ಸಂಪಾದಕೀಯ | ಬೆಚ್ಚಿಬೀಳಿಸುವ ಭ್ರಷ್ಟಾಚಾರ

ವಿಜಯವಾಣಿ (17)
Published on

ರಾಜ್ಯದ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರ ಬೆಚ್ಚಿಬೀಳಿಸುವಂತಿದೆ. ಅಬಕಾರಿ ಉಪ ಆಯುಕ್ತರು, ಸೂಪರಿಟೆಂಡೆಂಟ್, ಡೆಪ್ಯೂಟಿ ಸೂಪರಿಟೆಂಡೆಂಟ್, ಅಬಕಾರಿ ಅಧೀಕ್ಷಕ, ಅಬಕಾರಿ ನಿರೀಕ್ಷಕ ಸೇರಿ ವಿವಿಧ ವೃಂದದ ಅಧಿಕಾರಿಗಳ ವರ್ಗಾವಣೆಗೆ ಸುಮಾರು 200 ಕೋಟಿ ರೂ. ಲಂಚ, ಮದ್ಯದಂಗಡಿಗಳಿಂದ ‘ಮಂಥ್ಲಿ ಮನಿ’ ಹೆಸರಿನಲ್ಲಿ ನಿರಂತರ ವಸೂಲಿ, ಲೈಸೆನ್ಸ್ ನೀಡಿಕೆ-ನವೀಕರಣಕ್ಕೂ ಹಣ... ಮುಂತಾದ ಆರೋಪಗಳು ಅಬಕಾರಿ ಇಲಾಖೆಯ ಮುಖಕ್ಕೆ ಮಸಿ ಬಳಿಯುವಂತಿವೆ. ಇಲಾಖೆ ಅದೆಷ್ಟು ಹದಗೆಟ್ಟು ಹೋಗಿದೆ ಎಂಬುದಕ್ಕೆ ಪ್ರತ್ಯೇಕ ನಿದರ್ಶನ ಬೇಕಿಲ್ಲ. ಈ ವಿಷಯ ಈಗಾಗಲೇ ರಾಜ್ಯಪಾಲರ ಅಂಗಳಕ್ಕೂ ತಲುಪಿದೆ.

ಇಲಾಖೆಯಲ್ಲಿ ನಡೆಯುತ್ತಿರುವ ನಿಯಮಬಾಹಿರ ವರ್ಗಾವಣೆ ಬಗ್ಗೆಯೂ ಈ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಣ ನೀಡದೆ ಇಲಾಖೆಯಲ್ಲಿ ಯಾವುದೇ ಬಗೆಯ ಕೆಲಸಗಳು ಆಗುವುದಿಲ್ಲ ಎಂಬ ಹೀನಾಯ ಪರಿಸ್ಥಿತಿ ಸೃಷ್ಟಿಯಾಗಿರುವುದು ಆಡಳಿತ ವೈಫಲ್ಯಕ್ಕೆ ಸಾಕ್ಷಿ. ಹಣ ಕೊಡದಿದ್ದರೆ ಅನಗತ್ಯ ಕಿರುಕುಳ ನೀಡಲಾಗುತ್ತದೆ ಎಂಬ ಆರೋಪ ನಿಜಕ್ಕೂ ಗಂಭೀರವಾದದ್ದು. ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಹೇಳುವ ಪ್ರಕಾರ, ಈ ಪ್ರಕರಣಗಳಲ್ಲಿ ಸ್ವತಃ ಅಬಕಾರಿ ಸಚಿವರು, ಅವರ ಕುಟುಂಬ ಸದಸ್ಯರು ಮತ್ತು ಬೆಂಬಲಿಗರದೇ ಕೈವಾಡ ಇದೆ. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ವಜಾ ಮಾಡುವಂತೆ ಪಟ್ಟು ಹಿಡಿದಿರುವ ಮದ್ಯ ಮಾರಾಟಗಾರರ ಸಂಘವು ಬೇಡಿಕೆ ಈಡೇರದಿದ್ದಲ್ಲಿ ನವೆಂಬರ್ 20ರಿಂದ ಮದ್ಯ ಮಾರಾಟ ಬಂದ್ ಮಾಡಲು ನಿರ್ಧರಿಸಿದೆ.

ಇಲಾಖೆ ಅಕ್ರಮಗಳ ಬಗ್ಗೆ ಮುಖ್ಯಮಂತ್ರಿ, ಸಚಿವರು, ಆಯುಕ್ತರ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಸಂಘವು ತನ್ನ ಪತ್ರದಲ್ಲಿ ತಿಳಿಸಿದೆ. ಅಬಕಾರಿ ಸಚಿವರನ್ನು ವಜಾಗೊಳಿಸುವಂತೆ ಪ್ರತಿಪಕ್ಷ ಬಿಜೆಪಿ ನಾಯಕರು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ. ಅಲ್ಲದೆ, ‘ಮದ್ಯ ಮಾರಾಟಗಾರರ ಸಂಘವು ಮಾಡಿರುವ ಆರೋಪ ಅತ್ಯಂತ ಗಂಭೀರವಾಗಿದೆ. ಈ ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಬೇಕು’ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ. ಆಡಳಿತ ಸುಧಾರಣೆಯ ಭರವಸೆಗಳನ್ನು ನೀಡುವ ಸರ್ಕಾರ ಪ್ರಮುಖ ಇಲಾಖೆಗಳಲ್ಲಿನ ಭ್ರಷ್ಟಾಚಾರವನ್ನು ಕಡೆಗಣಿಸುವುದು ಏಕೆ? ವರ್ಗಾವಣೆ ಅಥವಾ ಸ್ಥಳ ನಿಯೋಜನೆಗೆ ಲಂಚ ಪಡೆಯುವ ಚಾಳಿ ಅಬಕಾರಿ ಇಲಾಖೆಗೆ ಮಾತ್ರ ಸೀಮಿತವಾಗಿಲ್ಲ ಎಂಬುದು ಗಮನಿಸಬೇಕಾದ ಅಂಶ.

ಸರ್ಕಾರಿ ಇಲಾಖೆ, ಕಚೇರಿಗಳಲ್ಲಿ ಲಂಚದ ಹಾವಳಿ ತಗ್ಗಿಲ್ಲ ಎಂಬುದಕ್ಕೆ ಹೀಗೆ ಆಗಾಗ ಬೆಳಕಿಗೆ ಬರುವ ಪ್ರಕರಣಗಳು ಸಾಕ್ಷಿ ಒದಗಿಸುತ್ತಲೇ ಇವೆ. ಆದರೂ, ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ. ಭ್ರಷ್ಟಾಚಾರದ ವಿರುದ್ಧ ಕಠಿಣ, ದಿಟ್ಟ ನಿಲುವುಗಳನ್ನು ತೆಗೆದುಕೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿರುವುದರ ಕಾರಣದಿಂದಲೇ ಪ್ರಮುಖ ಇಲಾಖೆಗಳು ಲಂಚಾವತಾರದ ತಾಣಗಳಾಗಿ ಬದಲಾಗಿವೆ. ಭ್ರಷ್ಟಾಚಾರದಲ್ಲಿ ತೊಡಗಿರುವವರಿಗೆ ವ್ಯವಸ್ಥೆ ಮತ್ತು ಕಾನೂನಿನ ಬಗ್ಗೆ ಯಾವುದೇ ಭಯ ಇಲ್ಲವೆ ಎಂಬ ಪ್ರಶ್ನೆಯೂ ಕಾಡುತ್ತದೆ. ಈ ಮಧ್ಯೆ, ‘ಯಾವುದೇ ಅಧಿಕಾರಿಗಳನ್ನು ನಾನು ವರ್ಗ ಮಾಡಿಲ್ಲ, ಆರೋಪ ನಿರಾಧಾರ’ ಎಂದು ಅಬಕಾರಿ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಆದರೂ, ಸೂಕ್ತ ತನಿಖೆ ನಡೆದು ಸತ್ಯ ಹೊರಬರಬೇಕಾದದ್ದು ಅತ್ಯಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net