

ಶ್ರೀನಿವಾಸಪುರ: ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಂಘದ ಪ್ರತಿ ಸದಸ್ಯರಿಗೆ ಪ್ರಸ್ತುತ ನೀಡುತ್ತಿರುವ 50 ಸಾವಿರ ರೂ. ಬದಲಾಗಿ 1 ಲಕ್ಷ ರೂ. ಬಡ್ಡಿರಹಿತ ಸಾಲ ನೀಡಲಾಗುವುದು ಎಂದು ಮಾಜಿ ಸ್ಪೀಕರ್, ಶಾಸಕ ರಮೇಶ್‌ಕುಮಾರ್ ಭರವಸೆ ನೀಡಿದರು.
ಶ್ರೀನಿವಾಸಪುರದ ಸಿ.ಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಭಾನುವಾರ ಸಾಮೂಹಿಕ ಸ್ವಯಂಚಾಲಿತ ಹಾಲು ಕರೆಯುವ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
ಹೈನುಗಾರಿಕೆ ಅವಲಂಬಿತ ಪ್ರತಿ ಕುಟುಂಬಕ್ಕೂ ಡಿಸಿಸಿ ಬ್ಯಾಂಕ್‌ನಿಂದ 2 ಸೀಮೆ ಹಸು ಖರೀದಿಗೆ ಸಾಲನೀಡುವ ಯೋಜನೆ ಜಾರಿಗೆ ತರಲಾಗುವುದು. ಹಾಲು ಸೊಸೈಟಿಗಳನ್ನು ಪ್ರಾಮಾಣಿಕವಾಗಿ ನಿರ್ವಹಣೆ ಮಾಡಿದರೆ ಲಾಭಾಂಶ ಪಡೆದು ಉಳಿಕೆ ಹಣವನ್ನು ಉತ್ಪಾದಕರಿಗೆ ನೀಡಬಹುದು ಎಂದರು.
ಸ್ತ್ರೀಶಕ್ತಿ ಸಂಘಗಳಲ್ಲಿ ಸೇರದೆ ಇರುವವರಿಗೆ ಹೊಸದಾಗಿ 10 ಜನರಂತೆ 1 ಗುಂಪು ರಚಿಸಿಕೊಂಡರೆ, ಪ್ರತಿ ಸದಸ್ಯರಿಗೆ 50 ಸಾವಿರ ರೂ. ಸಾಲ ಕೊಡಿಸುತ್ತೇನೆ. ಡಿಸಿಸಿ ಬ್ಯಾಂಕ್‌ನಿಂದ ಮಕ್ಕಳ ವಿದ್ಯಾಭ್ಯಾಸ ಸೇರಿ ಕುಟುಂಬಗಳ ಆರ್ಥಿಕ ಸುಧಾರಣೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ. ಈಗಾಗಲೆ ಸಾಲ ಮರುಪಾವತಿ ಮಾಡಿರುವ ಸಂಘಗಳಿಗೆ ಸಂಕ್ರಾಂತಿಯೊಳಗೆ ಮತ್ತೆ ಸಾಲ ನೀಡಲಾಗುವುದು ಎಂದರು.
ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಮಾತನಾಡಿ, ತಾಲೂಕಿನಲ್ಲಿ 165 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, 27 ಘಟಕಗಳಲ್ಲಿ ಸ್ವಯಂಚಾಲಿತ ಹಾಲು ಕರೆಯುವ ಯಂತ್ರ ಅಳವಡಿಸಲಾಗಿದೆ. 3 ಘಟಕಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ತಾಲೂಕಿನಿಂದ ನಿತ್ಯ 55 ಸಾವಿರ ಲೀಟರ್ ಹಾಲು ಸರಬರಾಜು ಆಗುತ್ತಿದೆ. 25 ಸಹಕಾರ ಸಂಘಗಳಲ್ಲಿ ಬಿಎಂಸಿ ಕೇಂದ್ರ ಪ್ರಾರಂಭಿಸಿ ಕ್ಯಾನ್‌ರಹಿತ ಹಾಲನ್ನು ಕೋಚಿಮುಲ್‌ಗೆ ರವಾನಿಸಲಾಗುತ್ತಿದೆ. ಇದರಿಂದ ಹಾಲಿನ ಗುಣಮಟ್ಟ ಉತ್ತಮವಾಗಿದೆ ಎಂದರು.
ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ನಂಬಿಹಳ್ಳಿ ಗ್ರಾಪಂ ಅಧ್ಯಕ್ಷ ನರಸಿಂಹಯ್ಯ, ಕೋಚಿಮುಲ್ ಮಾಜಿ ನಿರ್ದೇಶಕ ದ್ವರಸಂದ್ರ ಮುನಿವೆಂಕಟಪ್ಪ, ತಾಪಂ ಮಾಜಿ ಸದಸ್ಯ ಕೆ.ಕೆ ಮಂಜು, ಕೋಚಿಮುಲ್ ಶಿಬಿರ ಕಚೇರಿ ವಿಸ್ತರಣಾಧಿಕಾರಿ ನರಸಿಂಹಯ್ಯ, ಗ್ರಾಪಂ ಸದಸ್ಯರಾದ ಚೌಡರೆಡ್ಡಿ, ಚಲಪತಿ ಇತರರಿದ್ದರು.