ತಲೆಯಲ್ಲಿ ಮೂರು, ಮುಖದಲ್ಲೊಂದು ಗುಂಡು ತಾಗಿ ಗಾಯವಾಗಿದ್ದರೂ ಆಕೆ 7 ಕಿ.ಮೀ. ಕಾರು ಚಲಾಯಿಸಿದ್ದು ಏಕೆ ಗೊತ್ತ..?

PUNJAB
Published on

ಚಂಡೀ​ಗಢ: ತಲೆಯಲ್ಲಿ ಮೂರು ಗುಂಡು ತಾಗಿದ ಗಾಯ ಮತ್ತು ಮುಖದಲ್ಲೊಂದು ಗುಂಡು ತಾಗಿದ ಗಾಯದಲ್ಲೇ ಆಕೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲು ಕಾರು ಚಲಾಯಿಸಿದ್ದು ಬರೋಬ್ಬರಿ 7 ಕಿಲೊಮೀಟರ್​!

ಭೂ ಕಬಳಿಕೆ ಪ್ರಕರಣದಲ್ಲಿ ಆಕೆಯ ಸಹೋದರ ಮತ್ತು ಸೋದರಳಿಯನ ಜತೆ ಆದ ಜಗಳದಲ್ಲಿ ಗಾಯಗೊಂಡು ಬಂದಾಕೆ 42 ವರ್ಷದ ಸುಮೀತ್​ ಕೌರ್​.

ಸುಮೀತ್ ಕೌರ್​ನ ಸೋದರಳಿಯ ತನ್ನ ಮತ್ತು ತಾಯಿ ಸುಖಬಿಂದರ್ ಕೌರ್ ಮೇಲೆ ಭೂ ವಿವಾದದ ಬಗ್ಗೆ ಕೋಪದಿಂದ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಸುಮೀತ್​ ಮತ್ತು ಆಕೆ ತಾಯಿ ಗಾಯಗೊಂಡಿದ್ದು ಪ್ರಾಣಾಪಾಯವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಪಂಜಾಬ್​ನ ಮುಕ್ತ್​ಸರ್​ ಎಂಬಲ್ಲಿ ಪ್ರಕರಣ ನಡೆದಿದ್ದು ಗಾಯಾಳುಗಳಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಅವರ ತಲೆಗೆ ಹೊಕ್ಕಿದ್ದ ಗುಂಡುಗಳನ್ನು ಹೊರತೆಗೆದಿದ್ದಾರೆ. ಇವರಿಗೆ ಗುಂಡು ಹಾರಿಸಿದ ಆರೋಪಿ 10ನೇ ತರಗತಿ ವಿದ್ಯಾರ್ಥಿ ಎಂದು ಸುಮೀತ್​ಕೌರ್​ ತಿಳಿಸಿದ್ದಾರೆ.

ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ ಸುಮೀತ್​ ಕೌರ್​ ತನ್ನ ಸೋದರನ ವಿರುದ್ಧ ದೂರು ದಾಖಲಿಸಿದ್ದಾಳೆ. ನನ್ನ ತಂದೆ ಸಾವಿನ ನಂತರ ನನಗೆ ಹಾಗೂ ನನ್ನ ತಾಯಿಗೆ ಸೇರಬೇಕಾದ 16 ಎಕರೆ ಭೂಮಿಯನ್ನು ಕಬಳಿಸಲು ಯತ್ನಿಸುತ್ತಿದ್ದಾರೆ. ಅಲ್ಲದೆ ಈ ಹಿಂದೆ ಕೂಡ ಅವರು ನಮ್ಮ ಮೇಲೆ ದಾಳಿ ನಡೆಸಿದ್ದರು ಎಂದಿದ್ದಾರೆ.

ಪೊಲೀಸರು ಬಾಲಕ ಮತ್ತು ಆತನ ತಂದೆ ಹರೀಂದರ್​ ಸಿಂಗ್​ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net