

ಬೆಂಗಳೂರು: ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವರಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.
ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಮನೇಕಾ ಗಾಂಧಿ, ಶೆಫಾಲಿ ವೈದ್ಯ, ದೇಬಶ್ರೀ, ಮೀನಾಕ್ಷಿ ಲೆಖಿ, ವನತಿ, ಡಿಎಂಕೆ ಕನಿಮೋಳಿ ಸೇರಿದಂತೆ ಹಲವರಿಗೆ ಉಡುಪಿ ಸೀರೆಗಳನ್ನು ಕರಂದ್ಲಾಜೆ ಗಿಫ್ಟ್ ಕೊಟ್ಟಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಸ್ಥಳೀಯವಾಗಿ ಉಡುಪಿ ಸೀರೆಗಳನ್ನು ಖರೀದಿಸಿದ ಸಂಸದೆ, ಮಹಿಳಾ ನಾಯಕಿಯರಿಗೆ ಉಡುಗೊರೆ ಕೊಟ್ಟು ಶುಭಕೋರಿದ್ದಾರೆ. ಆ ಮೂಲಕ ಉಡುಪಿ ಕೈಮಗ್ಗವನ್ನು ರಾಷ್ಟ್ರಮಟ್ಟದ ನಾಯಕಿಯರಿಗೂ ಮತ್ತೊಮ್ಮೆ ಪರಿಚಯಿಸುವ ಯತ್ನ ಮಾಡಿದ್ದಾರೆ. ಇನ್ನು ಸಂಸದೆ ಕೊಟ್ಟ ಸೀರೆಗೆ ಫಿದಾ ಆಗಿರುವ ಶೆಫಾಲಿ ವೈದ್ಯ ಟ್ವಿಟರ್ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕರಂದ್ಲಾಜೆ, ನಾನು ಕೊಟ್ಟ ಉಡುಪಿ ಸೀರೆಯನ್ನು ನಿಮಗೆ ಇಷ್ಟವಾಗಿದ್ದಕ್ಕೆ ಸಂತೋಷವಾಗಿದೆ! ಉಡುಪಿ ಕೃಷ್ಣ ದೇವರಿಗೂ ಶುಕ್ರವಾರದಂದು ಉಡುಪಿ ಸೀರೆ ಧರಿಸಿ ಲಕ್ಷ್ಮೀ ರೂಪದಲ್ಲಿ ಪೂಜಿಸುವುದನ್ನು ಕಂಡಿದ್ದೇವೆ. ಈ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಶ್ರೀ ಈಶಪ್ರಿಯ ತೀರ್ಥರು ಮಾತನಾಡಿದ್ದಾರೆ. ನಮ್ಮ ಕುಶಲಕರ್ಮಿಗಳಿಗೆ ಬೆಂಬಲ ನೀಡೋಣ ಎನ್ನುವ ಮೂಲಕ ಇದೆಲ್ಲವೂ ಸ್ಥಳೀಯ ಕೈಮಗ್ಗ ಉತ್ತೇಜನದ ಯತ್ನ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಇದೀಗ ಮತ್ತೆ ಉಡುಪಿ ಸೀರೆಗೆ ಡಿಮಾಂಡ್ ಬಂದಿದ್ದು, ಸಾಂಪ್ರದಾಯಿಕ ಹಬ್ಬದಲ್ಲೂ ಈ ಸೀರೆಯನ್ನುಟ್ಟು ಸಂಭ್ರಮಿಸಲು ಎಲ್ಲ ವಯೋಮಾನದ ನಾರಿಯರೂ ಸೈ ಎನ್ನುತ್ತಿದ್ದಾರೆ. ಇನ್ನು ಗೆಳತಿ, ಕುಟುಂಬದ ಮಹಿಳೆಯರಿಗೆ ಗಿಫ್ಟ್ ಕೊಡಬೇಕು ಎಂದಾದರೆ ಉಡುಪಿ ಸೀರೆಗೂ ಮನ್ನಣೆ ಸಿಗುತ್ತಿರುವುದು ಆಶಾದಾಯಕ.