ಬರಸಂಕಷ್ಟಕ್ಕೆ ಸ್ಪಂದಿಸದ ಬಿಜೆಪಿಗೆ ಮತ ನೀಡಬೇಕೆ?: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

siddu
Published on

ಬೆಂಗಳೂರು: ಲೋಕಸಭೆ ಚುನಾವಣೆಗೆ ಸಿದ್ಧತೆ ಸಂಬಂಧ ಬೆಂಗಳೂರಿಗೆ ಬಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಸರಣಿ ಪೋಸ್ಟ್​ ಮಾಡಿರುವ ಸಿಎಂ, ರಾಜ್ಯದ ಜನರಿಗೆ ಬರದ ಸಂಕಷ್ಟದಲ್ಲಿ ಸಹಾಯಕ್ಕೆ ಬರದ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ, ರಾಜ್ಯದ ಜನರ ಬಳಿ ಮತ ಕೇಳಲು ಯಾವ ನೈತಿಕ ಹಕ್ಕಿದೆ. ಇಂತಹ ಬಿಜೆಪಿಯವರಿಗೆ ಜನರು ಮತ ನೀಡಬೇಕೇ ಎಂದು ಮತದಾರರಿಗೆ ಸಿಎಂ ಪ್ರಶ್ನೆ ಮಾಡಿದ್ದಾರೆ.

ಬರಪರಿಹಾರ ನಿರ್ಧರಿಸುವ ಉನ್ನತಾಧಿಕಾರ ಸಮಿತಿ ಅಧ್ಯಕ್ಷರಾಗಿರುವ ಅಮಿತ್ ಶಾ ಅವರು ಬರಪರಿಹಾರಕ್ಕೆ ಸಮ್ಮತಿ ಸೂಚಿಸಿಲ್ಲ. ಮೇಕೆದಾಟು ಯೋಜನೆ, ಮಹದಾಯಿ ಯೋಜನೆಗೂ ಇದುವರೆಗೆ ಅನುಮತಿ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ತೆರಿಗೆ ಹಣದಲ್ಲಿ ರಾಜ್ಯಕ್ಕೆ ಪಾಲು ನೀಡುತ್ತಿಲ್ಲ. ಆದರೆ ಮಾಜಿಮುಖ್ಯಮಂತ್ರಿ ಕುಮಾರಸ್ವಾಮಿ ಈ ಬಗ್ಗೆ ಚಕಾರವೆತ್ತದೇ ಕೇಂದ್ರ ಬಿಜೆಪಿ ಸರ್ಕಾರದ ವಕ್ತಾರರಾಗಿಬಿಟ್ಟಿದ್ದಾರೆ. ಕೇಂದ್ರದ ಈ ಧೋರಣೆ ಕನ್ನಡಿಗರಿಗೆ ಮಾಡುತ್ತಿರುವ ದ್ರೋಹ. ಬಿಜೆಪಿಯವರ ಈ ಧೋರಣೆಗೆ ರಾಜ್ಯದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂಬ ಭರವಸೆಯಿದೆ ಎಂದು ನುಡಿದಿದ್ದಾರೆ.

ಬಿಜೆಪಿ ಕೇವಲ ಸುಳ್ಳು ಹೇಳುತ್ತಿದೆ: ರಾಜ್ಯದಲ್ಲಿ ಜನಪರ ಯೋಜನೆಗಳು, ಅಭಿವೃದ್ಧಿ ಕಾರ್ಯಗಳು ಮುಂದುವರೆಯಬೇಕಾದರೆ ನಮ್ಮ ಸರ್ಕಾರವೇ ಅಸ್ತಿತ್ವದಲ್ಲಿರಬೇಕು. ಕೇಂದ್ರದಲ್ಲಿ ಬಿಜೆಪಿ ಅವರು ಅಧಿಕಾರಕ್ಕೆ ಬಂದಲ್ಲಿ ಜನಪರ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ಜನರಿಗೆ ಮನವರಿಕೆ ಮಾಡಿಸಿದ್ದೇನೆ. ಬಿಜೆಪಿಯವರು ಕೇವಲ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಮಾಡಿರುವ ಸಾಧನೆಗಳ ಆಧಾರದ ಮೇಲೆ ಮತ ಕೇಳುತ್ತಿದ್ದು, ಜನ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಿದ್ದಾರೆ ಎಂಬ ಭರವಸೆಯಿದೆ ಎಂದು ಹೇಳಿದರು.

ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಪಾದಯಾತ್ರೆ ಮಾಡಿದ್ದೆ: ಶಾಸಕ ಜನಾರ್ಧನ ರೆಡ್ಡಿ ಅವರು ಸಚಿವರಾದ ಸಂತೋಷ್ ಲಾಡ್ ಹಾಗೂ ನಾಗೇಂದ್ರ ಅವರ ಮೇಲೆ ಅಕ್ರಮ ಗಣಿಗಾರಿಕೆ ಆರೋಪ ಮಾಡಿದ್ದಾರೆ. ಅಕ್ರಮ ಗಣಿಗಾರಿಕೆ ನಡೆಸಿರುವ ಬಗ್ಗೆ ಸಾಕ್ಷ್ಯಧಾರಗಳಿದ್ದರೆ ನ್ಯಾಯಾಯಲದ ಮೊರೆ ಹೋಗಬೇಕು. ಜನಾರ್ಧನ ರೆಡ್ಡಿ ಅವರು ಅಕ್ರಮಗಣಿಗಾರಿಕೆಯಲ್ಲಿ ತೊಡಗಿದ್ದರು ಎಂದು ವರದಿಯಲ್ಲಿ ಬಂದ ಕಾರಣದಿಂದಾಗಿ, ನಾನು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಹೋರಾಟ ಮಾಡಿ, ಪಾದಯಾತ್ರೆ ಕೈಗೊಂಡಿದ್ದೆ. ಈ ರೀತಿಯ ಯಾವ ವರದಿಗಳು ಈ ಇಬ್ಬರು ಸಚಿವರ ಮೇಲೆ ಬಂದಿಲ್ಲ ಎಂದರು.

ಹಾಸನದಲ್ಲಿ ಕಾಂಗ್ರೆಸ್​ ಗೆಲುವು ಖಚಿತ: ಹಿಂದೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಅವರ ಮಗನನ್ನು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಲ್ಲಿಸಿ ಸೋಲನ್ನು ಅನುಭವಿಸಿದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾನು ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಮಾಡಿದ್ದರಿಂದ ಅವರು ಹಾಸನದಲ್ಲಿ ಗೆಲುವು ಸಾಧಿಸಿದರು. ಈ ಬಾರಿ ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕೆಂದು ಕಾರ್ಯಪ್ರವೃತ್ತರಾಗಿದ್ದು, ಹಾಸನದ ಜನತೆ ಕಾಂಗ್ರೆಸ್ ಪಕ್ಷದತ್ತ ಒಲವು ತೋರಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ

ಮುಂದಿನ ಬಾರಿಯೂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು ವರುಣಾದ ಜನರು ಆಪೇಕ್ಷೆ ಪಡುತ್ತಿದ್ದಾರೆ. ಈ ಬಾರಿಯ ನನ್ನ ಸರ್ಕಾರದ ಅವಧಿಯೇ ನಾಲ್ಕು ವರ್ಷವಿದೆ. ನನ್ನ 82ನೇ ವಯಸ್ಸಿಗೆ ನನ್ನ ರಾಜಕೀಯ ಜೀವನಕ್ಕೆ 50 ವರ್ಷವಾಗುತ್ತದೆ. ಚುನಾವಣೆಯ ಬಗ್ಗೆ ಯಾವುದೇ ರೀತಿಯ ಆತಂಕವಿಲ್ಲ ಎಂದರು.

ಹಿಂದಿ ಎನ್ನುವುದು ರಾಷ್ಟ್ರಭಾಷೆ ಎನ್ನುವ ಸುಳ್ಳನ್ನು ಮತ್ತೆ ಮತ್ತೆ ಹೇಳಿ ಆ ಭಾಷೆಯನ್ನು ಕನ್ನಡಿಗರ ಮೇಲೆ ಹೇರುತ್ತಿರುವುದು ಯಾಕೆ? ಹಿಂದಿ ರಾಷ್ಟ್ರಭಾಷೆ ಎನ್ನುವುದನ್ನು ಸಂವಿಧಾನ ಹೇಳಿದೆಯೇ ಅಮಿತ್ ಶಾ ಅವರೇ? ಹೇಳಿದ್ದರೆ ಸಂವಿಧಾನದ ಯಾವ ಪರಿಚ್ಚೇದಲ್ಲಿ ಹೇಳಲಾಗಿದೆ? ದಯವಿಟ್ಟು ಅದನ್ನು ಕನ್ನಡಿಗರ ಮುಂದೆ ತೆರೆದಿಡಿ ಎಂದು ಆಗ್ರಹಿಸಿದರು.

ಗೃಹ ಸಚಿವ ಅಮಿತ್ ಶಾ ಅವರೇ ಉತ್ತರ ಕೊಡಿ: ಗೃಹ ಸಚಿವ ಅಮಿತ್ ಶಾ ಅವರೇ, ಕರ್ನಾಟಕದಲ್ಲಿ ಮತಕೇಳುವ ಮೊದಲು ಕನ್ನಡಿಗ ಮತದಾರರ ಪ್ರಶ್ನೆಗಳಿಗೆ ಉತ್ತರಿಸಿ. ಜಗತ್ತಿನ ಯಾವ ಭಾಷೆಗೂ ನಮ್ಮ ವಿರೋಧ ಇಲ್ಲ. ಆದರೆ ಕನ್ನಡದ ನೆಲದಲ್ಲಿ ಕನ್ನಡ ಭಾಷೆಗೆ ಮೊದಲ ಪೂಜೆ ಸಲ್ಲಬೇಕೆನ್ನುವುದು ಮಾತ್ರ ಕನ್ನಡಿಗರ ನಿಲುವು. ಕನ್ನಡ ಧ್ವಜವನ್ನು ರೂಪಿಸಿ ಅಂಗೀಕಾರಕ್ಕಾಗಿ ಕೇಂದ್ರ ಬಿಜೆಪಿ ಸರ್ಕಾರ ಸರ್ಕಾರಕ್ಕೆ ಕಳಿಸಿ ಆರು ವರ್ಷಗಳಾಗುತ್ತಾ ಬಂದರೂ ಇಲ್ಲಿಯ ವರೆಗೆ ಅದಕ್ಕೆ ಅನುಮೋದನೆ ನೀಡಿಲ್ಲ. ಕನ್ನಡ ಧ್ವಜದ ಬಗ್ಗೆ ಯಾಕೆ ನಿಮ್ಮ ವಿರೋಧ? ಉತ್ತರ ಕೊಡಿ ಎಂದು ಪ್ರಶ್ನೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net