಲೇ ಬಲಿಯನ್ನು ಕೊಡಬೇಕು. ಇಂದಿಗೆ ಒಂಬತ್ತು ದಿವಸಗಳ ನವದುರ್ಗೆಯರ ಪೂಜೆ ಮಂಗಳವಾಗುತ್ತದೆ. ನಾಳೆ ವಿಜೃಂಭಣೆಯ ವಿಜಯದಶಮಿಯನ್ನು ಆಚರಿಸಿ, ಆನಂದಿಸೋಣ !. ಕೃಷ್ಣಾರ್ಪಣಮಸ್ತು