ನನ್ನ ತಂದೆಗೆ ಮೋಸ ಮಾಡಲಾಯ್ತು! ಆ ಚಿನ್ನದ ಸರದಿಂದ ಬಂದ ಹಣದಲ್ಲೇ...: ನಟಿ ಶೋಭಾ ಶೆಟ್ಟಿ | Shobha Shetty

ವಿಜಯವಾಣಿ (89)
Published on

Shobha Shetty: ಕನ್ನಡದ ಬಿಗ್​ಬಾಸ್​ ಸೀಸನ್​ 11 ಮತ್ತು ತೆಲುಗು ಬಿಗ್​ ಬಾಸ್​ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡ ನಟಿ ಶೋಭಾ ಶೆಟ್ಟಿ, ಕನ್ನಡ, ತಮಿಳು ಹಾಗೂ ತೆಲುಗು ಧಾರವಾಹಿಗಳಲ್ಲಿ ನಟಿಸಿ, ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಇತ್ತೀಚೆಗಷ್ಟೇ ತೆಲುಗಿನ ಪಾಡ್​ಕಾಸ್ಟ್ ಸಂದರ್ಶನವೊಂದರಲ್ಲಿ ತಮ್ಮ ಜೀವನ, ನಟನಾ ವೃತ್ತಿಗೆ ಸಂಬಂಧಿಸಿದಂತೆ ಮಾತನಾಡಿರುವ ಶೋಭಾ, ಹಲವು ಕುತೂಹಲಕಾರಿ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಕನ್ನಡ ಮತ್ತು ತೆಲುಗು ಧಾರಾವಾಹಿಗಳಿಂದ ಮನೆ ಮಾತಾದ ಶೋಭಾ ಶೆಟ್ಟಿ, ಕನ್ನಡದಲ್ಲಿ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇನ್ನು 'ಕಾರ್ತಿಕ ದೀಪಂ' ಹೆಸರಿನ ತೆಲುಗು ಧಾರಾವಾಹಿಯಲ್ಲಿ ಮೋನಿತಾ ಎಂಬ ನೆಗೆಟಿವ್​ ಪಾತ್ರದ ಮೂಲಕ ತೆಲುಗು ವೀಕ್ಷಕರಿಗೂ ಚಿರಪರಿಚಿತರಾಗಿದ್ದಾರೆ. ಪ್ರಸ್ತುತ, ಕೆಲವು ಮನರಂಜನಾ ಕಾರ್ಯಕ್ರಮ, ರಿಯಾಲಿಟಿ ಶೋಗಳಲ್ಲಿ ಬಿಜಿಯಾಗಿರುವ ಶೋಭಾ, ಯೂಟ್ಯೂಬ್ ಸಂದರ್ಶನದಲ್ಲಿ ತಮ್ಮ ಕುಟುಂಬ ಅನುಭವಿಸಿದ ಕಷ್ಟಗಳನ್ನು ನೆನೆದು ಭಾವುಕರಾಗಿದ್ದಾರೆ.

"ನನ್ನ ತಂದೆಗೆ ಯಾರೋ ಒಬ್ಬರು ವಂಚಿಸಿ, ಹಣ ದೋಚಿದರು. ಆಗ ನಾವು ಬೆಂಗಳೂರಿಗೆ ಬಂದೆವು. ಆಡಿಷನ್‌ಗೆ ಹೋಗಲು ನನ್ನ ಬಳಿ ಹಣವಿರಲಿಲ್ಲ. ನನ್ನ ತಾಯಿ ಬಳಿಯಿದ್ದ ಮಾಂಗಲ್ಯ ಸರವನ್ನೇ ಮಾರಿ ಬೆಂಗಳೂರಿನಲ್ಲಿ ಒಂದು ಮನೆಯನ್ನು ಅಡ್ವಾನ್ಸ್​ ಕೊಟ್ಟು ಬಾಡಿಗೆಗೆ ಪಡೆದೆವು​. ನಮ್ಮ ವಸ್ತುಗಳನ್ನೆಲ್ಲ ಅಲ್ಲಿಗೆ ಶಿಫ್ಟ್​ ಮಾಡಿಕೊಂಡ್ವಿ. ದಿನಸಿ ಸಾಮಾಗ್ರಿಗಳನ್ನು ಅದೇ ದುಡ್ಡಿನಲ್ಲಿ ತಂದೆವು. ನಾನು ಅಮ್ಮನ ಸರ ಮಾರಿದ ಹಣದಲ್ಲೇ ಆಡಿಷನ್‌ಗಳಿಗೆ ಹೋಗಿದ್ದೀನಿ. ಅಂದೇ ನಿರ್ಧರಿಸಿದೆ, ನನ್ನ ಸಂಪಾದನೆಯಲ್ಲಿ ಅಮ್ಮನಿಗೊಂದು ಚಿನ್ನದ ಸರವನ್ನು ಮಾಡಿಸಿಕೊಡಬೇಕು ಅಂತ" ಎಂದು ಶೋಭಾ ಹೇಳಿದ್ದಾರೆ.

"ಒಂದು ಹಂತದಲ್ಲಿ, ನಾನು ತೆಲುಗು, ತಮಿಳು ಮತ್ತು ಕನ್ನಡ ಇಂಡಸ್ಟ್ರಿಯಲ್ಲಿ ಬ್ರೇಕ್​ ತೆಗೆದುಕೊಳ್ಳದೆ ನಿರಂತರವಾಗಿ ಕೆಲಸ ಮಾಡಿದೆ. ಆ ಸಮಯದಲ್ಲಿ ನಾನು ತುಂಬ ಬಿಜಿಯಾಗಿದ್ದೆ. ನಾನು ಮತ್ತು ನನ್ನ ತಾಯಿ, ಅದೆಷ್ಟೋ ಸಮಯ ಏರ್​ಪೋರ್ಟ್​ನಲ್ಲಿ ಮತ್ತು ಪ್ರಯಾಣದ ವೇಳೆ ಮಲಗಿದ್ದೇವೆ. ನಾನು ಯಶಸ್ಸು ಕಂಡ ಬಳಿಕ ನನ್ನ ತಾಯಿಗೆ ಚಿನ್ನದ ಸರವನ್ನು ಮಾಡಿಸಿಕೊಟ್ಟೆ" ಎಂದು ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net