

Shree Siddhivinayak Temple : ವಾಣಿಜ್ಯ ನಗರಿ ಮುಂಬೈನ ಪ್ರಭಾದೇವಿಯಲ್ಲಿರುವ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ವಾರ್ಷಿಕ ಆದಾಯವು 2024-25ನೇ ಹಣಕಾಸು ವರ್ಷದಲ್ಲಿ 133 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ದೇವಾಲಯದ ಟ್ರಸ್ಟ್ ವರದಿ ಮಾಡಿದೆ. ಈ ಮೊತ್ತವೂ 2023-24ನೇ ಹಣಕಾಸುವ ವರ್ಷದ 114 ಕೋಟಿ ರೂ. ಆದಾಯಕ್ಕಿಂತ ಶೇ. 15 ರಷ್ಟು ಹೆಚ್ಚಾಗಿದೆ ಎಂದು ಟ್ರಸ್ಟ್‌ನ ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಪಾಟೀಲ್ ಹೇಳಿದ್ದಾರೆ.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಮಾರ್ಚ್ 31 ರಂದು ತನ್ನ ವಾರ್ಷಿಕ ಬಜೆಟ್ ಅನ್ನು ಮಂಡಿಸಿತು. ಮುಂದಿನ ಹಣಕಾಸು ವರ್ಷ 2025-26 ರಲ್ಲಿ ದೇವಾಲಯದ ಆದಾಯವು 154 ಕೋಟಿ ರೂ.ಗೆ ಏರುವ ನಿರೀಕ್ಷೆಯನ್ನು ಹೊಂದಲಾಗಿದೆ ಎಂದು ತಿಳಿಸಿದೆ.
ಈ ಬಗ್ಗೆ ಸಿದ್ಧಿವಿನಾಯಕ ದೇವಾಲಯದ ಉಪ ಕಾರ್ಯನಿರ್ವಾಹಕ ಅಧಿಕಾರಿ ಸಂದೀಪ್ ರಾಥೋಡ್ ಮಾತನಾಡಿ, ಆಡಳಿತದ ದಕ್ಷತೆಯಿಂದಾಗಿ, ನಮ್ಮ ಆದಾಯವು 114 ಕೋಟಿ ರೂಪಾಯಿಂದ ದಾಖಲೆಯ 133 ಕೋಟಿ ರೂ.ಗಳಿಗೆ ಏರಿದೆ. ಇದು ಟ್ರಸ್ಟ್‌ನ ಅಂದಾಜನ್ನು ಸಹ ಮೀರಿದೆ. ಭಕ್ತರಿಗೆ ಸುಗಮ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟರೆ, ಸರತಿ ಸಾಲುಗಳು ವೇಗವಾಗಿ ಚಲಿಸಿದರೆ, ಹೆಚ್ಚಿನ ಜನರು ದರ್ಶನ ಪಡೆಯಬಹುದು. ಇದರಿಂದ ಸಹಜವಾಗಿ ದೇಣಿಗೆಗಳು ಕೂಡ ಹೆಚ್ಚಾಗುತ್ತವೆ ಎಂದರು.
ಸಿದ್ಧಿವಿನಾಯಕ ದೇವಾಲಯದಲ್ಲಿ, ಪ್ರತಿಯೊಬ್ಬ ಭಕ್ತರಿಗೆ ದರ್ಶನಕ್ಕಾಗಿ 10 ರಿಂದ 15 ಸೆಕೆಂಡುಗಳು ಸಿಗುತ್ತವೆ. ಇದು ನನ್ನ ಪ್ರಕಾರ, 5 ರಿಂದ 7 ಸೆಕೆಂಡುಗಳನ್ನು ನೀಡುವ ಇತರ ದೊಡ್ಡ ದೇವಾಲಯಗಳಿಗಿಂತಲೂ ಉತ್ತಮವಾಗಿದೆ. ಇದರ ಪರಿಣಾಮವಾಗಿ, ಜನರು ಹೆಚ್ಚು ದೇಣಿಗೆ ನೀಡಲು ಒಲವು ತೋರುತ್ತಾರೆ ಎಂದು ಸಂದೀಪ್ ರಾಥೋಡ್ ಹೇಳಿದರು.
ಹುಂಡಿ ಗಳಿಕೆ, ಪೂಜಾ ವಿಧಿವಿಧಾನಗಳು, ಲಡ್ಡು ಮತ್ತು ಇನ್ನಿತ್ತರ ಪ್ರಸಾದ ಮಾರಾಟ, ಆನ್‌ಲೈನ್ ದೇಣಿಗೆಗಳು ಮತ್ತು ಚಿನ್ನ-ಬೆಳ್ಳಿ ಕಾಣಿಕೆಗಳಿಂದ ಆದಾಯವನ್ನು ನಿರ್ಣಯಿಸಲಾಗುತ್ತದೆ. ಹಣವನ್ನು ಟ್ರಸ್ಟ್‌ನ ಕಲ್ಯಾಣ ಚಟುವಟಿಕೆಗಳಿಗೆ ವರ್ಗಾಯಿಸಲಾಗುತ್ತದೆ. ನಾವು ಹಣದುಬ್ಬರಕ್ಕೆ ಅನುಗುಣವಾಗಿ ಆದಾಯ ಮೌಲ್ಯಮಾಪನವನ್ನು ಸರಿಹೊಂದಿಸುತ್ತೇವೆ. ಆಹಾರ ಪದಾರ್ಥಗಳ ಬೆಲೆಗಳು ಮತ್ತು ಚಿನ್ನದ ಬೆಲೆಗಳು ಏರಿದ್ದರೂ ಸಹ, ನಮ್ಮ ಚಿನ್ನ-ಬೆಳ್ಳಿಯಲ್ಲಿ ಹೆಚ್ಚಿನ ವಸ್ತುಗಳನ್ನು ಹರಾಜು ಮಾಡುವುದನ್ನು ನಾವು ನೋಡಿದ್ದೇವೆ. ಪ್ರಸಾದವನ್ನು ಲಾಭ-ನಷ್ಟ-ರಹಿತ ಆಧಾರದ ಮೇಲೆ ಮಾರಾಟ ಮಾಡಲಾಗುತ್ತದೆ ಎಂದು ರಾಥೋಡ್ ಹೇಳಿದರು. (ಏಜೆನ್ಸೀಸ್)