ಅಕ್ರಮ ನುಸುಳುಕೋರರು ಕಾಂಗ್ರೆಸ್​ನ ವೋಟ್ ಬ್ಯಾಂಕ್ :ಎಸ್​ಐಆರ್​ ವಿರೋಧಿಸಿದ ವಿಪಕ್ಷಗಳ ವಿರುದ್ಧ ಗೃಹ ಸಚಿವ ಷಾ ವಾಗ್ದಾಳಿ | Amit Shah

Amit Sha
Published on

Amit Shah: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಶುಕ್ರವಾರ (ಆಗಸ್ಟ್ 8) ಆರೋಪಿಸಿದ್ದಾರೆ.

ಬಿಹಾರದ ಸೀತಾಮರ್ಹಿಯಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಷಾ, ಅಕ್ರಮ ವಲಸಿಗರು ಕಾಂಗ್ರೆಸ್ ಪಕ್ಷದ ಮತ ಬ್ಯಾಂಕ್ ಆಗಿರುವುದರಿಂದ ರಾಹುಲ್ ಗಾಂಧಿ ಸೇರಿದಂತೆ ಉಳಿದ ವಿಪಕ್ಷದ ನಾಯಕರುಗಳು ಎಸ್‌ಐಆರ್ (Special Intensive Revision) ವಿರೋಧಿಸುತ್ತಿದ್ದಾರೆ. ಬಿಹಾರದಲ್ಲಿ ನಡೆಯಲಿರುವ ಚುನಾವಣೆಗೆ ಮುನ್ನ  ನುಸುಳುಕೋರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬೇಕೇ ಅಥವಾ ಬೇಡವೇ? ಎನ್ನುವುದನ್ನು ರಾಹುಲ್ ಮೊದಲು ಸ್ಪಷ್ಟಪಡಿಸಬೇಕು ಎಂದು ಸವಾಲು ಹಾಕಿದರು ಎಂದು ಮೂಲಗಳು ತಿಳಿಸಿವೆ.

ವಿಶೇಷ ತೀವ್ರ ಪರಿಷ್ಕರಣೆ ಹೊಸ ಪ್ರಕ್ರಿಯೆಯಲ್ಲ, ಜವಾಹರಲಾಲ್ ನೆಹರು ಇದನ್ನು ಪ್ರಾರಂಭಿಸಿದರು ಮತ್ತು ಇದನ್ನು ಕೊನೆಯದಾಗಿ 2003 ರಲ್ಲಿ ನಡೆಸಲಾಗಿದೆ. ಇತ್ತೀಚೆಗೆ ಕಾಂಗ್ರೆಸ್ ಒಂದರ ನಂತರ ಒಂದರಂತೆ ಚುನಾವಣೆಗಳನ್ನು ಸೋಲುತ್ತಿದೆ, ಬಿಹಾರ ಚುನಾವಣೆಯಲ್ಲಿನ ಸೋಲನ್ನು ಮುಂಚಿತವಾಗಿಯೇ ಸಮರ್ಥಿಸಿಕೊಳ್ಳಲು ಈ ಪ್ರಯತ್ನ ನಡೆದಿದೆ ಎಂದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಎನ್‌ಡಿಎ ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಷಾ ವಿಶ್ವಾಸ ವ್ಯಕ್ತಪಡಿಸಿದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net