ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಖ್ಯಾಮಾ ಮೇಲೆ ದಾಳಿ, ಗಾಯ

BDR Kyama
Published on

ಬೀದರ್: ಶ್ರೀರಾಮ ಸೇನೆ, ಭಾರತೀಯ ಗೋ ಪರಿವಾರ ಹಾಗೂ ಕರ್ನಾಟಕ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ (38) ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ಖ್ಯಾಮಾ ಅವರ ಸ್ವಗ್ರಾಮ ಬೀದರ್ ತಾಲೂಕಿನ ಮಮದಾಪುರದಲ್ಲಿ ಈ ಘಟನೆ ಜರುಗಿದೆ. ಅದೇ ಗ್ರಾಮದ ಅಮೃತ, ಧನರಾಜ ಇತರರು ಜತೆ ವಾಗ್ವಾದ ನಡೆದಿದೆ. ಈ ವೇಳೆ ಧನರಾಜ ಇತರರು ಕೊಡಲಿಯಿಂದ ಖ್ಯಾಮಾ ಮೇಲೆ ದಾಳಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೆನ್ನು, ಕೈ ಇತರೆಡೆ ಗಾಯಗಳಾಗಿವೆ. ಕುತ್ತಿಗೆ ಮೇಲೆ ಕೊಡಲಿ ಹೊಡೆಯುವುದು ಅದೃಷ್ಟವಶಾತ್ ತಪ್ಪಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಖ್ಯಾಮಾ ಅವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ತಮ್ಮ ಮೇಲೆ ಖ್ಯಾಮಾ ಇತರರಿಂದ ಹಲ್ಲೆಯಾಗಿದೆ ಎಂದು ಧನರಾಜ ತಂದೆ ಅಮೃತ ಸಹ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರ ತಲೆಗೆ ಪೆಟ್ಟಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net