ವಿಜಯಪುರ ಮಹಾನಗರ ಪಾಲಿಕೆ ಸದಸ್ಯರಿಗೆ ಶಾಕ್, ಪ್ರಾದೇಶಿಕ ಆಯುಕ್ತರಿಂದ ಮಹತ್ವದ ಆದೇಶ, ಎಲ್ಲ ಸದಸ್ಯರ ಸದಸ್ಯತ್ವ ರದ್ದು !

MAHANAGARA PALIKE
ವಿಜಯಪುರ ಮಹಾನಗರ ಪಾಲಿಕೆ.
Published on

ವಿಜಯಪುರ: ನಿಗದಿತ ಅವಧಿಯಲ್ಲಿ ಆಸ್ತಿ ವಿವರ ಘೋಷಣೆ ಮಾಡದ ಮಹಾನಗರ ಪಾಲಿಕೆಯ ಎಲ್ಲ 35 ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಬೆಳಗಾವಿಯ ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟೆಣ್ಣವರ ಆದೇಶಿಸಿದ್ದಾರೆ.

ಮಹಾನಗರ ಪಾಲಿಕೆಯ 35 ಸದಸ್ಯರು ತಮ್ಮ ಹಾಗೂ ತಮ್ಮ ಕುಟುಂಬಸ್ಥರ ಚರಾಸ್ತಿ ಮತ್ತು ಸ್ಥಿರಾಸ್ತಿಗಳ ಘೋಷಣಾ ಪತ್ರವನ್ನು ಸಲ್ಲಿಸಬೇಕಾಗಿತ್ತು. ಆದರೆ, ನಿಗದಿತ ಅವಧಿಯಲ್ಲಿ ಘೋಷಣಾ ಪತ್ರಮಾಣ ಪತ್ರ ಸಲ್ಲಿಸದ ಹಿನ್ನೆಲೆ ಮತ್ತು ನ್ಯಾಯಾಲಯದ ಆದೇಶದ ಮೇರೆಗೆ ಸದಸ್ಯರನ್ನು ಅನರ್ಹಗೊಳಿಸಿದ್ದಾಗಿ ಮಾ. 24 ರಂದು ಹೊರಡಿಸಿದ ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ.

ಆದೇಶದಲ್ಲಿ ಮತ್ತೇನಿದೆ?

ವಿಜಯಪುರ ಮಹಾನಗರ ಪಾಲಿಕೆಯ 35 ವಾರ್ಡ್‌ಗಳಿಗೆ 2022 ಅ. 28 ರಂದು ಸಾರ್ವತ್ರಿಕ ಚುನಾವಣೆ ನಡೆದಿತ್ತು. 2024 ಜ.9 ರಂದು ಪ್ರಥಮ ಸಾಮಾನ್ಯ ಸಭೆ (21ನೇ ಅವಧಿಯ ಮೇಯರ್-ಉಪಮೇಯರ್ ಚುನಾವಣೆ) ನಡೆದಿತ್ತು. ಆ ಪ್ರಕಾರ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನ ಮೆಹೇಜ್‌ಬಿನ್ ಅಬ್ದುಲ್‌ರಜಾಕ್ ಹೊರ್ತಿ ಹಾಗೂ ಉಪಮೇಯರ್ ಸ್ಥಾನಕ್ಕೆ ದಿನೇಶ ಹಳ್ಳಿ ಆಯ್ಕೆಯಾಗಿದ್ದರು. ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ 1976ರ ಕಲಂ 19ರ ಉಪ ಕಲಂ (1)ರಂತೆ ಎಲ್ಲ ಚುನಾಯಿತ ಸದಸ್ಯರು ತಮ್ಮ ಅವಧಿಯ ಪ್ರಾರಂಭವಾದ ತರುವಾಯ ಒಂದು ತಿಂಗಳು ಮೀರದಂತೆ ಅಂದರೆ 2024 ಫೆ.8ರೊಳಗಾಗಿ ತಾನು ಮತ್ತು ತನ್ನ ಹೆಂಡತಿ ಅಥವಾ ಗಂಡ ಮತ್ತು ಅವಲಂಬಿತ ಮಕ್ಕಳ ಒಡೆತನ ಹೊಂದಿರುವ ಎಲ್ಲ ಆಸ್ತಿಗಳನ್ನು ಘೋಷಣೆಯನ್ನು ಮಹಾಪೌರರಲ್ಲಿ ದಾಖಲು ಮಾಡಬೇಕಿತ್ತು. ಆದರೆ, ದಾಖಲು ಮಾಡದೇ ಇರುವ ಕಾರಣ ಸದಸ್ಯತ್ವ ನಿಂತು ಹೋಗಿದ್ದು, ವಿಚಾರಣೆ ವೇಳೆ ಅನರ್ಹತೆಗೆ ಒಳಗಾಗಿರುವುದರಿಂದ ಎಲ್ಲ 35ಸದಸ್ಯರನ್ನು ಅನರ್ಹ ಎಂದು ಆದೇಶಿಸಿದ್ದಾಗಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net