

ಬೆಂಗಳೂರು: ಕೋವಿಡ್ ಕಾರಣಕ್ಕೆ ಶಿಕ್ಷಕರನ್ನೇ ದೂರವಿಟ್ಟಿದ್ದ ಖಾಸಗಿ ಶಾಲೆಗಳನ್ನೀಗ ಶಿಕ್ಷಕರೇ ದೂರವಿಟ್ಟಿದ್ದಾರೆ. ಪರಿಣಾಮ ಶಾಲೆಗಳಲ್ಲಿ ಕಲಿಸುವವರೇ ಇಲ್ಲದಂತಾಗಿದ್ದಾರೆ. ಅಷ್ಟೇ ಅಲ್ಲದೆ, ಕೋವಿಡ್ ವೇಳೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರನ್ನು ನಡೆಸಿಕೊಂಡ ರೀತಿಗೂ ಬೇಸತ್ತಿದ್ದಾರೆ. 2022-23ನೇ ಸಾಲಿನಲ್ಲಿ ಖಾಸಗಿ ಶಾಲೆಗಳಿಗೆ ಶೇ.40 ಶಿಕ್ಷಕರ ಕೊರತೆ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಕರೊನಾ ಸಂದರ್ಭದಲ್ಲಿ ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ಮಾಡುತ್ತಿದ್ದು, ಈ ವೇಳೆ ಶಿಕ್ಷಕರಿಗೆ ಅರ್ಧ ಸಂಬಳ ನೀಡಿದ್ದವು. ಇನ್ನು ಕೆಲವು ಶಾಲೆಗಳಲ್ಲಿ ವೇತನ ನೀಡದೇ ಕೆಲಸದಿಂದ ವಜಾ ಮಾಡಿದ್ದರಿಂದ ಶಿಕ್ಷಕರು ಬೀದಿಗೆ ಬಂದಿದ್ದರು. ಈ ವೇಳೆ ಬೋಧನೆಯ ಸಹವಾಸವೇ ಬೇಡವೆಂದು ಬೇರೆ ಬೇರೆ ಕ್ಷೇತ್ರಗಳಲ್ಲಿ ಉದ್ಯೋಗ ಹುಡುಕಿಕೊಂಡಿದ್ದಾರೆ. ಸರ್ಕಾರವೂ ಕೂಡ ಖಾಸಗಿ ಶಾಲೆಗಳ ಶಿಕ್ಷಕರ ನೆರವಿಗೆ ಬರಲಿಲ್ಲ. ಆದ್ದರಿಂದ ಖಾಸಗಿ ಶಾಲೆಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಶಿಕ್ಷಕರ ಕೊರತೆ ಆಡಳಿತ ಮಂಡಳಿಗೆ ದೊಡ್ಡ ತಲೆನೋವಾಗಿದೆ.
ಹೊರ ರಾಜ್ಯದ ಶಿಕ್ಷಕರಿಗೆ ಮೊರೆ: ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್, ಸಮಾಜ ವಿಜ್ಞಾನ, ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಶಿಕ್ಷಕರ ಕೊರತೆ ಕಾಡುತ್ತಿದೆ. ಹೀಗಾಗಿ, ಹೊರ ರಾಜ್ಯಗಳಲ್ಲಿ ಡಿ.ಇಡಿ ಮತ್ತು ಬಿ.ಇಡಿ ಮುಗಿಸಿದ ಶಿಕ್ಷಕ ಅಭ್ಯರ್ಥಿಗಳನ್ನು ಹುಡುಕಾಟ ನಡೆಸಿದ್ದು, ಇದಕ್ಕಾಗಿ ಹೊರ ರಾಜ್ಯಗಳ ವೃತ್ತಿಪರ ಶಿಕ್ಷಣ ಸಂಸ್ಥೆಗಳು ಹಾಗೂ ಆನ್ಲೈನ್ ಉದ್ಯೋಗ ಆಪ್ಗಳ ಮೂಲಕ ನೇಮಕಾತಿ ಜಾಹೀರಾತು ನೀಡುತ್ತಿವೆ. ಕೆಲವು ಸಂಸ್ಥೆಗಳು ಮಣಿಪುರ, ತ್ರಿಪುರ, ನಾಗಾಲ್ಯಾಂಡ್, ಕೇರಳ, ಆಂಧ್ರಪ್ರದೇಶ, ಉತ್ತರಪ್ರದೇಶದಂತಹ ಭಾಗಗಳಿಂದ ಶಿಕ್ಷಕರನ್ನು ಕರೆಸಿಕೊಳ್ಳಲು ಸಿದ್ಧತೆ ಮಾಡಿಕೊಂಡಿವೆ. ಹೊರ ರಾಜ್ಯದ ಶಿಕ್ಷಕ ಅಭ್ಯರ್ಥಿಗಳಿಗೆ ವಸತಿ, ವೇತನ ಹಾಗೂ ಭದ್ರತೆ ನೀಡುವುದಾಗಿ ತಿಳಿಸುತ್ತಿದ್ದು, ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ ಕೊಡಲಾಗುತ್ತಿದೆ.
ಉದ್ಯೋಗಕ್ಕೆ ಸಿದ್ಧತೆ: ಬಿಇಡಿ ವ್ಯಅಸಂಗ ಮಾಡಿ, ಟಿಇಟಿಯಲ್ಲಿ ಅರ್ಹತೆ ಗಳಿಸಿದ ಅಭ್ಯರ್ಥಿಗಳು ಕಳೆದ ನಾಲ್ಕು ವರ್ಷಗಳಿಂದ ಸರ್ಕಾರದ ನೇಮಕಾತಿಯನ್ನೇ ಕಾಯುತ್ತಿದ್ದರು. ಅಧಿಸೂಚನೆ ಹೊರಬೀಳು
ತ್ತಿದ್ದಂತೆ ನೇಮಕಾತಿ ಪರೀಕ್ಷೆಗೆ ಅಭ್ಯಾಸ ಮಾಡಲು ಮುಂದಾಗಿದ್ದಾರೆ. ಈ ಪರೀಕ್ಷೆ ಮುಗಿಯುವವರೆಗೆ ಖಾಸಗಿ ಶಾಲೆಗಳ ಸಂಕಷ್ಟ ನೀಗುವಂತೆ ಕಾಣುತ್ತಿಲ್ಲ. ಹೀಗಾಗಿ, ಖಾಸಗಿ ಶಾಲೆಗಳಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕೆಲಸ ಮಾಡಲು ಕರೆ ಮಾಡಿದರೂ ಶೇ.50ಕ್ಕೂ ಅಧಿಕ ಅಭ್ಯರ್ಥಿಗಳು ಶಾಲೆಗೆ ಬರುವುದಾಗಿ ಒಪ್ಪಿಕೊಳ್ಳುತ್ತಿಲ್ಲ. ಜತೆಗೆ, ಶಿಕ್ಷಕರ ನೇಮಕಾತಿಗೆ ವಯಸ್ಸು ಮೀರಿದವರು ಗ್ರಾಮೀಣ ಭಾಗದಲ್ಲಿ ಹೊಲ-ಗದ್ದೆ ಸೇರಿ ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಿವಿಧ ವ್ಯಾಪಾರ ಉದ್ಯಮ, ಟ್ಯೂಷನ್ ಸೇರಿ ಅನ್ಯ ಉದ್ಯೋಗಗಳಿಂದ ಆದಾಯದ ಮೂಲ ಕಂಡುಕೊಂಡಿದ್ದು, ಶಿಕ್ಷಣ ಕ್ಷೇತ್ರವೇ ಬೇಡ ಎನ್ನುತ್ತಿದ್ದಾರೆ.
ರಾಜ್ಯದ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರ ಕೊರತೆ ಉಂಟಾಗಲು ಸರ್ಕಾರವೇ ನೇರ ಕಾರಣವಾಗಿದೆ. ಕೋವಿಡ್ ವೇಳೆ ಲಾಕ್ಡೌನ್ ಮಾಡಿದ್ದು, ಮಕ್ಕಳಿಗೆ ಶಾಲಾ ಶುಲ್ಕ ಕಟ್ಟದಂತೆ ತಡೆದಿದ್ದು ಹಾಗೂ ಶಿಕ್ಷಕರಿಗೆ ನೆರವು ನೀಡಲು ಹಿಂದೇಟು ಹಾಕಿದ್ದರ ಪರಿಣಾಮ ಖಾಸಗಿ ಶಾಲೆಗಳ ಮೇಲೆ ಬೀರುತ್ತಿದೆ. ಹೀಗಾಗಿ, ಹೊರ ರಾಜ್ಯಗಳಲ್ಲಿ ಶಿಕ್ಷಕರಿಗೆ ಹುಡುಕಾಟ ಮಾಡಲಾಗುತ್ತಿದೆ. | ಲೋಕೇಶ್ ತಾಳಿಕಟ್ಟೆ ರುಪ್ಸಾ ಅಧ್ಯಕ್ಷ
ಸರ್ಕಾರದ ನೀತಿಯಿಂದ ಸಮಸ್ಯೆ: ಕೋವಿಡ್ ವೇಳೆ ಖಾಸಗಿ ಶಾಲೆ ಶಿಕ್ಷಕರಿಗೆ ಸರ್ಕಾರ ಯಾವುದೇ ಸಹಾಯ ಮಾಡಲಿಲ್ಲ. ಇದರ ಪರಿಣಾಮವನ್ನು ಈಗ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ಶೇ.50 ಶಿಕ್ಷಕರ ಕೊರತೆ ಇದ್ದರೂ ನೇಮಕಾತಿ ಮಾಡುವ ಭರವಸೆ ಮುಂದಿಟ್ಟು ಮಕ್ಕಳ ಭವಿಷ್ಯದ ಮೇಲೆ ಕಲ್ಲು ಹಾಕಲಾಗುತ್ತಿದೆ. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಕಾರಣಕ್ಕಾಗಿ ಶೇ.100 ಶಿಕ್ಷಕರ ಹಾಜರಾತಿ ಅಗತ್ಯವಾಗಿದೆ. ಕೋವಿಡ್ ವೇಳೆ ಸರ್ಕಾರ ತೆಗೆದುಕೊಂಡ ಇಬ್ಬಗೆ ನೀತಿಯಿಂದಾಗಿ ಖಾಸಗಿ ಶಾಲೆಗಳು ಈಗ ಶಿಕ್ಷಕರ ಸಮಸ್ಯೆ ಎದುರಿಸುತ್ತಿವೆ ಎಂದು ಕರ್ನಾಟಕ ನೊಂದಾಯಿತ ಏಕೀಕೃತ ಖಾಸಗಿ ಶಾಲೆಗಳ ನಿರ್ವಹಣಾ ಸಂಘ (ರುಪ್ಸಾ) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾಹಿತಿ ನೀಡುತ್ತಾರೆ.