

ಹಾವೇರಿ: ಶ್ರೀ ಕೃಷ್ಣ ಪರಮಾತ್ಮ ಬೋಧಿಸಿದ ಗೀತೋಪದೇಶ ನಮ್ಮ ಬದುಕಿಗೆ ಉತ್ತಮ ಮಾರ್ಗದರ್ಶಿಯಾಗಿದೆ ಎಂದು ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಯಾದವ ಸಂಘದ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಣ್ಣ ಸಣ್ಣ ಸಮುದಾಯಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಅನೇಕ ಮಹಾತ್ಮರ ಜಯಂತಿಗಳನ್ನು ಆಚರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಯಂತಿಗಳನ್ನು ಗ್ರಾಮೀಣ ಭಾಗದಲ್ಲಿ ಅತ್ಯಂತ ವಿಜೃಂಭಣೆಯಿಂದ ಮಾಡಬೇಕು. ಸಮಾಜ ಬಾಂಧವರು ಸಂಘಟನೆಯಾಗಬೇಕು. ಒಗ್ಗಟ್ಟಾಗಿ ಜಯಂತಿಗಳನ್ನು ಆಚರಣೆ ಮಾಡಬೇಕು. ಸಮಾಜದ ಮುಖಂಡರು ಸಲ್ಲಿಸಿದ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಮಾತನಾಡಿ, ಕೃಷ್ಣನ ಸಂದೇಶಗಳನ್ನು ತಿಳಿದುಕೊಂಡು ಬದುಕಿದರೆ ಪ್ರತಿಯೊಬ್ಬರ ಜೀವನ ಉತ್ಕೃಷ್ಟವಾಗುತ್ತದೆ. ಮಕ್ಕಳಿಗೆ ಭಗವದ್ಗೀತೆಯ ಶ್ಲೋಕಗಳನ್ನು ಕೇಳುವ ಹಾಗೂ ಹೇಳುವ ರೂಢಿಮಾಡಿಸಬೇಕು ಎಂದರು.
ಸಾಹಿತಿ ಹನುಮಂತಗೌಡ ಗೊಲ್ಲರ ಶ್ರೀ ಕೃಷ್ಣನ ಕುರಿತು ಉಪನ್ಯಾಸ ನೀಡಿದರು. ಜಿ.ಪಂ. ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಸಿದ್ದಬಸಪ್ಪ ಯಾವದ, ಬಿ.ಡಿ. ಸಿದ್ದಪ್ಪಳವರ ಮಾತನಾಡಿದರು.
ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಹೊನ್ನಪ್ಪ ಹಾಲಗಿ, ಎಂ.ಎನ್. ಮೈದೂರ, ಭೀಮನಗೌಡ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ ಮತ್ತಿತರರು ಉಪಸ್ಥಿತರಿದ್ದರು.