೧೯೭೮ರ ತೀರ್ಪನ್ನು ಮರುಪರಿಶೀಲಿಸಬೇಕೆ?: ಸುಪ್ರೀಂಕೋರ್ಟ್ ಪ್ರಶ್ನೆ

Supreme Court
Published on
  • ನವದೆಹಲಿ: ೧೯೭೮ರಿಂದ ಅಸ್ತಿತ್ವದಲ್ಲಿರುವ ಬೆಂಗಳೂರು ನೀರು ಸರಬರಾಜು ಪ್ರಕರಣದ ತೀರ್ಪನ್ನು ಈಗ ಮರುಪರಿಶೀಲಿಸಬೇಕೆ ಎಂದು ಸುಪ್ರೀಂಕೋರ್ಟ್ ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಕೇಳಿದೆ.
  • ಉತ್ತರ ಪ್ರದೇಶ ಸರ್ಕಾರ ಮತ್ತು ಜೈ ಬೀರ್ ಸಿಂಗ್ ನಡುವಣ ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠ ಈ ಪ್ರಶ್ನೆ ಮುಂದಿಟ್ಟಿತು. ಜೈ ಬೀರ್ ಸಿಂಗ್ ಪ್ರಕರಣವನ್ನು ಸುಪ್ರೀಂಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಪೀಠ ವಿಚಾರಣೆ ನಡೆಸುತ್ತಿದೆ. ಕೈಗಾರಿಕಾ ವಿವಾದಗಳ ಕಾಯಿದೆ-೧೯೪೭ರ ಸೆಕ್ಷನ್ ೨ (ಜೆ) ಅಡಿ ಉದ್ಯಮವನ್ನು ಸೀಮಿತ ಪದಗಳಲ್ಲಿ ವ್ಯಾಖ್ಯಾನಿಸಬೇಕೆ ಎಂಬುದು ಪ್ರಕರಣದ ಮುಖ್ಯ ಪ್ರಶ್ನೆಯಾಗಿದೆ.
  • ಈ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರದ ಅಟಾರ್ನಿ ಜನರಲ್ ಅವರಿಗೆ ನೋಟಿಸ್ ಜಾರಿ ಮಾಡಿದ ಸುಪ್ರೀಂಕೋರ್ಟ್, ಬೆಂಗಳೂರು ನೀರು ಸರಬರಾಜು ಪ್ರಕರಣ ೪೫ ವರ್ಷಗಳ ಹಿಂದಿನದು. ಅದನ್ನು ಪರಿಶೀಲಿಸುವ ಅಗತ್ಯವಿದೆಯೇ, ಪರಿಶೀಲಿಸದೇ ಇದ್ದರೆ ಸಾರ್ವಜನಿಕರಿಗೆ ಆಗುವ ದೊಡ್ಡ ಹಾನಿಯಾದರೂ ಏನೆಂಬುದನ್ನು ನೋಡಬೇಕು ಎಂದರು.
  • ಬೆಂಗಳೂರು ನೀರು ಸರಬರಾಜು, ಒಳಚರಂಡಿ ಮಂಡಳಿ ಮತ್ತು ಎ ರಾಜಪ್ಪ ನಡುವಿನ ಪ್ರಕರಣಕ್ಕೆ ಸಂಬಂಧಿಸಿ ೧೯೭೮ರಲ್ಲಿ ೭ ನ್ಯಾಯಮೂರ್ತಿಗಳ ಪೀಠ, ಕೈಗಾರಿಕಾ ವಿವಾದಗಳ ಕಾಯ್ದೆಯಡಿಯಲ್ಲಿ ಉದ್ಯಮ ಎಂಬ ಪದವನ್ನು ವಿಶಾಲ ಅರ್ಥದಲ್ಲಿ ನೋಡಬೇಕು ಎಂದು ಹೇಳಿತ್ತು. ಅಂತೆಯೇ ಲಾಭದ ಉದ್ದೇಶ ಲೆಕ್ಕಿಸದೆ ಪ್ರತಿಯೊಂದು ವೃತ್ತಿಯನ್ನು ‘ಉದ್ಯಮ’ ವ್ಯಾಖ್ಯಾನದೊಳಗೆ ಸೇರಿಸಲಾಗಿತ್ತು. ಆದರೆ, ಉದ್ಯಮವನ್ನು ಸೀಮಿತವಾಗಿ ವ್ಯಾಖ್ಯಾನಿಸಿ ಅದನ್ನು ತಯಾರಿಕಾ ಘಟಕಗಳಿಗೆ ಮಾತ್ರ ಸೀಮಿತಗೊಳಿಸುವಂತೆ ಹಲವು ಪ್ರಕರಣಗಳಲ್ಲಿ ಹೇಳಲಾಯ್ತು. ಹೀಗಾಗಿ, ಬೆಂಗಳೂರು ನೀರು ಸರಬರಾಜು ಪ್ರಕರಣದ ಬಹುಮತದ ತೀರ್ಪು ಸರ್ವಾನುಮತದ ತೀರ್ಪು ಆಗಿರಲಿಲ್ಲ ೨೦೦೫ರಲ್ಲಿ ತಿಳಿಸಿದ್ದ ಸಾಂವಿಧಾನಿಕ ಪೀಠ, ಬೆಂಗಳೂರು ನೀರು ಸರಬರಾಜು ಪ್ರಕರಣದ ತೀರ್ಪನ್ನು ಮರುಪರಿಶೀಲಿಸುವಂತೆ ಅಭಿಪ್ರಾಯಪಟ್ಟಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net