ಸರ್ಕಾರಿ ಶಾಲೆಗಳಲ್ಲಿ 61,525 ಶಿಕ್ಷಕರ ಕೊರತೆ: ಅತಿಥಿ ಶಿಕ್ಷಕರ ನೇಮಿಸಿಯೂ ಇನ್ನೆಷ್ಟು ಕೊರತೆ ಗೊತ್ತಾ?

Teacher teaching students in the classroom scene
Teacher teaching students in the classroom scene illustration
Published on

ಎನ್.ಎಲ್. ಶಿವಮಾದು

ಬೆಂಗಳೂರು: ರಾಜ್ಯದಲ್ಲಿ 2025-26ನೇ ಶೈಕ್ಷಣಿಕ ಸಾಲಿನ ತರಗತಿಗಳು ಆರಂಭವಾಗಲು ಕೆಲವೇ ದಿನಗಳು ಬಾಕಿ ಇವೆ. ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆ ದತ್ತಾಂಶಗಳ ಪ್ರಕಾರ ಬರೋಬ್ಬರಿ 61,525 ಶಿಕ್ಷಕರ ಹುದ್ದೆಗಳು ಖಾಲಿ ಇವೆ.

ಪರಿಣಾಮ, ಸರ್ಕಾರಿ ಶಾಲೆ ಮಕ್ಕಳ ಕಲಿಕೆ ಮತ್ತು ಲಿತಾಂಶದ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರುತ್ತಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಅತಿಥಿ ಶಿಕ್ಷಕರನ್ನೇ ನೆಚ್ಚಿಕೊಂಡು ಶಾಲೆಗಳನ್ನು ನಡೆಸುತ್ತಿದೆ.

ಒಂದೆಡೆ ಶಿಕ್ಷಕರ ಹುದ್ದೆ ಖಾಲಿ ಇದ್ದು, ಮತ್ತೊಂದೆಡೆ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಅರ್ಹತೆ ಪಡೆದಿರುವ 1.5 ಲಕ್ಷ ಮಂದಿ ಶಿಕ್ಷಕರ ನೇಮಕಾತಿ ಆದೇಶಕ್ಕಾಗಿ ಕಾಯುತ್ತಿದ್ದಾರೆ. ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ಅಧಿಸೂಚನೆ ಹೊರಡಿಸಿ ಮೂರು ವರ್ಷಗಳಾಗಿವೆ. ಕಾಂಗ್ರೆಸ್ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿವೆ. ಇಲ್ಲಿಯವರೆಗೂ ಶಿಕ್ಷಕ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಿಲ್ಲ. ಹಿಂದಿನ ಸರ್ಕಾರವು 15 ಸಾವಿರ ಶಿಕ್ಷಕರ ನೇಮಕಾತಿ ಆದೇಶ ಹೊರಡಿಸಿತ್ತು. ಇದರಲ್ಲಿ 13,352 ಮಂದಿ ಆಯ್ಕೆಯಾಗಿದ್ದರು. 12,141 ಮಂದಿಗೆ ನೇಮಕಾತಿ ಆದೇಶ ಪತ್ರ ನೀಡಲಾಗಿದೆ. ಉಳಿದ ಒಂದು ಸಾವಿರಕ್ಕೂ ಹೆಚ್ಚಿನ ಮಂದಿ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಅವರು ಆಯ್ಕೆಯಾಗಿದ್ದರೂ ಪ್ರಯೋಜನ ಇಲ್ಲದಂತಾಗಿದೆ.

61,525 ಸಾವಿರ ಶಿಕ್ಷಕರ ಹುದ್ದೆ ಖಾಲಿ:

ರಾಜ್ಯದಲ್ಲಿ 41,905 ಪ್ರಾಥಮಿಕ ಮತ್ತು 4,871 ಪ್ರೌಢ ಶಾಲೆ ಸೇರಿ ಒಟ್ಟು 46,776 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರಾಥಮಿಕ ಶಾಲೆಗಳಿಗೆ 1,88,531 ಹುದ್ದೆಗಳು ಮಂಜೂರಾಗಿದ್ದು, 1,38,802 ಮಂದಿ ಕಾರ್ಯ ನಿರ್ವಹಿಸುತ್ತಿದ್ದು, 49,729 ಹುದ್ದೆಗಳು ಖಾಲಿ ಇವೆ. ಹಾಗೆಯೇ ಪ್ರೌಢ ಶಾಲೆ ವಿಭಾಗದಲ್ಲಿ 44,406 ಹುದ್ದೆಗಳು ಮಂಜೂರಾಗಿದ್ದು, 32,610 ಮಂದಿ ಕಾರ್ಯ ನಿರ್ವಹಿಸುತ್ತಿದ್ದು, 11,796 ಹುದ್ದೆಗಳು ಖಾಲಿ ಇವೆ. ಒಟ್ಟು 61,525 ಶಿಕ್ಷಕರ ಹುದ್ದೆಗಳು ಖಾಲಿ ಇವೆ.

ಅತಿಥಿ ಶಿಕ್ಷಕರು ಬಿಟ್ರೂ 19 ಸಾವಿರ ಖಾಲಿ:

ಕಾಯಂ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ಶಿಕ್ಷಣ ಇಲಾಖೆಯು ಕಳೆದ ವರ್ಷ ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿ ಒಟ್ಟು 43 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿತ್ತು. ಅದರ ಹೊರತಾಗಿಯೂ ಸುಮಾರು 19 ಸಾವಿರ ಹುದ್ದೆಗಳು ಖಾಲಿ ಉಳಿದಿವೆ.

ಎಸ್ಸೆಸ್ಸೆಲ್ಸಿ ಲಿತಾಂಶದಲ್ಲಿ ಹಿಂದುಳಿದ ಸರ್ಕಾರಿ ಶಾಲೆ:

ಶಾಲಾವಾರು ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಶೇ.75.59 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಸರ್ಕಾರಿ ಶಾಲೆಗಳಲ್ಲಿ ಶೇ.62.7, ಅನುದಾನಿತ ಶಾಲೆಗಳಲ್ಲಿ ಶೇ.58.97ರಷ್ಟು ಮಕ್ಕಳು ತೇರ್ಗಡೆಹೊಂದಿದ್ದಾರೆ. ಶಿಕ್ಷಕರ ಹುದ್ದೆಗಳು ಖಾಲಿ ಇರುವ ಕಾರಣ ಸರ್ಕಾರಿ ಶಾಲೆಗಳಲ್ಲಿ ಕಲಿಕೆ ಮೇಲೆಯೂ ಪರಿಣಾಮ ಬೀರುತ್ತಿದೆ.

5,539 ಶಾಲೆಗಳಲ್ಲಿ ಏಕ ಶಿಕ್ಷಕ:

ಇನ್ನು ಗ್ರಾಮೀಣ ಭಾಗದ ಪ್ರಾಥಮಿಕ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಇರುವುದರಿಂದ ಬುನಾದಿ ಹಂತದ ಕಲಿಕೆಯಲ್ಲಿಯೂ ಮಕ್ಕಳು ಹಿಂದುಳಿಯುತ್ತಿದ್ದಾರೆ. 5,539 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಏಕ ಶಿಕ್ಷಕರಿದ್ದಾರೆ. ಗುಣಮಟ್ಟದ ಕಲಿಕೆಯಾಗದ ಕಾರಣ ಅಲ್ಲಿಯೂ ಸರ್ಕಾರಿ ಶಾಲೆಗಳು ವಿಲವಾಗುತ್ತಿವೆ. ಪಾಲಕರು ಅನಿವಾರ್ಯವಾಗಿ ಖಾಸಗಿ ಶಾಲೆಗಳತ್ತ ಮುಖ ಮಾಡುವಂತಾಗಿದೆ.

ಕಲ್ಯಾಣ ಕರ್ನಾಟಕ ಪರಿಸ್ಥಿತಿ ಚಿಂತಾಜನಕ

ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಪರಿಸ್ಥಿತಿ ಹೀನಾಯವಾಗಿದೆ. ಮೂರನೇ ಒಂದು ಭಾಗದಷ್ಟು ಶಿಕ್ಷಕರ ಖಾಲಿ ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಇವೆ. ಅದರಲ್ಲಿಯೂ ರಾಯಚೂರಿನಲ್ಲಿ 5,401 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಒಟ್ಟು ಏಳು ಜಿಲ್ಲೆಗಳಿಂದ 20,875 ಹುದ್ದೆಗಳು ಖಾಲಿ ಇವೆ.

ಈ ಬಾರಿಯ ಎಸ್‌ಎಸ್‌ಎಲ್‌ಸಿ ಲಿತಾಂಶದಲ್ಲಿ ಎಲ್ಲ ಜಿಲ್ಲೆಗಳು ಬಹುತೇಕ ಕೊನೇ ಸ್ಥಾನದಲ್ಲಿವೆ. ವಿಜಯನಗರ 19ನೇ ಹೊರತುಪಡಿಸಿದರೆ ಬಳ್ಳಾರಿ 29, ಕೊಪ್ಪಳ 30, ಬೀದರ್ 31, ರಾಯಚೂರು 32, ಯಾದಗಿರಿ 33 ಮತ್ತು ಕಲಬುರಗಿ 35ನೇ ಸ್ಥಾನ ಪಡೆದಿದೆ. ವಿಜಯನಗರ ಜಿಲ್ಲೆ ಶೇ.67.62 ಗರಿಷ್ಠ ಲಿತಾಂಶವಾಗಿದ್ದರೆ, ಕಲಬುರಗಿ ಶೇ.42.43 ಕನಿಷ್ಠ ಲಿತಾಂಶವಾಗಿದೆ.

ರಾಯಚೂರಿನಲ್ಲಿಯೇ ಹೆಚ್ಚು ಹುದ್ದೆ ಖಾಲಿ

ಇಡೀ ರಾಜ್ಯವಾರು ಹೋಲಿಸಿದಾಗ ರಾಯಚೂರಿನಲ್ಲಿಯೇ ಅತಿ ಹೆಚ್ಚು ಖಾಲಿ ಹುದ್ದೆಗಳು ಇರುವ ಜಿಲ್ಲೆಯಾಗಿದೆ. ಪ್ರಾಥಮಿಕ ಶಾಲೆಯಲ್ಲಿ 4,342 ಮತ್ತು ಪ್ರೌಢಶಾಲೆಯಲ್ಲಿ 1,040 ಸೇರಿ ಒಟ್ಟು 5,401 ಹುದ್ದೆಗಳು ಖಾಲಿ ಇವೆ.

ರಾಜ್ಯದಲ್ಲಿ ಒಳ ಮೀಸಲಾತಿ ಸಮೀಕ್ಷೆ ನಡೆಯುತ್ತಿದೆ. ವರದಿ ಜಾರಿಯಾದ ಬಳಿಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. - ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net