

ಕಪ್ಪಸೋಗೆ: ಶ್ರೀ ಮಹಾದೇವ ತಾತಾರವರು ಈ ಪುಣ್ಯಕ್ಷೇತ್ರದಲ್ಲಿ ನೆಲೆಸಿ ಈ ಭಾಗದಲ್ಲಿ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಸಂಗಮ ಕ್ಷೇತ್ರದಲ್ಲಿ ಉತ್ತಮವಾದ ಕಟ್ಟಡ ನಿರ್ಮಾಣ ಮಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆನ್ನುವ ಉದ್ದೇಶದಿಂದ ಪ್ರಾಥಮಿಕ ಶಾಲೆ ಆರಂಭಿಸಿರುವುದು ಅನೇಕ ಜನರಿಗೆ ಅನುಕೂಲವಾಗಲಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು. ಸೋಮವಾರ ಉದ್ಘಾಟಿಸಿದರು.
ಹುಲ್ಲಹಳ್ಳಿ ಸಮೀಪದ ಸಂಗಮ ಕ್ಷೇತ್ರದಲ್ಲಿ ಶ್ರೀ ಸದ್ಗುರು ಮಹಾದೇವ ತಾತಾ ಭಕ್ತ ಮಂಡಳಿ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಸದ್ಗುರು ಮಹಾದೇವ ತಾತಾ ಅವರ ಪ್ರಾಥಮಿಕ ಪ್ರೌಢಶಾಲೆಯನ್ನು ಸೋಮವಾರ ಶ್ರೀಗಳು ಉದ್ಘಾಟಿಸಿ ಆಶೀರ್ವಚನ ನೀಡಿ, ಮಕ್ಕಳು ಒಳ್ಳೆಯ ಸಂಸ್ಕಾರ ಪಡೆದುಕೊಂಡು ಬೆಳೆಯಲಿಕ್ಕೆ ಒಳ್ಳೆಯ ವಾತಾವರಣದಲ್ಲಿ ನೂತನ ಶಾಲೆ ನಿರ್ಮಾಣಗೊಂಡಿದೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ಒದಗಿಸುವ ಸಲುವಾಗಿ ಮಹದೇವ ತಾತಾ ಅವರ ಭಕ್ತ ಮಂಡಳಿ ವತಿಯಿಂದ ಶ್ರೀ ಮಹಾದೇವ ತಾತಾ ಅವರ ಪ್ರಾಥಮಿಕ ಶಾಲೆಯ ನೂತನ ಭವ್ಯವಾದ ಕಟ್ಟಡ ನಿರ್ಮಾಣವಾಗಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಂಡು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕಲ್ಪಿಸಿಕೊಡಿ ಎಂದು ಕಿವಿಮಾತು ಹೇಳಿದರು.
ಆಧುನಿಕ ಭರಾಟೆಯ ನಡುವೆ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಘಟಿಸುತ್ತಿವೆ. ಅಂತಹ ಬದಲಾವಣೆಗೆ ಹೊಂದಿಕೊಂಡು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಮೌಲ್ಯಯುತವಾದ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ದೊರಕಿಸಿಕೊಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗುರು ಮಲ್ಲೇಶ್ವರ ಮಠ ಅಧ್ಯಕ್ಷ ಶ್ರೀ ಮಹಾಂತ ಸ್ವಾಮೀಜಿ, ಗುರು ಕಂಬಳೇಶ್ವರ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಮಾದನಹಳ್ಳಿ ಉಕ್ಕಿನ ಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ, ಮಾದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಹುಲ್ಲಹಳ್ಳಿ ಮಠದ ಶ್ರೀ ಇಮ್ಮಡಿ ಚೆನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ, ಕಂತೆ ಮಹದೇಶ್ವರ ಬೆಟ್ಟದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಸಂಗಮ ಕಾರ್ಯ ಸ್ವಾಮಿ ಮಠದ ಶ್ರೀ ಮಹೇಶ್ವರ ಸ್ವಾಮೀಜಿ, ಬರಡನಪುರ ಮಠದ ಶ್ರೀ ಪರಶಿವಮೂರ್ತಿ ಸ್ವಾಮೀಜಿ, ಶಿರಮಳ್ಳಿ ಮಠದ ಶ್ರೀ ಇಮ್ಮಡಿ ಮುರಗಿ ಸ್ವಾಮೀಜಿ, ಹಂಚಿಪುರದ ಶ್ರೀ ಚನ್ನಬಸವ ಸ್ವಾಮೀಜಿ, ಕಸವಿನಲ್ಲಿ ಶ್ರೀ ಮಠದ ಶಿವಕುಮಾರ ಸ್ವಾಮೀಜಿ, ಶಾಸಕರಾದ ಜಿ.ಟಿ.ದೇವೇಗೌಡ, ಗಣೇಶ್ ಪ್ರಸಾದ್, ಅನಿಲ್ ಚಿಕ್ಕಮಾದು, ಮಾಜಿ ಶಾಸಕರಾದ ಹರ್ಷವರ್ಧನ್, ಕಳಲೆ ಕೇಶವಮೂರ್ತಿ, ಶ್ರೀ ಮಹದೇವಾ ತಾತಾ ಭಕ್ತ ಮಂಡಳಿ ಅಧ್ಯಕ್ಷ ಶಿವರಾಜಪ್ಪ, ನಿರ್ದೇಶಕ ಕೆಂಡಗಣಪ್ಪ, ಕಾರ್ಯದರ್ಶಿ ಪಟೇಲ್ ಮಹದೇವಪ್ಪ, ಹುಲ್ಲಹಳ್ಳಿ ಮಾದಪ್ಪ, ಮಾದಾಪುರ ಶಿವರಾಜಪ್ಪ, ಮಹದೇವಸ್ವಾಮಿ ಸೇರಿದಂತೆ ಇತರರಿದ್ದರು.
ಶಾಲಾ ಕಟ್ಟಡ ನಿರ್ಮಾಣ ಮಾಡಲು ಭೂಮಿ ನೀಡಿದ ಮಾದೇವಮ್ಮ ಕುಟುಂಬ ಹಾಗೂ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದ ದಾನಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.